

ಕೊಪ್ಪ: ಆರ್ಯ ಮತ್ತು ದ್ರಾವಿಡರು ಭಾರತೀಯರೇ ಆಗಿದ್ದಾರೆ. ಆದರೆ ಬ್ರಿಟಿಷರು ಭಾರತವನ್ನು ಒಡೆಯುವ ಉದ್ದೇಶದಿಂದ ಆರ್ಯ ಮತ್ತು ದ್ರಾವಿಡರನ್ನು ಒಡೆದು ಭಾರತೀಯ ಸ್ವಾಭಿಮಾನಕ್ಕೆ ಕೈ ಹಾಕಿದರು ಎಂದು ಹರಿಹರಪುರ ಮಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಸೋಮವಾರ ಹರಿಹರಪುರ ಶ್ರೀಮಠದಲ್ಲಿ ಹಮ್ಮಿಕೊಂಡಿದ್ದ ಬ್ರಹ್ಮೋತ್ಸವದ ನಾಲ್ಕನೇ ದಿನದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, 18ನೇ ಶತಮಾನದಿಂದ ಆರ್ಯರು ಮಧ್ಯ ಪ್ರಾಚ್ಯದಿಂದ ಬಂದರು ಎಂಬ ಚರ್ಚೆಯಲ್ಲಿದೆ. ಆದರೆ ಆರ್ಯರು ಇಲ್ಲಿನ ಮೂಲ ನಿವಾಸಿಗಳು. ಹೊರಗಿನಿಂದ ಬಂದ ಬ್ರಿಟಿಷರು ಭಾರತನ್ನು ಕಬಳಿಸುವ ಉದ್ದೇಶದಿಂದ ನಮ್ಮಲ್ಲಿಯೇ ಒಡಕು ಹುಟ್ಟು ಹಾಕಿದರು. ಹಲವು ಬಾರಿ ಬ್ರಿಟಿಷರು ಆರ್ಯರ ಬಗ್ಗೆ ಸುಳ್ಳು ಹೇಳಿದ ಪರಿಣಾಮ ಇಂತಹ ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದರು.
ಬ್ರಿಟಿಷರು ಭಾರತ ಬಿಟ್ಟು ಹೋಗಿದ್ದಾರೆ. ಅವರು ಆರ್ಯರು ಮತ್ತು ದ್ರಾವಿಡರ ನಡುವೆ ಹೊಡೆದುಕೊಳ್ಳುವ ಹಾಗೆ ಮಾಡಿದರು. ಆದರೆ ಬ್ರಿಟಿಷರು ನಮ್ಮ ದೇಶದಲ್ಲಿ ಬಿಟ್ಟು ಹೋದ ವಿಷ ಬೀಜವನ್ನು ಇಟ್ಟುಕೊಂಡು ಭಾರತೀಯ ಸಂಸ್ಕೃತಿ ಮತ್ತು ನಮ್ಮ ಸಮಾಜವನ್ನು ಕೆಲವರು ಹತ್ತಿಕ್ಕುವ ಕಾರ್ಯ ನಡೆಯುತ್ತಿದೆ. ಈ ಬಗ್ಗೆ ಪ್ರತಿಯೊಬ್ಬರು ಜಾಗೃತರಾಗಬೇಕು ಎಂದು ಹೇಳಿದರು.
ತೀರ್ಥಹಳ್ಳಿ ಶ್ರೀ ಭೀಮನಕಟ್ಟೆ ಮಠದ ಶ್ರೀ ರಘುವರೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿ, ಜಾತಿ, ಮತಗಳಿಂದ ನಾವು ಸಂಕುಚಿತರಾಗಿದ್ದೇವೆ. ಮುಂದಿನ ಪೀಳಿಗೆ ಧೈರ್ಯವಾಗಿ ನಮ್ಮ ಆಚರಣೆಗಳನ್ನು ಮುಂದುವರಿಸಿಕೊಂಡು ಹೋಗಬೇಕಾಗಿದೆ ಎಂದರು. ಸಮಾಜ ತಿದ್ದುವ ದೊಡ್ಡ ಕಾರ್ಯವನ್ನು ಹರಿಹರಪುರ ಶ್ರೀಗಳು ಮಾಡುತ್ತಿದ್ದಾರೆ ಎಂದರು.
ಶ್ರೀ ನಾರಾಯಣ ಗುರು ಮಹಾಸಂಸ್ಥಾನದ ಶ್ರೀ ರೇಣುಕಾನಂದ ಸ್ವಾಮೀಜಿ ಮಾತನಾಡಿ, ಯತಿಗಳು ಪ್ರಮುಖವಾಗಿ ಹಿಂದು ಧರ್ಮವನ್ನು ಉಳಿಸಿ, ಬೆಳೆಸುವ ಕೆಲಸ ಮಾಡಬೇಕು. ಸಮಾಜದಲ್ಲಿ ನಾವೆಲ್ಲರೂ ಸಹ ಒಗ್ಗಟ್ಟಾಗಿ ಹಿಂದುಗಳಾಗಿ ಬಾಳಬೇಕು. ಸನಾತನ ಧರ್ಮವನ್ನು ಉಳಿಸಲು ಮುಂದಾಗಬೇಕು ಎಂದು ಹೇಳಿದರು.
ಬ್ರಹ್ಮೋತ್ಸವದ ನಿಮಿತ್ತ ಶ್ರೀಮಠದಲ್ಲಿ ಶ್ರೀಲಕ್ಷ್ಮೀನೃಸಿಂಹ ಮಹಾಯಾಗ, ಕಲಾಹೋಮ, ಅಭಿಷೇಕ, ಸಪ್ತಶತಿ ಪಾರಾಯಣ, ತುಲಸಿ ಅರ್ಚನೆ, ರಥೋತ್ಸವ ನಡೆಯಿತು. ಮಾತೆಯರಿಂದ ಕುಂಕುಮಾರ್ಚನೆ ಹಮ್ಮಿಕೊಳ್ಳಲಾಗಿತ್ತು. ಪತ್ರಕರ್ತ ಅನಿಲ್ ಕುಮಾರ್, ಸಮಾಜ ಸೇವಕರಾದ ಜಯವಂತ್ ಭಟ್, ಶ್ರೀಮಠದ ಆಡಳಿತಾಧಿಕಾರಿ ಬಿ.ಎಸ್.ರವಿಶಂಕರ್, ಶ್ರೀಗಳ ಆಪ್ತ ಕಾರ್ಯದರ್ಶಿ ರಘುನಾಥ ಶಾಸೀ ಇತರರಿದ್ದರು.