ವಚನಗಳಲ್ಲಿ ಮನಸ್ಸನ್ನು ಬೆಳಗುವ ಶಕ್ತಿಯಿದೆ; ಶ್ರೀಸಿದ್ಧಲಿಂಗ ಸ್ವಾಮೀಜಿ ಅಭಿಮತ

New Project
Published on

ಬೆಂಗಳೂರು: ಅಂತರಂಗ ಬಹಿರಂಗಗಳಲ್ಲಿರುವ ಕತ್ತಲೆಯನ್ನು ನಾಶಗೊಳಿಸಿ ತನು-ಮನವನ್ನು ಬೆಳಗುವ ಶಕ್ತಿ ಬಸವಾದಿ ಶರಣರ ವಚನಗಳಲ್ಲಿದೆ ಎಂದು ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅಭಿಪ್ರಾಯಿಸಿದ್ದಾರೆ. ವೀರಶೈವ ಲಿಂಗಾಯತ ಸಭಾ ಭವನದಲ್ಲಿ ಶ್ರೀಬಸವೇಶ್ವರ ಸೇವಾ ಸಮಿತಿ, ಅಕ್ಕ ಬಳಗ ಮಹಿಳಾ ಸಮಾಜ ಮತ್ತು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಬೆಂಗಳೂರು ಜಿಲ್ಲಾ ಘಟಕ ಸಂಯುಕ್ತವಾಗಿ ಆಯೋಜಿಸಿದ್ದ ಬಸವ ಜಯಂತಿ, ಅಕ್ಕಮಹಾದೇವಿ ಜಯಂತಿ ಹಾಗೂ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಬೆಳಕನ್ನು ಬಯಸುತ್ತಾರೆ.ಬೆಳಕು ಪಡೆದುಕೊಳ್ಳಲು ಕತ್ತಲನ್ನು ಹೊಡೆದೋಡಿಸಬೇಕು. ಬಹಿರಂಗದಲ್ಲಿರುವ ಕತ್ತಲೆಯನ್ನು ಹೊಡೆದೋಡಿಸಲು ಹಲವು ಉಪಕರಣಗಳಿವೆ. ಆದರೆ ಅಂತರಂಗದ ಕತ್ತಲೆಯನ್ನು ನಿವಾರಿಸಲು ಜ್ಞಾನದ ಅವಶ್ಯಕತೆ ಇದೆ. ಅಂತಹ ಜ್ಞಾನಾಮೃತದಿಂದ ತುಂಬಿದ ವಚನಗಳು ವ್ಯಕ್ತಿಯ ಬದುಕನ್ನು ಬೆಳಗುವ ದಾರಿದೀಪಗಳಾಗಿವೆ. ಜನಪದರು ಹೇಳುವ ಹಾಗೆ ಬಸವಣ್ಣ ಭೂಲೋಕವನ್ನು ಶಿವಲೋಕ ಮಾಡಲು ಬಂದ ಕಾರಣಿಕ ಪುರಷ. ಶಿವ ಎಂದರೆ ಜ್ಞಾನ. ಜನರ ಅಜ್ಞಾನವನ್ನು ನಿವಾರಿಸಿ ಮಾನವೀ ಮೌಲ್ಯವನ್ನು ಬಿತ್ತಿದ ಮಹಾನುಭಾವ. ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ ಎಂಬ ಸಪ್ತಸೂತ್ರದ ಮೂಲಕ ಜಗತ್ತಿನ ಕಲ್ಯಾಣವನ್ನು ಸಾರಿದ ಜಗಜ್ಯೋತಿ ಬಸವಣ್ಣ ಎಂದು ಅವರು ವಿವರಿಸಿದರು.

ಕಾರ್ಯಕ್ರಮದಲ್ಲಿ ಬಸವ ಸಮಿತಿ ಅಧ್ಯಕ್ಷ ಡಾ. ಅರವಿಂದ ಜತ್ತಿ ಅವರಿಗೆ ‘ಬಸವಶ್ರೀ’ ಪ್ರಶಸ್ತಿ, ಏರ್ ಆ್ಯಂಬುಲೆನ್ಸ್ ಸೇವೆಯ ಮೂಲಕ ದೇಶದ ಗಮನ ಸೆಳೆದಿರುವ ಡಾ.ಶಾಲಿನಿ ಅವರಿಗೆ ‘ಅಕ್ಕಮಹಾದೇವಿ’ ಪ್ರಶಸ್ತಿ, ಉದ್ಯಮಿಗಳಾದ ಟಿ.ಪಿ.ಕಲ್ಲೇಶ್ ಅವರಿಗೆ ‘ಕಾಯಕ ರತ್ನ’, ತಿಪ್ಪೇಶಪ್ಪ ಅವರಿಗೆ ‘ಕಾಯಕ ಯೋಗಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ಮಾಜಿ ಉಪಮಹಾಪೌರ ಬಿ.ಎಸ್.ಪುಟ್ಟರಾಜು, ಶ್ರೀಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ವಿಶ್ವನಾಥಯ್ಯ, ಅಭಾವೀಮ ಅಧ್ಯಕ್ಷ ಎಸ್.ಗುರುಸ್ವಾಮಿ, ಅಕ್ಕನ ಬಳಗದ ಅಧ್ಯಕ್ಷೆ ಜಗದಾಂಬ ಸಿದ್ಧವೀರಪ್ಪ, ಕಾರ್ಯಧ್ಯಕ್ಷೆ ಪಂಕಜ ಶಿವಾನಂದ ಮತ್ತಿತರರು ಉಪಸ್ಥಿತರಿದ್ದರು.

"ಬಸವಾದಿ ಶಿವಶರಣರ ವಚನಗಳಲ್ಲಿ ಶಿವಾನುಭವ ಮತ್ತು ಲೋಕಾನುಭವ ಎರಡೂ ಇವೆ. ವಚನಗಳನ್ನು ಹೇಳುವವರು ಅದನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಆತ್ಮದರ್ಶನ ಆಗುತ್ತದೆ. ಮನುಷ್ಯ ಕೇವಲ ಅನುಭವದ ಮೇಲೆ ಮುನ್ನಡೆಯುತ್ತಿದ್ದಾನೆ. ಅನುಭವದ ಜೊತೆಗೆ ಅನುಭಾವವೂ ಸಿಗಬೇಕೆಂದರೆ ವಚನ ಸಾಹಿತ್ಯದಿಂದ ಮಾತ್ರ ಸಾಧ್ಯ"

- ಅರವಿಂದ ಜತ್ತಿ, ಅಧ್ಯಕ್ಷರು, ಬಸವ ಸಮಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net