

ರಾಣೆಬೆನ್ನೂರ: ಮರ್ಯಾದಾ ಪುರುಷೋತ್ತಮ ಶ್ರೀರಾಮ ನವಮಿಯನ್ನು ಬುಧವಾರ ನಗರದ ವಿವಿಧೆಡೆ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಇಲ್ಲಿನ ಸಂಗಮ ವೃತ್ತದ ಬಳಿಯಿರುವ ಶ್ರೀರಾಮ ದೇವರ ದೇವಸ್ಥಾನದಲ್ಲಿ ರಾಮನವಮಿ ಅಂಗವಾಗಿ ತೊಟ್ಟಿಲು ಕಟ್ಟಿ ಹೂವುಗಳಿಂದ ಅಲಂಕರಿಸಿ ಅದರಲ್ಲಿ ಶ್ರೀರಾಮನ ಪ್ರತೀಕವಾಗಿ ತೆಂಗಿನಕಾಯಿಯನ್ನು ಇಟ್ಟು ಸುಮಂಗಲಿಯರು ತೊಟ್ಟಿಲು ತೂಗುವ ಮೂಲಕ ಹೆಸರಿಡುವ ಶಾಸ್ತ್ರ ಮಾಡಿ ಪಾಲಕಿ ಉತ್ಸವ ನಡೆಸಲಾಯಿತು.
ಇದಲ್ಲದೆ ಮಾರುತಿನಗರದ ಶ್ರೀರಾಮ ಮಂದಿರ, ಕೋಟೆ ಪ್ರದೇಶದ ರಾಮದೇವರ ಗುಡಿ, ಅಶ್ವಥ ಮಾರುತಿ ದೇವಸ್ಥಾನ, ಕೆಇಬಿ ವಿನಾಯಕ ದೇವಸ್ಥಾನ, ವಿನಾಯಕನಗರದ ವಿನಾಯಕ ದೇವಸ್ಥಾನಗಳಲ್ಲಿಯೂ ಶ್ರೀರಾಮ ನವಮಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು.
ನಗರದ ಎಲ್ಲ ದೇವಸ್ಥಾನಗಳಲ್ಲಿ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಪ್ರಮುಖ ವೃತ್ತಗಳಲ್ಲಿ ಕೊಸಂಬರಿ, ಪಾನಕ, ಮಜ್ಜಗಿ ವಿತರಿಸಲಾಯಿತು.