ಸಿಹಿಮೊಗ್ಗೆಯಲ್ಲಿ ಶ್ರೀರಾಮ ನವಮಿ ಸಂಭ್ರಮ

srirama navami celebration
ಶಿವಮೊಗ್ಗ ದುರ್ಗಿಗುಡಿಯಲ್ಲಿ ಶ್ರೀ ಸೀತಾರಾಮ ಆಂಜನೇಯ ಸ್ವಾಮಿ ದೇವಸ್ಥಾನದ ರಥೋತ್ಸವ ಅದ್ಧೂರಿಯಾಗಿ ನೆರವೇರಿತು.
Published on

ಶಿವಮೊಗ್ಗ: ಪ್ರತಿ ವರ್ಷದಂತೆ ಜಿಲ್ಲೆಯಾದ್ಯಂತ ಶ್ರೀರಾಮನ ವಿವಿಧ ದೇವಾಲಯಗಳಲ್ಲಿ ಭಾನುವಾರ ಶ್ರೀ ರಾಮನವಮಿ ಉತ್ಸವವು ಭಜನೆ, ರಥೋತ್ಸವ, ಅನ್ನಸಂತರ್ಪಣೆಯೊಂದಿಗೆ ಅತ್ಯಂತ ಸಡಗರ ಸಂಭ್ರಮದಿಂದ ನೆರವೇರಿತು. ಎಂದಿನಂತೆ ಸಂಪ್ರದಾಯಬದ್ಧವಾಗಿ ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸಿ ಕೋಸಂಬರಿ ಮತ್ತು ಪಾನಕ ವಿತರಿಸುವ ಮೂಲಕ ಜಿಲ್ಲಾದ್ಯಂತ ರಾಮಭಕ್ತರು ರಾಮನವಮಿ ಆಚರಿಸಿದರು.

ಶಿವಮೊಗ್ಗದ ಕೋಟೆ ಸೀತಾರಾಮಾಂಜನೇಯ ದೇವಸ್ಥಾನ, ದುರ್ಗಿಗುಡಿ ಸೀತಾರಾಮ ದೇವಸ್ಥಾನ, ಜಯನಗರದ ರಾಮಮಂದಿರ, ಓಟಿ ರಸ್ತೆಯ ಗೌಡ ಸಾರಸ್ವತ ಸಮಾಜದ ವೆಂಕಟರಮಣ ದೇವಮಂದಿರ, ಸ್ವಾಮಿ ವಿವೇಕಾನಂದ ಬಡಾವಣೆ ಇ ಬ್ಲಾಕ್‌ನ ಶ್ರೀ ವರದಾಂಜನೇಯಸ್ವಾಮಿ ದೇವಸ್ಥಾನ, ಸಾಗರ ರಸ್ತೆಯ ಶ್ರೀ ರಾಮಮಂದಿರ, ಹೊಸನಗರ, ಭದ್ರಾವತಿ, ಸಾಗರ, ಸೊರಬ ಒಳಗೊಂಡತೆ ಜಿಲ್ಲೆಯ ಎಲ್ಲ ತಾಲೂಕುಗಳ ಶ್ರೀರಾಮನ ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದಲೇ ಶ್ರದ್ಧಾಭಕ್ತಿಯಿಂದ ಪೂಜೆ ಪುನಸ್ಕಾರಗಳು ನೆರವೇರಿದವು.

ವಿಶ್ವ ಹಿಂದು ಪರಿಷತ್, ಬಜರಂಗ ದಳ ಸೇರಿ ದೇವಾಲಯ ಸಮಿತಿಗಳ ಪ್ರಮುಖರು ಅದ್ಧೂರಿಯಾಗಿ ರಾಮನವಮಿ ಆಚರಣೆಗೆ ಒತ್ತು ನೀಡಿದರು. ತಮ್ಮ ಕುಟುಂಬಸ್ಥರು, ಗ್ರಾಮಸ್ಥರು, ಬಡಾವಣೆಗಳ ನಿವಾಸಿಗಳೊಂದಿಗೆ ರಾಮನವಮಿ ಸಂಭ್ರಮ ಆಚರಿಸಿದರು. ಕೆಲವರು ಮನೆಯಲ್ಲೇ ಪೂಜೆ ಸಲ್ಲಿಸಿ ರಾಮನವಮಿಯನ್ನು ಸರಳವಾಗಿ ಮುಗಿಸಿದರು. ಉಳಿದಂತೆ ನಗರದ ಖಾಸಗಿ ನಿಲ್ದಾಣ ಒಳಗೊಂಡಂತೆ ಶಿವಮೊಗ್ಗ ನಗರದ ಹಲವೆಡೆ ಆಟೋ ಚಾಲಕರು ಹಾಗೂ ರಾಮನ ಭಕ್ತರು ಶ್ರೀರಾಮ ನವಮಿ ಹಬ್ಬದ ವಿಶೇಷವಾಗಿ ಸಾರ್ವಜನಿಕರಿಗೆ ಕೊಸಂಬರಿ ಮತ್ತು ಪಾನಕ, ಮಜ್ಜಿಗೆ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net