ಶೃಂಗೇರಿಯಲ್ಲಿ ಶ್ರೀ ಶಾರದಾಂಬಾ ಮಹಾರಥೋತ್ಸವ

srigeri utsava
ಶೃಂಗೇರಿ ತಾಲೂಕಿನ ಹೆಬ್ಬಿಗೆಯಲ್ಲಿ ಶೃಂಗೇರಿ ಶರನ್ನವರಾತ್ರಿ ಉತ್ಸವ ಕುರಿತು ಸಾಹಿತಿ ಹನಕೋಡು ದಿವಾಕರ ಮಾತನಾಡಿದರು. ಅನಂತಕೃಷ್ಣ ಹೆಬ್ಬಾರ್, ಶ್ರೀಧರ್ ರಾವ್ ಇದ್ದರು.
Published on

ಶೃಂಗೇರಿ: ಶ್ರೀ ಶಾರದಾ ಪೀಠದಲ್ಲಿ 9 ದಿನ ಶರನ್ನವರಾತ್ರಿ ಉತ್ಸವ, ನವರಾತ್ರಿ ನಂತರ ಶ್ರೀ ಶಾರದಾಂಬಾ ಮಹಾರಥೋತ್ಸವ ಹಾಗೂ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ನಡೆಯುತ್ತದೆ ಎಂದು ಸಾಹಿತಿ ಹನಕೋಡು ದಿವಾಕರ ಹೇಳಿದರು.
ಅಡ್ಡಗದ್ದೆ ಗ್ರಾಪಂ ಹೆಬ್ಬಿಗೆ ವಿಶ್ವನಾಥರಾವ್ ಮನೆಯಲ್ಲಿ ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಭಾ ಮತ್ತು ಯುವ ಘಟಕದ ಆಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಶೃಂಗೇರಿ ಶರನ್ನವರಾತ್ರಿ ಉತ್ಸವ ವಿಶೇಷತೆ ಬಗ್ಗೆ ಮಾತನಾಡಿದರು.
ಅಮಾವಾಸ್ಯೆ ದಿನ ಜಗತ್ಪ್ರಸೂತಿಕ ಅಲಂಕರ ಮಾಡಲಾಗುತ್ತದೆ. ಶ್ರೀ ಶಾರದಾಂಬೆ ಮೂಲ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ, ಶತರುದ್ರಾಭಿಷೇಕವನ್ನು ಜಗದ್ಗುರುಗಳು ನೆರವೇರಿಸಲಿದ್ದಾರೆ. ವರ್ಷದಲ್ಲಿ ಮೂರು ಬಾರಿ ಮಾತ್ರ ಮೂಲ ವಿಗ್ರಹಕ್ಕೆ ಅಭಿಷೇಕ ನಡೆಯುತ್ತದೆ. ಅಮಾವಾಸ್ಯೆಯಂದು ದೇವಿಯ ದರ್ಶನ ಮಾಡಿದರೆ ಶ್ರೇಯಸ್ಸು ದೊರಕುತ್ತದೆ ಎಂಬುದು ಭಕ್ತರ ನಂಬಿಕೆ. ಪೀಠದ 34ನೇ ಜಗದ್ಗುರು ಶ್ರೀ ಚಂದ್ರಶೇಖರ ಭಾರತೀ ಸ್ವಾಮೀಜಿ ಆರಾಧನೆಯು ಇದೇ ದಿನದಂದು ನಡೆಯಲಿದೆ. ನರಸಿಂಹವನದ ಶ್ರೀ ಚಂದ್ರಶೇಖರ ಭಾರತೀ ಸ್ವಾಮೀಜಿಗಳ ಅಷ್ಠಾನ ಮಂದಿರದಲ್ಲಿ ಉಭಯ ಜಗದ್ಗುರುಗಳು ವಿಶೇಷ ಪೂಜೆ ನೆರವೇರಿಸಲಿದ್ದಾರೆ ಎಂದರು.
ನವರಾತ್ರಿಯಲ್ಲಿ ಒಂಬತ್ತು ದಿನ ದಿನಕ್ಕೊಂದರಂತೆ ದೇವಿಗೆ ಅಲಂಕಾರ ಮಾಡಲಾಗುತ್ತದೆ. ಪ್ರತಿ ದಿನ ವೇದ ಪುರಾಣ ಇತಿಹಾಸ ಪ್ರಸ್ತಾನತ್ರಯ ಭಾಷ್ಯ ಪಾರಾಯಣಗಳು, ಉಭಯ ಜಗದ್ಗುರುಗಳಿಂದ ವಿಶೇಷ ಪೂಜೆ ನಡೆಯುತ್ತದೆ. ಸಂಜೆ ಶ್ರೀ ಶಾರದಾಂಬಾ ಮಹಾ ದೀಪೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮ, ದೇವಿಗೆ ಉಯ್ಯಲೆ ಸೇವೆ ನಡೆಯಲಿದೆ ಎಂದರು.
ಎ.ಎಂ.ಶ್ರೀಧರರಾವ್ ಮಾತನಾಡಿ, ಮೈಸೂರು ದಸರಾದಂತೆ ಶೃಂಗೇರಿಯಲ್ಲಿ ನಡೆಯುವ ಶರನ್ನವರಾತ್ರಿ ಉತ್ಸವ ಅತ್ಯಂತ ಮಹತ್ವದ್ದಾಗಿದೆ ಎಂದರು. ಯುವ ಘಟಕದ ಅಧ್ಯಕ್ಷ ಅನಂತಕೃಷ್ಣ ಹೆಬ್ಬಾರ್, ಶಾರದಾ ಸಹಕಾರ ಸಂಘದ ನಿರ್ದೇಶಕರಾದ ರಾಮಚಂದ್ರರಾವ್, ಎಸ್.ವಿ.ಸತೀಶ್, ಎಚ್.ಜಿ.ಕೃಷ್ಣಮೂರ್ತಿ, ಮಲ್ಲಂದೂರು ಅಶೋಕ್, ಗುಬ್ಬಗೋಡು ವೆಂಕಟರಾವ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net