

ಬಾಳೆಹೊನ್ನೂರು: ಜಪ, ಧ್ಯಾನ, ಅನುಷ್ಠಾನಗಳಿಂದ ಇಂದ್ರೀಯ ನಿಗ್ರಹವಾಗಲಿದೆ. ಆತ್ಮ, ಪರಮಾತ್ಮ ಒಂದೇ ಎಂದು ತಿಳಿದಾಗ ನಮಗೆ ಮೋಕ್ಷ ಪ್ರಾಪ್ತವಾಗುತ್ತದೆ ಎಂದು ಧರ್ಮಸ್ಥಳ ನಿತ್ಯಾನಂದನಗರದ ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನದ ಮಠಾಧೀಶ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಸಮೀಪದ ಖಾಂಡ್ಯದ ಶ್ರೀ ಮಾರ್ಕಾಂಡೇಶ್ವರ ಸ್ವಾಮಿ ಸನ್ನಿಧಿಯಲ್ಲಿ ದಾನಿ ಯು.ಪಿ.ಮುದರಪೂಜಾರಿ ಮಕ್ಕಳು ನಿರ್ಮಿಸಿಕೊಟ್ಟ ನೂತನ ಸ್ವಾಗತ ಕಮಾನು ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮನಸ್ಸಿಗೆ ಯಾವುದು ಹಿತ ಕೊಡುತ್ತದೆಯೋ ಅದುವೆ ಧರ್ಮ. ನಿಜವಾದ ಸುಖವು ಧರ್ಮದ ಅಂತರಾಳದಲ್ಲಿದೆ. ಭಗವಂತನಲ್ಲಿ ನಂಬಿಕೆ ಇಡದೆ ನಾವು ನೆಮ್ಮದಿ ಕಳೆದುಕೊಳ್ಳುತ್ತಿದ್ದೇವೆ. ಇಂದಿನ ಮಕ್ಕಳಿಗೆ ಭಾರತೀಯ ಪರಂಪರೆಯ ಮೌಲ್ಯಯುತ ಶಿಕ್ಷಣದ ಅಗತ್ಯವಿದೆ. ಬಾಲ್ಯದಿಂದಲೇ ಶಿಸ್ತು, ಸಂಸ್ಕಾರ, ಧನಾತ್ಮಕ ಚಿಂತನೆಗಳನ್ನು ಕಲಿಸಬೇಕು ಎಂದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಕೇಂದ್ರಗಳು ಸಮಾಜವನ್ನು ಕಟ್ಟುವ ಕೆಲಸ ಮಾಡುತ್ತಿವೆ. ಜಾತಿ ಹೆಸರಿನಲ್ಲಿ ಅಸ್ಪಶ್ಯತೆ ಸಲ್ಲದು ಎಂದು ಹೇಳಿದರು.
ಮಾಜಿ ಸಚಿವ ಡಿ.ಎನ್.ಜೀವರಾಜ್ ಮಾತನಾಡಿ, ಭಾರತವು ಧರ್ಮ, ಆಚರಣೆ, ನಂಬಿಕೆ ಹಾಗೂ ಹಿಂದುತ್ವದ ಆಧಾರದಲ್ಲಿ ಗಟ್ಟಿಯಾಗಿ ನೆಲೆ ನಿಂತಿದೆ ಎಂದರು. ಶಾಸಕ ಟಿ.ಡಿ.ರಾಜೇಗೌಡ, ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಸ್.ವಿ.ಮಂಜುನಾಥ್, ಮಾಗಲು ಪ್ರೇಮೇಶ್, ಎಂ.ಜೆ.ಚಂದ್ರಶೇಖರ್, ಜಯಶೀಲ್ ಪೂಜಾರಿ, ಬಿ.ಎಸ್.ರತ್ನಾಕರ್, ಸಂದೀಪ್, ಶ್ರುತಿ ಹೊಳ್ಳ ಮತ್ತಿತರರಿದ್ದರು.