

ಶಿವಮೊಗ್ಗ: ಭಾರತೀಯ ಸಂಸ್ಕೃತಿ ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠವಾದುದು. ಇಂತಹ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೂ ರವಾನಿಸಬೇಕು. ಸಾಹಿತ್ಯದ ಮೂಲಕ ಸಂಸ್ಕೃತಿಯ ಮಹತ್ವ ಸಾರಬೇಕೆಂದು ಶಾಸಕ, ಸಹಚೇತನ ನಾಟ್ಯಾಲಯದ ಗೌರವಾಧ್ಯಕ್ಷ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಯುಗಾದಿ ಅಂಗವಾಗಿ ಸಹಚೇತನ ನಾಟ್ಯಾಲಯದಿಂದ ಪ್ರಕಟಿಸಿರುವ 15ನೇ ವರ್ಷದ ಕವಿ ಕಂಡ ಯುಗಾದಿ ಕವನ ಸಂಕಲನವನ್ನು ಭಾನುವಾರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಭಾರತೀಯ ಸಮಾಜ ವೈವಿಧ್ಯಮಯ ಮತ್ತು ಸಮೃದ್ಧವಾಗಿದೆ ಎಂದರು.
ಸಂಪ್ರದಾಯ, ನಂಬಿಕೆ, ಪದ್ಧತಿ ಮತ್ತು ಮೌಲ್ಯಗಳು ನಮ್ಮ ಸಂಸ್ಕೃತಿಯ ಶ್ರೀಮಂತಿಕೆಯನ್ನು ಕಾಪಾಡುತ್ತವೆ. ವಿವಿಧ ಧರ್ಮಗಳು, ಉಪಭಾಷೆಗಳು, ಭೌಗೋಳಿಕ ಸ್ಥಳ, ಗಡಿಗಳು ಮತ್ತು ಸಾಮಾಜಿಕ ಸಾಮರಸ್ಯ ಭಾರತೀಯ ಸಮಾಜದ ಪ್ರಮುಖ ಲಕ್ಷಣಗಳಲ್ಲಿ ಒಂದು ಎಂದರು.
ಭಾರತೀಯ ಸಂಸ್ಕೃತಿಯಲ್ಲಿ ವಿವಿಧ ಆಚರಣೆಗಳಿವೆ. ವಿವಿಧ ಪ್ರದೇಶಗಳಲ್ಲಿ ಹಬ್ಬಗಳನ್ನು ವಿಭಿನ್ನ, ವಿಶಿಷ್ಟ ಶೈಲಿಯೊಂದಿಗೆ ಆಚರಿಸುತ್ತೇವೆ. ಅವು ಕಾಲೋಚಿತವಾಗಿ ಪ್ರಕೃತಿ ಮತ್ತು ಹವಾಮಾನಕ್ಕೆ ಸಂಬಂಧಿಸಿದ್ದಾಗಿವೆ. ಯುಗಾದಿ ಕೂಡ ಇದರಲ್ಲಿ ಪ್ರಮುಖ. ಭಾರತೀಯ ಸಂಪ್ರದಾಯದಲ್ಲಿ ನಂಬಿಕೆಗಳು, ಆಚರಣೆಗಳು ಮತ್ತು ಪಾಕಪದ್ಧತಿಯ ಅಂಶಗಳಿವೆ. ಇದರ ಇತಿಹಾಸದೊಂದಿಗೆ ಭಾರತೀಯ ಸಂಸ್ಕೃತಿಯ ಸಾರವನ್ನು ಅರಿಯಲು ಸಂಪ್ರದಾಯಗಳು ಸಹಕಾರಿಯಾಗಿವೆ ಎಂದು ತಿಳಿಸಿದರು.
ಸಹಚೇತನ ನಾಟ್ಯಾಲಯವು ಕಳೆದ 15 ವರ್ಷಗಳಿಂದ ಹೊರತರುತ್ತಿರುವ ಕವಿ ಕಂಡ ಯುಗಾದಿ ಕವನ ಸಂಕಲನವು ಸಂಗ್ರಹ ಯೋಗ್ಯವಾಗಿದೆ. ಪುಸ್ತಕ ಓದುವ ಅಭಿರುಚಿ ಕಡಿಮೆಯಾಗುತ್ತಿದೆ ಎಂಬ ವಾತಾವರಣದಲ್ಲಿ ನಿರಂತರವಾಗಿ ಕವನ ಸಂಕಲನ ಹೊರತರುವ ಮೂಲಕ ಸಂಸ್ಥೆ ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂದು ಹೇಳಿದರು.
ಪ್ರಮುಖರಾದ ಚೇತನ್, ಸಹನಾ ಚೇತನ್, ಡಾ. ನಾಗಮಣಿ, ಆನಂದರಾಮ್, ವಿನಯ್, ಉಷಾರಾಣಿ, ಮಾಲತೇಶ್, ದಿನೇಶ್ ಆಚಾರ್ಯ ಇತರರಿದ್ದರು.