

ಜಮ್ಮು: ಶ್ರೀಲಂಕಾದ ಖ್ಯಾತ ಬೌಲರ್ ಮುತ್ತಯ್ಯ ಮುರಳೀಧರನ್ರ ಸೆವ್ಲಾನ್ ಬೆವರೇಜಸ್ ಕಂಪನಿಗೆ ಕಥುವಾದ ಭಾಗ್ಥಾಲಿ ಕೈಗಾರಿಕಾ ಪ್ರಾಂಗಣದಲ್ಲಿ ಜಮೀನು ಮಂಜೂರು ಮಾಡಿರುವ ವಿಚಾರ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಚರ್ಚೆಗೆ ಬಂದು ಕೋಲಾಹಲಕ್ಕೆ ಕಾರಣವಾಗಿದೆ.
ಮುರಳೀಧರನ್ರ ಲಘು ಪಾನೀಯ ಕಂಪನಿ ಸಹಿತ ಅನೇಕ ದೊಡ್ಡ ಕೈಗಾರಿಕಾ ಸಂಸ್ಥೆಗಳಿಗೆ ಕಳೆದ ವರ್ಷ ಈ ಕೈಗಾರಿಕಾ ಪ್ರಾಂಗಣದಲ್ಲಿ ಜಮೀನು ಮಂಜೂರು ಮಾಡಲಾಗಿದ್ದು ಅವುಗಳು ಒಟ್ಟು 21,000 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡಲಿವೆ ಎನ್ನಲಾಗಿದೆ.
ಮುರಳೀಧರನ್ ಕಂಪನಿಗೆ ಜಾಗ ಮಂಜೂರು ಮಾಡಿದ್ದನ್ನು ಶನಿವಾರ ಹಲವು ಸದಸ್ಯರು ಸದನದಲ್ಲಿ ಪ್ರಶ್ನಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಇದನ್ನುಪ್ರಸ್ತಾಪಿಸಿದ ಮಾರ್ಕ್ಸ್ವಾದಿ ಕಮ್ಯೂನಿಸ್ಟ್ ಪಕ್ಷದ (ಸಿಪಿಎಂ) ಸದಸ್ಯ ಮಹಮದ್ ಯೂಸುಫ್ ತರಿಗಾಮಿ, ಬೌಲಿಂಗ್ ದಂತಕಥೆ ಮುರಳೀಧರನ್ರ ಹೆಸರನ್ನು ಹೇಳದೆ ಭಾರತೀಯೇತರ ಕ್ರಿಕೆಟರ್ಗೆ ಜಮೀನು ಮಂಜೂರು ಮಾಡಿದ್ದು ಹೇಗೆ ಎಂದು ಪ್ರಶ್ನಿಸಿದರು.