

ಸೊರಬ: ದುಷ್ಟರ ಅಟ್ಟಹಾಸ ಹೆಚ್ಚಾಗಿ ಧರ್ಮಕ್ಕೆ ಅಪಾಯ ಎದುರಾದಾಗ, ಅದರ ರಕ್ಷಣೆಗೆ ವೀರಭದ್ರೇಶ್ವರ ದೇವರು ರುದ್ರರೂಪದಲ್ಲಿ ಈ ಭೂಮಿಯಲ್ಲಿ ಅವತರಿಸಿದ್ದಾನೆ. ಪ್ರತಿಯೊಬ್ಬರೂ ವೀರಭದ್ರೇಶ್ವರ ಸ್ವಾಮಿಯ ಒಕ್ಕಲುತನ ಹೊಂದಿ ಮನೆದೇವರಂತೆ ಪೂಜಿಸುತ್ತಿದ್ದಾರೆ ಎಂದು ಜಡೆ ಮಠದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.
ತಾಲೂಕಿನ ಉದ್ರಿ ಗ್ರಾಮದಲ್ಲಿ ಮಂಗಳವಾರ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯಿಂದ ಹಮ್ಮಿಕೊಂಡಿದ್ದ ಶ್ರೀ ವೀರಭದ್ರೇಶ್ವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ವೀರಭದ್ರೇಶ್ವರ ಸ್ವಾಮಿ ಬಗ್ಗೆ ಶ್ರದ್ಧೆ ಮತ್ತು ಭಕ್ತಿ ಇದ್ದರೆ ಭಕ್ತರ ಕಷ್ಟ, ಕಾರ್ಪಣ್ಯಗಳನ್ನು ಪರಿಹರಿಸುತ್ತಾನೆ. ವಿಭೂತಿ, ರುದ್ರಾಕ್ಷಿ ಧರಿಸಿ ವೀರಭದ್ರ ದೇವರ ಕೃಪೆಗೆ ಒಳಗಾಗಬೇಕು ಎಂದರು.
ಆಧುನಿಕ ಯುಗದಲ್ಲಿ ಬದುಕುತ್ತಿರುವ ನಾವು ನಮ್ಮ ಆಚಾರ, ವಿಚಾರಗಳನ್ನು ಮರೆತಿದ್ದೇವೆ. 12ನೇ ಶತಮಾನದಲ್ಲಿ ಧರ್ಮಕ್ಕೆ ಚ್ಯುತಿ ಬಂದಾಗ ಮಡಿವಾಳ ಮಾಚಿದೇವನಲ್ಲಿ ವೀರಭದ್ರನ ಅವತಾರ ಧರಿಸಿ ಧರ್ಮ ರಕ್ಷಣೆಗೆ ನಿಂತಿದ್ದಾನೆ ಎನ್ನುವುದು ಉಲ್ಲೇಖವಾಗಿದೆ. ಧರ್ಮದ ಅನುಸಾರ ನಡೆದಾಗ ವೀರಭದ್ರೇಶ್ವರ ದೇವರ ಅನುಗ್ರಹವಿರುತ್ತದೆ. ಶೀಲವಂತ ದೇವರಾದ ವೀರಭದ್ರೇಶ್ವರನ ದಯೆಗಾಗಿ ನಡೆಸುವ ಗುಗ್ಗಳ ಕಾರ್ಯಕ್ರಮ ಶ್ರೇಷ್ಠವಾಗಿದೆ. ಶ್ರದ್ಧಾಭಕ್ತಿಯಿಂದ ನಡೆದುಕೊಂಡರೆ ಭಕ್ತರ ಪ್ರೀತಿಗೆ ಪಾತ್ರವಾಗಲಿದ್ದಾನೆ ಎಂದು ತಿಳಿಸಿದರು.
ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ತಾಲೂಕು ಉಪಾಧ್ಯಕ್ಷ ವಿಜಯಕುಮಾರ್ ಮಾತನಾಡಿ, ಉದ್ರಿ ಗ್ರಾಮದಲ್ಲಿ ಪ್ರತಿ ವರ್ಷ ವೀರಭದ್ರೇಶ್ವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಶಿವನಿಗೆ ಕೋಪ ಬಂದಾಗ ಜನಿಸಿದವನೇ ಶ್ರೀ ವೀರಭದ್ರಸ್ವಾಮಿ. ಶಾಂತಿ ಸ್ಥಾಪನೆಗಾಗಿ ಜನ್ಮ ತಾಳಿದ್ದಾನೆ ಎಂದು ತಿಳಿಸಿದರು.
ವೀರಶೈವ ಲಿಂಗಾಯಿತ ಸಂಘಟನಾ ವೇದಿಕೆ ತಾಲೂಕು ಸಂಚಾಲಕ ನಾಗರಾಜ ಗೌಡ, ರವಿ ಗೌಡ, ಉದ್ರಿ ಘಟಕದ ಅಧ್ಯಕ್ಷ ಚಾಲುಕ್ಯ ಗೌಡ, ಕಾರ್ಯದರ್ಶಿ ದರ್ಶನ್ ಬಣಕಾರ್, ಡಾ. ಮಹೇಶ್, ಸುಭಾಷ್ ಚಂದ್ರಪ್ಪ, ಉದ್ರಿ ಗ್ರಾಮ ಸಮಿತಿ ಅಧ್ಯಕ್ಷ ಪ್ರಕಾಶ್,ದರ್ಶನ್, ಮನೋಜ್, ಅಣ್ಣಪ್ಪ ಗೌಡ, ಮುದ್ದಣ್ಣ ಗೌಳಿ, ಅನಸೂಯಮ್ಮ, ದೇಸಾಯಿ ಗೌಡ, ಗಿರೀಶ ಗೌಡ ಇದ್ದರು.