

ಶಿವಮೊಗ್ಗ: ಗಾಜನೂರಿನ ಶರಣ್ಯ ಆರೈಕೆ ಕೇಂದ್ರದಲ್ಲಿ ಶ್ರೀ ರಾಘವೇಂದ್ರಸ್ವಾಮಿ ಪವಿತ್ರ ಪಾದುಕೆಗಳ ಮಹಾಪೂಜೆ ನ.24ರಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 1.30ರವರೆಗೆ ನೆರವೇರಲಿದೆ ಎಂದು ಕೇಂದ್ರದ ಕಾರ್ಯದರ್ಶಿ ಡಿ.ಎಲ್.ಮಂಜುನಾಥ್ ಹೇಳಿದರು.
ತಮಿಳುನಾಡಿನ ಕುಂಭಕೋಣಂನ ಭುವನಗಿರಿಯಿಂದ ಶ್ರೀ ರಾಘವೇಂದ್ರ ಸ್ವಾಮೀಜಿ ಪಾದುಕೆಗಳು ಶಿವಮೊಗ್ಗಕ್ಕೆ ಆಗಮಿಸುತ್ತಿದ್ದು, ತತ್ಸಂಬಂಧ ಹೋಮ, ಪಾದುಕಾ ಪೂಜೆ, ಸಂಕಲ್ಪ ಪೂಜೆ, ತೆಪ್ಪೋತ್ಸವ ಹಾಗೂ ಮಹಾಮಂಗಳಾರತಿ ನಂತರ ಮಹಾ ಪ್ರಸಾದದ ವ್ಯವಸ್ಥೆ ಇರುತ್ತದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶರಣ್ಯ ಸಂಸ್ಥೆಯು ಹಲವು ವರ್ಷಗಳಿಂದ ಸಾಮಾಜಿಕ ಸೇವೆ ಮಾಡುತ್ತಿದೆ. ಮುಖ್ಯವಾಗಿ ರೋಗ ಉಲ್ಬಣಗೊಂಡಿರುವ, ಬದುಕಿನ ಕೊನೆಯ ಕ್ಷಣಗಳನ್ನು ಎದುರಿಸುತ್ತಿರುವ ಅಸಹಾಯಕರಿಗೆ, ಕ್ಯಾನ್ಸರ್ ರೋಗಿಗಳಿಗೆ ಆಶ್ರಯ ನೀಡುತ್ತಿದೆ. ಊಟ ಉಪಚಾರವು ಇಲ್ಲಿ ಉಚಿತವಾಗಿದೆ. ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರ ಸಹಕಾರದಲ್ಲಿ ಸ್ಥಾಪಿತಗೊಂಡಿರುವ ಆರೈಕೆ ಕೇಂದ್ರವನ್ನು ಮತ್ತಷ್ಟು ವಿಸ್ತರಿಸಲಾಗುತ್ತಿದೆ. ಹಲವು ಕಾಯಿಲೆಗಳು, ಜನರೊಟ್ಟಿಗೆ ಸೇರಿಸಲಾಗದ ಕಾಯಿಲೆ ಇರುವವರಿಗೆ ವಿಶೇಷ ವಾರ್ಡ್ ಅನ್ನು ಸ್ಥಾಪಿಸಲಾಗುವುದು ಎಂದರು.
ಶರಣ್ಯದ ಬಿಎಸ್‌ಎಲ್ ಟ್ರಸ್ಟ್ ಅಧ್ಯಕ್ಷ ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ, ಆರ್.ಮಂಜುನಾಥ್, ಸಂದೀಪ, ಡಿ.ಎಲ್.ನಟರಾಜ್, ಕೆ.ಎಸ್.ಶ್ರೀನಿವಾಸ್, ಸಂಪತ್, ಮಂಜುನಾಥ್ ಎಸ್.ಬೂದಾಳ್ ಉಪಸ್ಥಿತರಿದ್ದರು.