

ಸೊರಬ: ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗುವ ಜತೆಗೆ ಕ್ರೀಡೆಗಳಲ್ಲಿ ಪಾಲ್ಗೊಂಡರೆ ದೈಹಿಕ ಹಾಗೂ ಮಾನಸಿಕ ಆರೋಗ್ಯವೂ ಉತ್ತಮವಾಗಿರುತ್ತದೆ ಎಂದು ತಾಪಂ ಮಾಜಿ ಅಧ್ಯಕ್ಷ ಎಚ್.ಗಣಪತಿ ಹೇಳಿದರು.
ತಾಲೂಕಿನ ಹರೀಶಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಜಿಲ್ಲಾಡಳಿತ, ಜಿಪಂ, ಶಿಕ್ಷಣ ಇಲಾಖೆ, ತಾಪಂ, ಹರೀಶಿ ಗ್ರಾಪಂನಿಂದ ಹಮ್ಮಿಕೊಂಡಿದ್ದ 17 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಜಿಲ್ಲಾ ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆಯನ್ನು ಶೈಕ್ಷಣಿಕ ಜೀವನದ ಅವಿಭಾಜ್ಯ ಅಂಗವನ್ನಾಗಿ ಸ್ವೀಕರಿಸಬೇಕು. ಆಗ ಸಾಧನೆ ಮಾಡಲು ಸಾಧ್ಯ ಎಂದರು.
ಜಿಪಂ ಮಾಜಿ ಸದಸ್ಯ ತಬಲಿ ಬಂಗಾರಪ್ಪ ಮಾತನಾಡಿ, ಕ್ರೀಡೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಹರೀಶಿ ಭಾಗದಲ್ಲಿ ಕಬಡ್ಡಿ ಕ್ರೀಡೆಗೆ ಬಹಳ ಮಹತ್ವವಿದೆ ಎಂದು ಹೇಳಿದರು.
ಬಿಇಒ ಆರ್.ಪುಷ್ಪಾ ಮಾತನಾಡಿ, ಶಿಕ್ಷಣಕ್ಕೆ ನೀಡಿದ ಆದ್ಯತೆಯನ್ನು ಕ್ರೀಡೆಗೂ ನೀಡಬೇಕು ಎಂದರು. ತಾಪಂ ಮಾಜಿ ಸದಸ್ಯ ಸುನೀಲ್ ಗೌಡ, ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ್ ಎಸ್. ಮೋಗೇರ, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಪ್ರಕಾಶ್ ಮಾತನಾಡಿದರು.
ಸಹಕಾರ ಬ್ಯಾಂಕ್ ನಿರ್ದೇಶಕ ಕೆ.ಪಿ.ರುದ್ರಗೌಡ, ಗ್ರಾಪಂ ಅಧ್ಯಕ್ಷೆ ಅನಸೂಯಾ, ತಾಪಂ ಮಾಜಿ ಸದಸ್ಯ ಸುನೀಲ್ ಗೌಡ, ಜಯಶೀಲ ಗೌಡ, ಎಸ್.ಮಂಜುನಾಥ್, ಉಮಾಪತಿ, ರಾಕೇಶ್ ತಬಲಿ, ರವಿಕುಮಾರ್, ಶಿವಾನಂದ, ಲಿಂಗರಾಜ್ ಒಡೆಯರ್, ಅಂಜನಪ್ಪ, ಓಂಕಾರಪ್ಪ, ಸುಧಾಕರ್, ಪ್ರಶಾಂತ್, ಬಲೀಂದ್ರಪ್ಪ, ಮುಖ್ಯ ಶಿಕ್ಷಕ ಮಂಜುನಾಥ್, ಶಿಕ್ಷಕ ಕೆರೆಸ್ವಾಮಿ ಇದ್ದರು.