

ಅರಕಲಗೂಡು: ತಾಲೂಕಿನ ಮುಂಡಗೋಡು ಗ್ರಾಮದೇವತೆ ಹಾಗೂ ಶ್ರೀ ಕಲ್ಲೇಶ್ವರ ಜಾತ್ರಾ ಮಹೋತ್ಸವ ಸೋಮವಾರ ಸಡಗರ ಸಂಭ್ರಮದೊಂದಿಗೆ ಸಂಪನ್ನಗೊಂಡಿತು.
ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ನಡೆದ ಜಾತ್ರಾ ಮಹೋತ್ಸವದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ಸಾಂಗವಾಗಿ ನಡೆದವು. ಜಾತ್ರೆ ಪ್ರಯುಕ್ತ ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿದ್ದು ಸುತ್ತಮುತ್ತಲಿನ ಭಕ್ತರು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಶುಕ್ರವಾರ ಸಂಜೆ ತೇರು ಸಿಂಗರಿಸುವುದರೊಂದಿಗೆ ಧಾರ್ಮಿಕ ಕಾರ್ಯಗಳಿಗೆ ಚಾಲನೆ ನೀಡಲಾಯಿತು. ಶನಿವಾರ ಗ್ರಾಮದೇವತೆ ಮತ್ತು ಶ್ರೀ ಕಲ್ಲೇಶ್ವರ ದೇವರ ಅಡ್ಡ ಉತ್ಸವ ಸುತ್ತಲಿನ ಗ್ರಾಮಗಳಲ್ಲಿ ನಡೆಯಿತು. ಭಾನುವಾರ ಕೆಂಡೋತ್ಸವ ನಡೆಯಿತು. ಗ್ರಾಮಸ್ಥರು ಕೆಂಡ ಹಾಯ್ದು ಭಕ್ತಿ ಪರಾಕಾಷ್ಠೆ ಪ್ರದರ್ಶಿಸಿದರು.
ಸೋಮವಾರ ಬೆಳಗ್ಗೆ ದೇವಸ್ಥಾನದಲ್ಲಿ ಅಭಿಷೇಕ, ಕುಂಕುಮಾರ್ಚನೆ, ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಶ್ರೀ ಕಲ್ಲೇಶ್ವರ ದೇವಸ್ಥಾನದಿಂದ ಸಾಗಿದ ದೇವರ ಉತ್ಸವ ಶ್ರೀ ಆಂಜನೇಯಸ್ವಾಮಿ ದೇವಾಲಯ ಮುಂಭಾಗ ಸಿಂಗರಿಸಿದ್ದ ರಥದ ಮೇಲೆ ದೇವರ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು. ಮಧ್ಯಾಹ್ನ ಶುಭ ಮುಹೂರ್ತದಲ್ಲಿ ಜಯ ಘೋಷಗಳೊಂದಿಗೆ ಭಕ್ತರು ರಥ ಎಳೆದು ಸಂಭ್ರಮಿಸಿದರು. ಗ್ರಾಮದೇವತೆ ದೇವಾಲಯದವರೆಗೆ ಸಾಗಿ ತೇರು ಸ್ವಸ್ಥಾನಕ್ಕೆ ಸುಸೂತ್ರವಾಗಿ ಮರಳಿತು. ತೇರು ಮುಂದೆ ಸಾಗುವಾಗ ಭಕ್ತರು ರಥದ ಮೇಲೆ ಹಣ್ಣು ದವನ ಎಸೆದು ಪುನೀತರಾದರು. ಬಿಸಿಲಿನಿಂದ ಬಳಲಿದ್ದ ಜನರಿಗೆ ಮಜ್ಜಿಗೆ ಪಾನಕ ನೀಡಲಾಯಿತು. ಭಕ್ತರಿಂದ ದಾಸೋಹ ವ್ಯವಸ್ಥೆ ಏರ್ಪಡಿಸಲಾಗಿತ್ತು. ರಾತ್ರಿ ಪೌರಾಣಿಕ ಕುರುಕ್ಷೇತ್ರ ನಾಟಕ ನಡೆಯಿತು.