ಸೋಮವಾರಪೇಟೆ: ಪಟ್ಟಣದ ಶ್ರೀ ಮುತ್ತಪ್ಪಸ್ವಾಮಿ ಮತ್ತು ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಮೂರು ದಿನಗಳು ಆಯೋಜಿಸಿದ್ದ ಜಾತ್ರಾ ಮಹೋತ್ಸವವು ಬುಧವಾರ ಬೆಳಗ್ಗೆ ಸಂಪನ್ನಗೊಂಡಿತು.
ಭಗವತಿ ದೇವಿಯ ಕೋಲ, ಕಂಡಕರ್ಣ ದೇವರ ಕೋಲ ನೆರೆದಿದ್ದ ನೂರಾರು ಭಕ್ತರನ್ನು ಮೂಕವಿಸ್ಮಿತರನ್ನಾಗಿಸಿತು. ಬೆಳಗ್ಗೆ 3 ಗಂಟೆಗೆ ಪೊಟ್ಟನ್ ದೇವರ ಕೋಲ ಜರುಗಿ ನಂತರ ಅಗ್ನಿಗೇರಿ ಪೂರ್ಣಗೊಂಡಿತು. ಬೆಳಗ್ಗೆ 4 ಗಂಟೆಗೆ ಕರಿಂಗುಟ್ಟಿ ಚಾತನ್ ದೇವರ ಕೋಲ, ನಂತರ ಶ್ರೀ ಮುತ್ತಪ್ಪನ್ ಮತ್ತು ತಿರುವಪ್ಪನ್ ದೇವರ ಕೋಲಗಳು ಜರುಗಿದವು. ಬೆಳಗ್ಗೆ 7 ಗಂಟೆಗೆ ರಕ್ತ ಚಾಮುಂಡೇಶ್ವರಿ ಕೋಲ, ನಂತರ ಕ್ರಮವಾಗಿ ವಿಷ್ಣುಮೂರ್ತಿ ದೇವರ ಕೋಲ, ಕಂಡಕರ್ಣ ದೇವರ ಗುರು ಶ್ರೀ ದರ್ಪಣ, ಗುಳಿಗ ದೇವರ ಕೋಲ, ಗುಳಿಗ ದೇವರಿಗೆ ಬಲಿ ಅರ್ಪಣೆ ನಡೆಯಿತು. ಕಾರ್ಯಕ್ರಮದ ಮುಕ್ತಾಯದಲ್ಲಿ ವಿಷ್ಣುಮೂರ್ತಿ ದೇವರು ದೇವಾಲಯಕ್ಕೆ ಮೂರು ಪ್ರದಕ್ಷಿಣೆ ಬರುವುದರೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು.
ಕೋಲಗಳ ನೇತೃತ್ವವನ್ನು ಕೇರಳದ ಸನಿಲ್ ಮಡೆಯಚ್ಚನ್ ವಹಿಸಿದ್ದರು. ಅವರೊಂದಿಗೆ ಮುತ್ತಪ್ಪ ದೇವಾಲಯದ ಅರ್ಚಕ ಸುಧೀಶ್ ಮಡೆಯನ್ ಸಹಕರಿಸಿದರು. ಜಾತ್ರಾ ಮಹೋತ್ಸವದ ನೇತೃತ್ವವನ್ನು ದೇವಾಲಯ ಸಮಿತಿ ಅಧ್ಯಕ್ಷ ಎನ್.ಡಿ.ವಿನೋದ್‌ಕುಮಾರ್ ದೇವಾಲಯದ ಸಮಿತಿ ಪದಾಧಿಕಾರಿಗಳು ಇದ್ದರು. ಮೂರೂ ದಿನಗಳಲ್ಲಿ ಕ್ಷೇತ್ರದಲ್ಲಿ ಭಕ್ತಾದಿಗಳಿಗೆ ಅನ್ನದಾನವನ್ನು ಏರ್ಪಡಿಸಲಾಗಿತ್ತು.