

ಗೀತೆಯ ಮೂಲಕ ಸಮಾಜದಲ್ಲಿ ಸುಖ-ಶಾಂತಿ ನೆಲೆಸುವಂತೆ ಹಾಗೂ ಪ್ರತಿ ವ್ಯಕ್ತಿಯನ್ನು ಸುಸಂಸ್ಕೃತನನ್ನಾಗಿ ರೂಪಿಸಲು ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ 2007ರಲ್ಲಿ ಆರಂಭಿಸಿದ ಭಗವದ್ಗೀತಾ ಅಭಿಯಾನ ಈ ಬಾರಿ ದಾವಣಗೆರೆಯಲ್ಲಿ ನ. 4ರಿಂದ ಶುರುವಾಗಿದ್ದು ಡಿ. 4 ರಂದು ಕೊನೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಇಲ್ಲಿ ಗೀತೆಯ ಸಾರವನ್ನು ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ವಿವರಿಸಿದ್ದಾರೆ.
ಮಹಾಭಾರತದಲ್ಲಿ ಕುರುಕ್ಷೇತ್ರದ ವೇಳೆ ಭಗವದ್ಗೀತೆ ಬೋಧನೆಯಾಗುತ್ತದೆ. ಶ್ರೀ ಕೃಷ್ಣ ತನ್ನ ಗೆಳೆಯ ಹಾಗೂ ಭಕ್ತ ಅರ್ಜುನನ ನಡುವಿನ ಸಂವಾದವಿದು. ಇದು ಶ್ರೇಷ್ಠ ತಾತ್ವಿಕ ಮತ್ತು ಧಾರ್ವಿುಕ ಸಂವಾದಗಳಲ್ಲಿ ಒಂದು ಎನಿಸಿಕೊಂಡಿದೆ. ಭಗವದ್ಗೀತೆಯು ಗೀತೋಪನಿಷತ್ತು ಎಂದೂ ಪ್ರಸಿದ್ಧವಾಗಿದೆ. ಇದು ವೈದಿಕ ಜ್ಞಾನದ ಸಾರ ಸರ್ವಸ್ವ. ವೈದಿಕ ಸಾಹಿತ್ಯದಲ್ಲಿ ಅತ್ಯಂತ ಮುಖ್ಯವಾದ ಉಪನಿಷತ್ತುಗಳಲ್ಲಿ ಇದೂ ಒಂದು.
ಗೀತೆಯನ್ನು ವಿನಯಭಾವದಿಂದ ಓದಿದರೆ ಮಾತ್ರ ಅದು ಅರ್ಥವಾಗುತ್ತದೆ. ಪರಂಪರೆಯಿಂದ ನಮಗೆ ಬರುವ ಪರಿಪೂರ್ಣ ಜ್ಞಾನವನ್ನು ಸ್ವೀಕರಿಸಬೇಕು. ಪರಮ ಗುರುವಾದ ಭಗವಂತನಿಂದ ಪ್ರಾರಂಭವಾಗಿ, ಗುರುಶಿಷ್ಯ ಪರಂಪರೆಯಲ್ಲಿ ಯೋಗ್ಯಮೂಲದಿಂದ ಬರುವ ಜ್ಞಾನವನ್ನು ಒಪ್ಪಿಕೊಳ್ಳಬೇಕು ಎನ್ನುತ್ತದೆ ಭಗವದ್ಗೀತೆ. ಅದರಂತೆ ಶ್ರೀ ಕೃಷ್ಣನ ಉಪದೇಶವನ್ನು ಅರ್ಜುನನು ವಿರೋಧಿಸದೆ ಒಪ್ಪಿಕೊಂಡ.
ನನ್ನನ್ನು ಸ್ಮರಿಸಬೇಕು ಎನ್ನುವ ಶ್ರೀ ಕೃಷ್ಣ, ನಿನ್ನ ಸಹಜ ಧರ್ಮವನ್ನು ಬಿಡು ಎಂದೇನೂ ಅರ್ಜುನನಿಗೆ ಬೋಧಿಸುವುದಿಲ್ಲ. ಐಹಿಕ ಜಗತ್ತಿನಲ್ಲಿ ದೇಹಪಾಲನೆಗಾಗಿ ಮನುಷ್ಯ ಕೆಲಸ ಮಾಡಲೇಬೇಕು. ಆದರೆ ತನ್ನ ಧರ್ಮದಲ್ಲಿ ಉದ್ಯುಕ್ತನಾಗಿರುವಾಗ ಕೃಷ್ಣನನ್ನು ಸ್ಮರಿಸುತ್ತಿರಬೇಕು. ಮನಸ್ಸನ್ನೂ ಬುದ್ಧಿಶಕ್ತಿಯನ್ನೂ ಭಗವಂತನ ಚಿಂತನೆಯಲ್ಲಿ ತಲ್ಲೀನಗೊಳಿಸುವುದು ಹೇಗೆ ಎನ್ನುವುದನ್ನು ಭಗವದ್ಗೀತೆ ಹೇಳಿಕೊಡುತ್ತದೆ.
ಕರ್ಮಯೋಗದ ಮೂಲಕವೇ ಜ್ಞಾನಯೋಗಕ್ಕೆ ಹೋಗಬೇಕು ಎನ್ನುತ್ತದೆ ಐದನೇ ಅಧ್ಯಾಯ. ಯಾವುದೇ ಕೆಲಸ ಮಾಡುವಾಗ ಅನ್ಯಮನಸ್ಕರಾಗದೆ, ಸಂಪೂರ್ಣ ಮನಸ್ಸನ್ನು ತೊಡಗಿಸಬೇಕು. ಗೀತಾಭಿಯಾನದಿಂದ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚಿದೆ. ಶೈಕ್ಷಣಿಕ ಪ್ರಗತಿ ಕಂಡುಬಂದಿದೆ. ದೇಗುಲದಲ್ಲಿ ಗೀತಾ ಶ್ಲೋಕಗಳ ಪಠಣದಿಂದ ಪವಿತ್ರ ವಾತಾವರಣ ನಿರ್ವಣವಾಗುತ್ತದೆ. ಜೈಲುಗಳಲ್ಲಿ ಭಗವದ್ಗೀತೆ ಬೋಧಿಸಿದ್ದರಿಂದ ಕೈದಿಗಳ ಮನಪರಿವರ್ತನೆಯಾಗಿದೆ.
ಭಗವಂತನು ವಿಶ್ವಕಲ್ಯಾಣಕ್ಕಾಗಿ ಭಗವದ್ಗೀತೆ ಕೊಟ್ಟ ದಿನವೇ ಗೀತಾ ಜಯಂತಿ. ಅದರ ಸ್ಮರಣೆಗೆ ಮಾರ್ಗಶಿರ ಶುಕ್ಲ ಏಕಾದಶಿಯಂದು ಗೀತಾ ಜಯಂತಿ ಆಚರಿಸಲಾಗುತ್ತದೆ. ಇಲ್ಲಿ ವ್ಯಕ್ತಿಗಿಂತ ತತ್ವ ಪೂಜೆಗೆ ಹೆಚ್ಚಿನ ಪ್ರಾಶಸ್ಱವಿರುತ್ತದೆ. ಗೀತಾಜಯಂತಿಯನ್ನು ಜನಸಾಮಾನ್ಯರು ಸ್ವಯಂಪ್ರೇರಣೆಯಿಂದ ಆಚರಿಸುವಂತಾಗಬೇಕು. ನಿತ್ಯವೂ ಭಗವದ್ಗೀತೆಯನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು.
ಸಮತ್ವದ ಭಾವನೆ: ಮೂಕಂ ಕರೋತಿ ವಾಚಾಲಂ... ಪರಮಾನಂದಮಾಧವಮ್|
ಭಗವದ್ಗೀತೆಯು ಸಮಾಜಕ್ಕೆ ಸನ್ಮಾರ್ಗವನ್ನು ಉಪದೇಶಿಸುವ ಒಂದು ವಿಶಿಷ್ಟ ಗ್ರಂಥ. ಹಿಂದು ಧರ್ಮಕ್ಕೆ ಸೇರಿದ ಗ್ರಂಥವಾದರೂ ಇದು ಇತರ ಧರ್ಮದವರಿಗೂ ಗ್ರಾಹ್ಯವಾದ ತತ್ತ್ವಗಳನ್ನು ಒಳಗೊಂಡಿದೆ. ಗೀತೆಯ ಪ್ರಕಾರ, ಧರ್ಮವೆಂಬುದು ಕೇವಲ ಸಂಪ್ರದಾಯವಲ್ಲ. ಒಂದು ಜಾತಿ, ಸಮುದಾಯಕ್ಕೆ ಅನ್ವಯಿಸುವ ಆಚರಣೆಯೂ ಅಲ್ಲ. ಅದು ಮಾನವನ ಕರ್ತವ್ಯವೆನಿಸಿದ ಕರ್ಮ ಅಥವಾ ಕರ್ಮಯೋಗ. ಅದು ಹಲವು ಕಡೆ ಕರ್ಮದ ಮಹತ್ತ್ವನ್ನು ಸಾರುತ್ತದೆ. ಆಯಾ ವ್ಯಕ್ತಿಯು ಮಾಡಲೇಬೇಕಾದ ಕರ್ತವ್ಯ ಎನಿಸುವ ಈ ಕರ್ಮವೇ ಧರ್ಮ. ಇದರಲ್ಲಿ ಮೇಲು ಕೀಳೆಂಬ ಭೇದಗಳಿಲ್ಲ. ಎಲ್ಲ ಕರ್ಮಗಳು ಭಗವಂತನ ಆರಾಧನೆಯ ಬೇರೆ ಬೇರೆ ರೂಪಗಳೇ ಆಗಿವೆ. ‘ಸ್ವೇ ಸ್ವೇ ಕರ್ಮಣ್ಯಭಿರತಃ ಸಂಸಿದ್ಧಿಂ ಲಭತೇ ಪರಾಮ್, ‘ಸ್ವಕರ್ಮಣಾ ತಮಭ್ಯರ್ಚ್ಯ ಸಿಧಿಂ ವಿಂದತಿ ಮಾನವಃ’ ಎಂಬ ಗೀತೆಯ ಈ ಮಾತುಗಳು ಯಾವಾಗಲೂ ಸ್ಮರಣೀಯವಾಗಿವೆ.
ನರಕದ ದಾರಿಗಳು: ಗೀತೆಯು ನಮಗೆ ಸೌಹಾರ್ದ ಮತ್ತು ಸಾಮರಸ್ಯವನ್ನು ಬೋಧಿಸುತ್ತದೆ. ದ್ವೇಷ, ಕೋಪ ಮತ್ತು ಪ್ರತೀಕಾರ ಭಾವನೆಯನ್ನು ನಿರ್ಬಂಧಿಸುತ್ತದೆ. ‘ಅದ್ವೇಷ್ಟಾ ಸರ್ವಭೂತಾನಾಂ ಮೈತ್ರಃ ಕರುಣ ಏವ ಚ’ ಮುಂತಾದ ಶ್ಲೋಕಗಳಲ್ಲಿ ಈ ಅರ್ಥವನ್ನು ಕಾಣಬಹುದು. ಅರ್ಜುನನನ್ನು ಭಗವಂತನು ಯುದ್ಧದಲ್ಲಿ ತೊಡಗುವಂತೆ ಮಾಡಿದರೂ ಅದಕ್ಕೆ ದ್ವೇಷ ಭಾವನೆ ಕಾರಣವಲ್ಲ. ಅಧರ್ಮವನ್ನು ಕೊನೆಗಾಣಿಸುವುದಷ್ಟೇ ಕೃಷ್ಣನ ಗುರಿ. ಕ್ಷತ್ರಿಯನಾದ ಕಾರಣ ಅರ್ಜುನನು ಯುದ್ಧ ಮಾಡುವುದು ಆಗ ಅನಿವಾರ್ಯವಾಗಿತ್ತು. ಕಾಮ, ಕ್ರೋಧ ಮತ್ತು ಲೋಭಗಳ ಕಾರಣದಿಂದ ಭಗವಂತನು ಅರ್ಜುನನು ಯುದ್ಧ ಮಾಡುವಂತೆ ಪ್ರೇರೇಪಿಸಲಿಲ್ಲ. ಅಂತೆಯೇ ಕಾಮ, ಕ್ರೋಧ ಮತ್ತು ಲೋಭಗಳನ್ನು ಭಗವಂತನು ನರಕದ ದಾರಿಗಳೆಂದು ಕರೆದಿದ್ದಾನೆ.
ಎಲ್ಲ ಜೀವಿಗಳಲ್ಲಿ ಸಮತ್ವದ ಭಾವನೆಯಿರಬೇಕೆಂಬುದು ಗೀತೆಯ ಒಂದು ಪ್ರಮುಖ ಸಂದೇಶ. ‘ಸಮಂ ಸರ್ವೆಷು ಭೂತೇಷು ತಿಷ್ಠಂತಂ ಪರಮೇಶ್ವರಮ್, ‘ಪಂಡಿತಾಃ ಸಮದರ್ಶಿನಃ’ ಮುಂತಾದ ಶ್ಲೋಕಗಳು ಸಮಾನತೆಯನ್ನು ಬೋಧಿಸುತ್ತವೆ. ಎಲ್ಲ ಜೀವಿಗಳಲ್ಲೂ ಒಬ್ಬನೇ ಪರಮಾತ್ಮನಿರುವುದರಿಂದ ಪರಸ್ಪರ ಭೇದಭಾವ ಸಲ್ಲದು ಎಂಬ ಅರ್ಥದಲ್ಲಿ ಹಲವು ಶ್ಲೋಕಗಳು ಗೀತೆಯಲ್ಲಿವೆ.
ಧರ್ಮಗಳ ಪರಮಲಕ್ಷ್ಯ ಹೀಗೆ ಗೀತೆಯು ಹೊರಟಿರುವುದು ಸಮಾಜವನ್ನು ಒಗ್ಗೂಡಿಸಲಿಕ್ಕೆ. ಎಲ್ಲ ಧರ್ಮಗಳ ಉದ್ದೇಶ ಮನುಷ್ಯನನ್ನು ಪಾಪಗಳಿಂದ ವಿಮುಕ್ತಿಗೊಳಿಸುವುದಲ್ಲವೇ? ಧರ್ಮಗಳು ಒಂದು ಹಂತದವರೆಗೆ ಮಾತ್ರ ನಿಲ್ಲುತ್ತವೆ. ತತ್ತ್ವಜ್ಞಾನಿಯ ದೃಷ್ಟಿಯಲ್ಲಿ ಕೊನೆಗೆ ಧರ್ಮಗಳೆಲ್ಲವೂ ಹಿಂದೆ ಸರಿದುಬಿಡುತ್ತವೆ. ಕಾರಣ, ಧರ್ಮಗಳ ಪರಮ ಲಕ್ಷ್ಯವಾಗಿರುವ ಭಗವಂತನ ಸಾನ್ನಿಧ್ಯವೇ ಮನುಷ್ಯನ ಗುರಿಯಾಗಿರಬೇಕು. ಇದನ್ನು ಗೀತೆಯ ಕೊನೆಯಲ್ಲಿ ಭಗವಂತನು ಸ್ಪಷ್ಟವಾಗಿ ತಿಳಿಸಿದ್ದಾನೆ.
ಸರ್ವಧರ್ವನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ |
ಅಹಂ ತ್ವಾ ಸರ್ವಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ||
ಗೀತಾಚಾರ್ಯನು ತೋರಿದ ಈ ಮಹೋನ್ನತ ಮಾರ್ಗದಲ್ಲಿ ಸಾಗೋಣ.
(ನಿರೂಪಣೆ: ಹರ್ಷ ಪುರೋಹಿತ ದಾವಣಗೆರೆ)
ಸಮಾರೋಪಕ್ಕೆ ರಾಜ್ಯಪಾಲರು
ಈ ಬಾರಿಯ ಅಭಿಯಾನಕ್ಕೆ ಗೀತೆಯ 5ನೇ ಅಧ್ಯಾಯವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ದಾವಣಗೆರೆ ಜಿಲ್ಲೆಯ ವಿವಿಧ ಶಾಲೆಗಳು, ದೇವಾಲಯಗಳು, ಜಿಲ್ಲಾ ಕಾರಾಗೃಹದಲ್ಲಿ ಗೀತಾ ಪಠಣದ ಸಪ್ತಾಹ ನಡೆದಿದೆ. ವಿದ್ಯಾರ್ಥಿಗಳಿಗೆ ತಾಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದ ಸ್ಪರ್ಧೆಗಳು ನಡೆಯಲಿವೆ. ಡಿ. 3ರಂದು ಗೀತಾ ಜಯಂತಿಯ ಪ್ರಯುಕ್ತ ಸಂಪೂರ್ಣ ಗೀತೆಯ ಪಠಣ ನಡೆಯಲಿದ್ದು, ಡಿ. 4ರಂದು ಮಹಾ ಸಮರ್ಪಣ ನಡೆಯಲಿದೆ. ರಾಜ್ಯಪಾಲ ಥಾವರಚಂದ್ ಗೆಹಲೋತ್, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವರಾದ ಬಿ.ಸಿ. ನಾಗೇಶ್, ಬೈರತಿ ಬಸವರಾಜ್ ಮತ್ತು ಪ್ರಮುಖ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ.