ಟಾಲಿವುಡ್​ನಲ್ಲಿ ಹೆಚ್ಚಾಯ್ತು 'ಕಿಸ್'​​ ಬೆಡಗಿ ಹವಾ; 'ಭಗವಂತ ಕೇಸರಿ' ಟ್ರೇಲರ್​ ರಿಲೀಸ್​

Untitled design - 2023-10-09T090021.476
Published on

ಆಂಧ್ರಪ್ರದೇಶ: ತೆಲುಗು ಚಿತ್ರರಂಗದ ಹಿರಿಯ ನಟ ನಂದಮೂರಿ ಬಾಲಕೃಷ್ಣ ಅಭಿನಯದ ಬಹುನಿರೀಕ್ಷಿತ 'ಭಗವಂತ ಕೇಸರಿ' ಚಿತ್ರದ ಟ್ರೇಲರ್ ಇದೀಗ ಯೂಟ್ಯೂಬ್​ನಲ್ಲಿ ಅಧಿಕೃತವಾಗಿ ಬಿಡುಗಡೆಗೊಂಡಿದ್ದು, ಟ್ರೇಲರ್​ಗೆ ಬಾಲಯ್ಯ ಫ್ಯಾನ್ಸ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಶ್ರೀಲೀಲಾ, ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಟ್ರೇಲರ್ ಬಿಡುಗಡೆಗಾಗಿ ಹಮ್ಮಿಕೊಂಡಿದ್ದ ಅದ್ಧೂರಿ ಕಾರ್ಯಕ್ರಮದಲ್ಲಿ ಚಿತ್ರದ ನಿರ್ದೇಶಕರಾದ ಬಾಬಿ, ಗೋಪಿಚಂದ್ ಮಾಲಿನೇನಿ ಮತ್ತು ವಂಶಿ ಪೈಡಿಪಲ್ಲಿ ಭಾಗಿಯಾಗಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿ ಮಿಂಚಿದ ಗ್ಲಾಮರಸ್​ ನಟಿ ಶ್ರೀಲೀಲಾ 'ಭಗವಂತ ಕೇಸರಿ' ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಮನಬಿಚ್ಚಿ ಮಾತನಾಡಿದರು.

“ನಾನು ವಾರಂಗಲ್‌ಗೆ ಭೇಟಿ ನೀಡಿ ತುಂಬಾ ದಿನಗಳೇ ಆಗಿತ್ತು. ಚಿತ್ರದಲ್ಲಿ ನಾನು ನಿರ್ವಹಿಸಿದ ಪಾತ್ರ ವಾರಂಗಲ್‌ನಿಂದ ಬಂದಿದ್ದು, ನಾವು ಇಲ್ಲಿ ಕಾರ್ಯಕ್ರಮವನ್ನು ನಡೆಸಿದ್ದೇವೆ. ಯಾವಾಗಲೂ ನಟರಿಗೆ 'ವಿಜ್ಜಿ ಪಾಪಾ' (ಶ್ರೀಲೀಲಾ ಪಾತ್ರದ ಹೆಸರು) ರೀತಿಯ ಪಾತ್ರಗಳು ಸಿಗುವುದಿಲ್ಲ ಮತ್ತು ಅದಕ್ಕಾಗಿ ನಾನು ಅನಿಲ್ ರವಿಪುಡಿ ಅವರಿಗೆ ಕೃತಜ್ಞಳಾಗಿದ್ದೇನೆ. ಭಗವಂತ ಕೇಸರಿ ಚಿತ್ರದ ಭಾಗವಾಗಿದ್ದಕ್ಕೆ ನನಗೆ ತುಂಬಾ ಸಂತೋಷವಿದೆ" ಎಂದು ಹೇಳಿದರು.

“ಬಾಲಕೃಷ್ಣ ಅವರು ನನಗೆ ಹೆಚ್ಚಿನ ಪ್ರೋತ್ಸಾಹ ನೀಡಿದರು. ಈ ಚಿತ್ರದಲ್ಲಿ ಅವರಿಂದ ಸಾಕಷ್ಟು ಕಲಿತಿದ್ದೇನೆ. ಚಿತ್ರೀಕರಣದ ವೇಳೆ ನನ್ನನ್ನು ಸಿಕ್ಕಾಪಟ್ಟೆ ನಗಿಸುತ್ತಿದ್ದರು. ಸಿನಿಮಾದಲ್ಲಿ ಸಂದೇಶವೂ ಇದೆ. ಸದ್ಯ ಕೆಲವು ಅಂಶಗಳನ್ನು ನಾನು ಈಗ ಬಹಿರಂಗಪಡಿಸುವಂತಿಲ್ಲ" ಎಂದು ಹೇಳಿದರು. ಚಿತ್ರವು ಇದೇ ಅಕ್ಟೋಬರ್ 19 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.

ಸದ್ಯ ಭಗವಂತ ಕೇಸರಿ ಸೇರಿದಂತೆ ಟಾಲಿವುಡ್​ನ ಸ್ಟಾರ್​ ನಟರ ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸುತ್ತಿರುವ ಶ್ರೀಲೀಲಾ, ಟಾಪ್​ ನಟಿಯರನ್ನು ಹಿಂದಿಕ್ಕಿ ತಮ್ಮ ಛಾಪನ್ನು ಪರಿಚಯಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಇತ್ತೀಚೆಗಷ್ಟೇ ರಾಮ್​ ಪೋತಿನೇನಿ ಅವರೊಟ್ಟಿಗೆ ನಟಿಸಿದ 'ಸ್ಕಂದ' ಚಿತ್ರ ಬಿಡುಗಡೆಗೊಂಡು ಸಿನಿಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿತು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net