ಶ್ರೀ ವೀರಭದ್ರೇಶ್ವರ ಸ್ವಾಮಿಯಿಂದ ಭಕ್ತರಿಗೆ ಅಭಯ

sor
ಸೊರಬ ಮುರುಘಾ ಮಠದಲ್ಲಿ ಹಮ್ಮಿಕೊಂಡಿದ್ದ ವೀರಭದ್ರೇಶ್ವರ ಜಯಂತ್ಯುತ್ಸವದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿದರು. ಘನಬಸವ ಅಮರೇಶ್ವರ ಶ್ರೀಗಳು, ಶ್ರೀ ಮಹಾಂತ ಸ್ವಾಮೀಜಿ, ಶ್ರೀ ಸಿದ್ದೇಶ್ವರ ಸ್ವಾಮೀಜಿ, ಜೈಶೀಲ ಗೌಡ, ಬಿ.ಶಿವರಾಜ್, ದಯಾನಂದ ಗೌಡ ಇತರರಿದ್ದರು.
Published on

ಸೊರಬ: ವೀರಭದ್ರ ದೇವರು ಭಕ್ತಿ, ಮಡಿಗೆ ಆದ್ಯತೆ ನೀಡುವ ಭಕ್ತರಿಗೆ ಒಲಿದಿದ್ದಾನೆ. ದುಷ್ಟರಿಂದ ಸಮಾಜಕ್ಕೆ ಅಪಾಯ ಎದುರಾದಾಗ ಭದ್ರವಾಗಿ ರಕ್ಷಣೆಗೆ ನಿಲ್ಲುವ ವೀರ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಪಟ್ಟಣದ ಮುರುಘಾ ಮಠದ ಸಭಾಂಗಣದಲ್ಲಿ ಮಂಗಳವಾರ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಹಮ್ಮಿಕೊಂಡಿದ್ದ ವೀರಭದ್ರೇಶ್ವರ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಇಂದಿಗೂ ಶಾಂತಿಗಾಗಿ ಆಚರಿಸುವ ಗುಗ್ಗಳ ಕಾರ್ಯಕ್ರಮವನ್ನು ಕಟ್ಟುನಿಟ್ಟಾಗಿ ಆಚರಿಸಲಾಗುತ್ತಿದೆ. ವೀರಭದ್ರ ದೇವರ ಹೆಸರಿನಲ್ಲಿರುವ ಶಕ್ತಿ ಶ್ರೇಷ್ಠವಾದುದು. ಶಿಷ್ಟರ ರಕ್ಷಣೆಗೆ ಅವತಾರ ಪುರುಷನಾಗಿ ಅವತರಿಸುತ್ತಾನೆ ಎಂದರು.

ಸೊರಬ ಕ್ಷೇತ್ರದ ಜನರು ನನ್ನನ್ನು ಬೆಂಬಲಿಸಿ ಬೆಳೆಸಿದ್ದೀರಿ. ಜಿಲ್ಲೆಯ ಎಲ್ಲ ತಾಲೂಕುಗಳಿಗೂ ರೈಲ್ವೆ ಸಂಪರ್ಕ ಕಲ್ಪಿಸಲು ಪ್ರಯತ್ನ ನಡೆಸಲಾಗುತ್ತಿದೆ. ಕೆಲವೇ ವರ್ಷದಲ್ಲಿ ಸರ್ವೇ ಮುಗಿಸಿ ಜನರ ಸೇವೆಗೆ ಅರ್ಪಣೆ ಮಾಡಲು ಚಿಂತಿಸಲಾಗಿದೆ. ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಹಾಗೂ ಬೆಳೆ ವಿಮೆ ಪರಿಹಾರದ ಬಗ್ಗೆ ಗಮನ ಹರಿಸುವುದಾಗಿ ಭರವಸೆ ನೀಡಿದರು.

ವೀರಶೈವ ಲಿಂಗಾಯತ ಸಮಾಜ ದೊಡ್ಡ ಆಲದ ಮರವಿದ್ದಂತೆ. ಶೋಷಿತ ಸಮಾಜಗಳಿಗೆ ನೆರವು ನೀಡಿ ಮುಖ್ಯ ವಾಹಿನಿಗೆ ತರುವಲ್ಲಿ ಶ್ರಮಿಸುತ್ತಿದೆ. ಆದರೆ ಇಷ್ಟೊಂದು ಹೆಸರು ಹೊಂದಿರುವ ಸಮಾಜದಲ್ಲಿ ಉಪ ಪಂಗಡಗಳ ಮಧ್ಯೆ ಮನಸ್ತಾಪ ಉಂಟಾಗಿ ಮುಜುಗರ ಎದುರಿಸುತ್ತಿದ್ದೇವೆ. ಒಳಪಂಗಡ ಭೇದ ಮರೆತು ಜೀವನ ಮಾಡಬೇಕು ಎಂದರು.

ಎಂಎಲ್‌ಸಿ ಡಾ. ಧನಂಜಯ ಸರ್ಜಿ ಮಾತನಾಡಿ, ತ್ರಿವಿಧ ದಾಸೋಹದ ಪರಿಕಲ್ಪನೆ ಹುಟ್ಟಿಹಾಕಿದ ವೀರಶೈವ ಸಮಾಜವು ವೀರಭದ್ರ ದೇವರ ಆರಾಧನೆ ಮಾಡುತ್ತಿದೆ. ಕಷ್ಟ ಕಾಲದಲ್ಲಿ ಜನರ ಜತೆಗೆ ಹೆಜ್ಜೆ ಹಾಕುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದರು.

ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ತಾಲೂಕು ಅಧ್ಯಕ್ಷ ಪಂಚಾಕ್ಷರಪ್ಪ ಗೌಡ ಮಾತನಾಡಿ, ಸಮಾಜದ ಹಿರಿಯರು ನಮ್ಮ ಸಂಘಟನೆಗೆ ಸಲಹೆ, ಸಹಕಾರ ನೀಡಬೇಕು. ಸಮಾಜದ ಗುರುಗಳು ಹಾಗೂ ಸಂಘದ ಪದಾಧಿಕಾರಿಗಳು ಸಹ ಶಕ್ತಿಮೀರಿ ಸಹಕಾರ ನೀಡಿದ್ದಾರೆ ಎಂದು ತಿಳಿಸಿದರು.

ಜಡೆ ಸಂಸ್ಥಾನ ಹಾಗೂ ಸೊರಬ ಮುರುಘಾ ಮಠದ ಶ್ರೀ ಮಹಾಂತ ಸ್ವಾಮೀಜಿ, ನಿಪ್ಪಾಣಿ ವಿರಕ್ತ ಮಠದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪಟ್ಟಣದ ಕಾನುಕೇರಿ ಮಠದಿಂದ ಪ್ರಮುಖ ಬೀದಿಗಳಲ್ಲಿ ಶ್ರೀ ವೀರಭರ‌್ರೇಶ್ವರ ದೇವರ ಭಾವಚಿತ್ರದ ಮೆರವಣಿಗೆ ಮಾಡಲಾಯಿತು.

ಶಿವಮೊಗ್ಗ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಚನ್ನವೀರಪ್ಪ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಜೈಶೀಲ ಗೌಡ, ಜಿಲ್ಲಾ ವೀರಶೈವ ಲಿಂಗಾಯಿತ ವೇದಿಕೆ ಅಧ್ಯಕ್ಷ ಬಿ.ಶಿವರಾಜ್, ಶಿಮುಲ್ ನಿರ್ದೇಶಕ ದಯಾನಂದ ಗೌಡ, ಶಿವಮೊಗ್ಗ ಅಡಕೆ ಸಹಕಾರ ಮಂಡಳಿ ಅಧ್ಯಕ್ಷ ಸಿ.ಪಿ.ಈರೇಶ ಗೌಡ, ಸಂದೀಪ ಗೌಡ, ವಿಜಯಕುಮಾರ್, ಸಂದೀಪ ಯಲವಳ್ಳಿ, ಉಮೇಶ್ ಪಾಟೀಲ್, ಕುಸುಮಾ ಪಾಟೀಲ್, ಮಲ್ಲಿಕಾರ್ಜುನ ಗುತ್ತೇರ್, ಗೀತಾ ಮಲ್ಲಿಕಾರ್ಜುನ, ಪ್ರೇಮಾ ಬಂಕಸಾಣ, ವಿಜಯೇಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net