ಶ್ರೀಲಂಕಾ ಬಿಕ್ಕಟ್ಟು: ಅಜ್ಞಾತ ಸ್ಥಳದಿಂದಲೇ ರಾಜೀನಾಮೆ ನೀಡಿದ ಗೋತಬಯ ರಾಜಪಕ್ಸ

Gotabaya
Published on

ಕೋಲಂಬೊ: ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟು ಮತ್ತು ರಾಜಕೀಯ ಅಸ್ಥಿರತೆ ನಡುವೆ ಅಧ್ಯಕ್ಷ ಗೋತಬಯ ರಾಜಪಕ್ಸ ಕೊನೆಗೂ ರಾಜೀನಾಮೆ ನೀಡಿದ್ದಾರೆ.

ಗೋತಬಯ ಅವರ ರಾಜೀನಾಮೆಗೆ ಆಗ್ರಹಿಸಿ ನಾಗರಿಕರು ದಂಗೆಯೇಳುವ ಮೂಲಕ ರಾಷ್ಟ್ರಪತಿ ಭವನಕ್ಕೆ ಮುತ್ತಿಗೆ ಹಾಕಿದ್ದರು. ಈ ಬೆನ್ನಲ್ಲೇ ರಾಷ್ಟ್ರಪತಿ ಭವನದಿಂದ ತಲೆಮರೆಸಿಕೊಂಡಿದ್ದ ಗೋತಬಯ ಕೊನೆಗೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

ರಾಜೀನಾಮೆ ನೀಡಿ ಎಂದರೆ ಕುಟುಂಬ ಸಹಿತ ಮಾಲ್ಡೀವ್ಸ್ ಹೋಗಿದ್ದ ಗೋತಬಯ ಬಳಿಕ ಸಿಂಗಾಪುರಕ್ಕೆ ಪ್ರಯಾಣ ಬೆಳೆಸಿದ್ದು, ಆ ಬಳಿಕವೇ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿತ್ತು. ಸದ್ಯ ಸಿಂಗಾಪುರಕ್ಕೆ ತಲುಪಿರುವ ಖಚಿತ ಮಾಹಿತಿ ಇಲ್ಲ. ಅಜ್ಞಾತ ಸ್ಥಳದಿಂದಲೇ ಈ ಮೇಲ್​ ಮೂಲಕವೇ ಸ್ಪೀಕರ್​ಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ ಎನ್ನಲಾಗಿದೆ.

ಅಧ್ಯಕ್ಷ ಪರಾರಿಯಿಂದಾಗಿ ಶ್ರೀಲಂಕಾದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದ ಹಿನ್ನೆಲೆಯಲ್ಲಿ ನಿನ್ನೆ (ಬುಧವಾರ) ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಅದನ್ನು ಶುಕ್ರವಾರದವರೆಗೆ ವಿಸ್ತರಿಸಲಾಗಿದೆ.

ಶ್ರೀಲಂಕಾ ಸ್ವಾತಂತ್ರ್ಯದ ನಂತರ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ, ಇದು ಅಧ್ಯಕ್ಷ ಸ್ಥಾನದಿಂದ ರಾಜಪಕ್ಸೆಯನ್ನು ಪದಚ್ಯುತಗೊಳಿಸುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆಗಳಿಗೆ ಕಾರಣವಾಗಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net