ನಾಳೆಯಿಂದ ಶ್ರೀ ಮಹದೇಶ್ವರಸ್ವಾಮಿ ಜಾತ್ರೆ, ದನಗಳ ಪ್ರದರ್ಶನ

15 SARAG 2
ಸರಗೂರು ತಾಲೂಕಿನ ಕಂದೇಗಾಲದ ಮಹದೇಶ್ವರ ದೇವಸ್ಥಾನದ ನೋಟ.
Published on

ಸರಗೂರು: ಫೆ.17ರ ಸೋಮವಾರದಿಂದ ಫೆ.19ರ ಬುಧವಾರದವರೆಗೆ ಮೂರು ದಿನಗಳ ಕಂದೇಗಾಲ ಶ್ರೀ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಮತ್ತು ದನಗಳ ಪ್ರದರ್ಶನವನ್ನು ಅದ್ದೂರಿಯಾಗಿ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಸೋಮವಾರದಿಂದ ಜಾತ್ರೆ ಆರಂಭಗೊಳ್ಳಲಿದೆ.

ತಾಲೂಕಿನ ತಾಲೂಕಿನ ಕಂದೇಗಾಲ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ 8 ಗಂಟೆಗೆ ಬಿಡುಗಲು-ಪಡುವಲು ಮಠದ ಶ್ರೀಮಹಾದೇವ ಸ್ವಾಮೀಜಿ, ದಡದಹಳ್ಳಿ ಪಟ್ಟದ ಮಠದ ಶ್ರೀ ಷಡಕ್ಷರ ಸ್ವಾಮೀಜಿ, ಹಂಚೀಪುರ ಪಟ್ಟದ ಮಠದ ಶ್ರೀ ಚನ್ನಬಸವ ಸ್ವಾಮೀಜಿ, ಬೀಚನಹಳ್ಳಿ ಪುರದ ಮಠದ ಶ್ರೀ ನಾಗೇಂದ್ರ ಸ್ವಾಮೀಜಿ, ಜಕ್ಕಹಳ್ಳಿ ಬಿಕ್ಷದ ದಾಸೋಹ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ನೇತೃತ್ವದಲ್ಲಿ ಹೋಮ ಮತ್ತು ರುದ್ರಾಭಿಷೇಕದ ಮೂಲಕ ಜಾತ್ರೆಯೂ ಪ್ರಾರಂಭಗೊಳ್ಳಲಿದೆ. ಅದೇ ದಿನ ಸಂಜೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಎರಡನೇ ದಿನವಾದ ಮಂಗಳವಾರ ಬೆಳಗ್ಗೆ 6 ಗಂಟೆಗೆ ದೇವರಿಗೆ ಅಭಿಷೇಕ ಪೂಜೆ, 9 ಗಂಟೆಗೆ ಹಾಲಹರವಿ ಸೇವೆ ಮತ್ತು ಕೊಂಡೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೆ ಅದೇ ದಿನ ರಾತ್ರಿ ಸಾಗರೆ ಸುರೇಶ್ ಮತ್ತು ತಂಡದವರಿಂದ ಸುಗಮ ಸಂಗೀತಾ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಅಲ್ಲದೆ ಭಕ್ತಿಗೀತೆ, ಜಾನಪದಗೀತೆ, ಹಾಗೂ ಚಲನಚಿತ್ರ ಗೀತೆಗಳು ಕಾರ್ಯಕ್ರಮ ಏರ್ಪಡಿಸಲಾಗಿದೆ.

ಜಾತ್ರೆಯ ಮೂರನೇ ದಿನವಾದ ಬುಧವಾರ ಬೆಳಗ್ಗೆ 5 ಗಂಟೆಗೆ ಬಿಲ್ವಾರ್ಚನೆ ಮತ್ತು ದೇವರಿಗೆ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ. ಬೆಳಗ್ಗೆ 10 ಗಂಟೆಗೆ ತೆಲಗುಮಸಹಳ್ಳಿ, ಕೂಸಣ್ಣ ತಂಡದವರಿಂದ ಮಹದೇಶ್ವರ ಭಜನೆ ಏರ್ಪಡಿಸಲಾಗಿದೆ. ಅದೇ ದಿನ ರಾತ್ರಿ 9 ಗಂಟೆಗೆ ಆರ್ಕೆಸ್ಟ್ರಾ ಏರ್ಪಡಿಸಲಾಗಿದೆ. ಜೀ ಕನ್ನಡ ಸರಿಗಮಪ ಖ್ಯಾತಿಯ ಕಂಬದ ರಂಗಯ್ಯ, ಶಿವಾನಿ, ವಿ.ಎಸ್.ಕುಮಾರ್, ಪ್ರೀತಿ ಸಿಂಕನ, ಮಿಮಿಕ್ರಿ ಸುಧಾಕರ್ ಹಾಗೂ ಡಿಕೆಡಿ ನೃತ್ಯಪಟುಗಳು ಸೇರಿದಂತೆ ಜೂನಿಯರ್ ವಿಷ್ಣುವರ್ಧನ್, ಜೂನಿಯರ್ ಅಂಬರೀಷ್ ಆಗಮಿಸಲಿದ್ದಾರೆ.

ಅಲ್ಲದೆ ಜಾತ್ರೆಯ ಅಂಗವಾಗಿ ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳಿಗೆ 3 ದಿನಗಳ ದಾಸೋಹದ ವ್ಯವಸ್ಥೆಯನ್ನೂ ಮಾಡಲಾಗಿದೆ.

ಜಾತ್ರೆಯ ಅಂಗವಾಗಿ ದೇವಸ್ಥಾನ ಸಮಿತಿ ವತಿಯಿಂದ ಉತ್ತಮ ಹೋರಿಗಳಿಗೆ ಪ್ರಥಮ ಬಹುಮಾನ 5000 ರೂ., ದ್ವಿತೀಯ ಬಹುಮಾನ 3,000 ರೂ., ತೃತೀಯ ಬಹುಮಾನ 2,000 ರೂ. ಜತೆಗೆ ಉತ್ತಮ ಗೂಳಿ ಹಾಗೂ ರಾಸುಗಳಿಗೆ ಪ್ರಥಮ ಬಹುಮಾನ 20 ಗ್ರಾಂ ಬೆಳ್ಳಿ, ದ್ವಿತೀಯ ಬಹುಮಾನ 15 ಗ್ರಾಂ ಬೆಳ್ಳಿ ಹಾಗೂ ತೃತೀಯ ಬಹುಮಾನ 10 ಗ್ರಾಂ ಬೆಳ್ಳಿ ನೀಡಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net