ಕಾಂಗ್ರೆಸ್‌ನಿಂದ ಶ್ರೀಜನ್ ಸಂಘಟನ್

New Project (2)
Published on

ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

ನಾಯಕರ ಸ್ಥಾನ ಪಲ್ಲಟದಿಂದ ಪಕ್ಷದ ಮೇಲಾಗುವ ಹಾನಿ ತಪ್ಪಿಸಲು ದೂರಾಲೋಚನೆ ಮಾಡಿರುವ ಕಾಂಗ್ರೆಸ್ ‘ಸಂಘಟನ್ ಶ್ರೀಜನ್ ಅಭಿಯಾನ’ ಹೆಸರಿನಲ್ಲಿ ಜಿಲ್ಲಾ ಘಟಕ ಅಧ್ಯಕ್ಷರ (ಡಿಸಿಸಿ) ನೇಮಕಕ್ಕೆ ಚಾಲನೆ ನೀಡಿದೆ. ಈ ಮೂಲಕ ಜಿಲ್ಲಾಧ್ಯಕ್ಷರೊಂದಿಗೆ ಹೈಕಮಾಂಡ್ ನೇರ ಸಂಪರ್ಕ ಮತ್ತು ಪಕ್ಷದ ಬಲ ಹೆಚ್ಚಿಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ.

ಈ ಮೊದಲು ಸ್ಥಳೀಯ ಶಾಸಕರು, ಪಕ್ಷದ ಪ್ರಭಾವಿ ನಾಯಕರು ತಮಗೆ ಬೇಕಾದವರನ್ನು ಪಟ್ಟಕ್ಕೆ ಏರಿಸುತ್ತಿದ್ದರು. ಆದರೆ, ಇದೀಗ ಎಐಸಿಸಿ ಅಧಿನಾಯಕ ರಾಹುಲ್ ಗಾಂಧಿ ಅವರೇ ಡಿಸಿಸಿ ಅಧ್ಯಕ್ಷರ ನೇಮಕಕ್ಕೆ ಹೆಚ್ಚಿನ ಆಸಕ್ತಿ ವಹಿಸಿದ್ದಾರೆ.

ರಾಜ್ಯದ ಮಾಜಿ, ಹಾಲಿ ಸಂಸದರು, ಕೇಂದ್ರದ ಮಾಜಿ ಸಚಿವರು, ಶಾಸಕರು, ಸಚಿವರು, ವಿಧಾನ ಪರಿಷತ್ ಸದಸ್ಯರು ಮತ್ತು ಹಿರಿಯ ನಾಯಕರನ್ನು ವೀಕ್ಷಕರಾಗಿ ನಿಯೋಜನೆ ಮಾಡುತ್ತಿದ್ದಾರೆ. ವಿಶೇಷ ಅಂದರೆ ದಕ್ಷಿಣ ಭಾರತದ ಅದರಲ್ಲಿಯೂ ಕರ್ನಾಟಕದ ಮಾಜಿ ಸಂಸದ ಡಿ.ಕೆ.ಸುರೇಶ್, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಹಾಸನ ಸಂಸದ ಶ್ರೇಯಸ್ ಪಾಟೀಲ್, ಬಳ್ಳಾರಿ ಸಂಸದ ತುಕರಾಮ್, ಕೆಪಿಸಿಸಿ ಸಂಘಟನ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಸೇರಿ ಹಲವು ನಾಯಕರನ್ನು ಬಳಸಿಕೊಳ್ಳಲಾಗುತ್ತಿದೆ.

ಹೈಕಮಾಂಡ್‌ನಿಂದ ನಿಯೋಜಿತರಾದವರು ರಾಜ್ಯಕ್ಕೆ ಹೋಗಿ 10 ದಿನ ಅಲ್ಲಿಯೇ ಉಳಿದು ಸ್ಥಳೀಯ ಸಂಸದರು, ಶಾಸಕರು ಮತ್ತು ಹಿರಿಯ ನಾಯಕರ ಜತೆ ಸಭೆ ನಡೆಸಬೇಕು. ಜತೆಗೆ ಬ್ಲಾಕ್ ಅಧ್ಯಕ್ಷರು, ಕಾರ್ಯಕರ್ತರು, ಸಾಮಾಜಿಕ ಕಾರ್ಯಕರ್ತ, ಬುದ್ಧಿಜೀವಿಗಳ ಜತೆಗೆ ಅಭಿಪ್ರಾಯ ಸಂಗ್ರಹಿಸಿ ಡಿಸಿಸಿ ಅಧ್ಯಕ್ಷ ಸ್ಥಾನಕ್ಕೆ 6 ಮಂದಿಯ ಪಟ್ಟಿ ಪಡೆಯಬೇಕು. ಇದರಲ್ಲಿ ಎಲ್ಲ ಜಾತಿ, ಧರ್ಮದ ಮತ್ತು ಮಹಿಳಾ ಪ್ರತಿನಿಧಿಗಳು ಕಡ್ಡಾಯ.

ವೀಕ್ಷಕರಿಂದ ವರದಿ ಪಡೆದು ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್, ಆರು ಮಂದಿಯ ಪೈಕಿ ಒಬ್ಬರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡುತ್ತಾರೆ. ಉಳಿದ ಐವರನ್ನು ಸಂಘಟನೆಯಲ್ಲಿ ಸಕ್ರಿಯ ಮಾಡಿ ಮುಂದಿನ ಅವಧಿಯಲ್ಲಿ ಅವಕಾಶ ಕಲ್ಪಿಸಲು ನಿರ್ಧಾರ ಮಾಡಲಾಗಿದೆ.

ಸದ್ಯ ಒಡಿಶಾ, ಮಧ್ಯಪ್ರದೇಶ, ಹರಿಯಾಣ ನೇಮಕಾತಿ ಮುಗಿದಿದೆ. ರಾಜಸ್ಥಾನ, ಛತ್ತೀಸ್‌ಗಢ, ತೆಲಂಗಾಣಕ್ಕೆ ವೀಕ್ಷಕರ ನೇಮಕ ಮಾಡಿದ್ದು, ಅ.27ರ ಒಳಗಾಗಿ ವರದಿ ನೀಡುವಂತೆ ಸೂಚಿಸಲಾಗಿದೆ. ಮುಂದಿನ ಹಂತದಲ್ಲಿ ಕರ್ನಾಟಕಕ್ಕೂ ವೀಕ್ಷಕರು ಬರಲಿದ್ದಾರೆ. ಇದಾದ ಮೇಲೆ ಬ್ಲಾಕ್ ಮತ್ತು ವಾರ್ಡ್ ಅಧ್ಯಕ್ಷರ ನೇಮಕಾತಿ ನಡೆಯಲಿದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕರು ಮಾಹಿತಿ ನೀಡಿದ್ದಾರೆ.

ಚುನಾವಣೆ ವೇಳೆ ನಿರ್ಣಾಯಕ

ದೆಹಲಿಯ ಇಂದಿರಾ ಭವನದಲ್ಲಿ ಸಂಘಟನ್ ಶ್ರೀಜನ್ ಅಭಿಯಾನದ ವೀಕ್ಷಕರೊಂದಿಗೆ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸಭೆ ನಡೆಸಿ ಅಂತಿಮ ಮಾಡುತ್ತಿದ್ದಾರೆ. ಗ್ರಾಮ ಪಂಚಾಯ್ತಿಯಿಂದ ಲೋಕಸಭೆ ಚುನಾವಣೆವರೆಗೂ ಸ್ಪರ್ಧಾಕಾಂಕ್ಷಿಗಳ ಪಟ್ಟಿ ಅಂತಿಮ ಮಾಡುವಾಗ ಡಿಸಿಸಿ, ಬ್ಲಾಕ್ ಅಧ್ಯಕ್ಷರ ಅಭಿಪ್ರಾಯಕ್ಕೆ ಹೆಚ್ಚಿನ ಮೌಲ್ಯ ನೀಡಲಾಗುತ್ತದೆ. ಹಣ ಬಲ, ವಂಶಪರಂಪರೆ, ಪ್ರಭಾವಿಗಳ ಲಾಭಿಗೆ ಬ್ರೇಕ್ ಬೀಳಲಿದೆ. ಅಭ್ಯರ್ಥಿಗಳ ಮಾಹಿತಿ ಸಂಗ್ರಹಿಸಿ ಹೈಕಮಾಂಡ್ ನಿಖರ ಮಾಹಿತಿ ನೀಡಲಿದ್ದಾರೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಅಭ್ಯರ್ಥಿಗಳ ಆಯ್ಕೆಗೆ ಮಾರ್ಗಸೂಚಿ

-ಪಕ್ಷಕ್ಕೆ ಬಂದು ಎಷ್ಟು ವರ್ಷವಾಗಿದೆ, ಯಾವ ಜವಾಬ್ದಾರಿ ನಿರ್ವಹಿಸಲಾಗಿದೆ

-ಅಧ್ಯಕ್ಷ ಸ್ಥಾನಕ್ಕೆ ಯಾಕೇ ಆಯ್ಕೆ ಮಾಡಬೇಕು

-ಆಕಾಂಕ್ಷಿಯ ಸಕರಾತ್ಮಕ ಮತ್ತು ನಕಾರಾತ್ಮಕ ಅಂಶಗಳು

-ಎಷ್ಟು ಕೇಸ್‌ಗಳು ದಾಖಲಾಗಿವೆ, ಯಾವ ಕಾರಣಕ್ಕೆ

-ಅಧ್ಯಕ್ಷರು ಮಾಡಿದರೆ ನಿಮ್ಮ ಮುಂದಿರುವ ಯೋಜನೆ ಏನು

ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿ ಪಕ್ಷದಲ್ಲಿ ಸ್ಥಾನಮಾನ ನೀಡಬೇಕೆಂಬುದು ರಾಹುಲ್ ಗಾಂಧಿಯವರ ನಿರ್ಧಾರ. ಆದರಿಂದ ಸಂಘಟನ್ ಶ್ರೀಜನ್ ಅಭಿಯಾನ ಕೈಗೊಳ್ಳಲಾಗಿದೆ.

ಸಲೀಂ ಅಹ್ಮದ್, ವಿಧಾನ ಪರಿಷತ್ ಸರ್ಕಾರಿ ಮುಖ್ಯ ಸಚೇತಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net