

ಕಡೂರು: ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಗೆ ಕ್ರೀಡೆಗಳು ಸಹಕಾರಿ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಚರ್ಕವರ್ತಿ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಬುಧವಾರ ನಡೆದ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಕ್ರೀಡೆಯೂ ಜೀವನದ ಒಂದು ಭಾಗವಾಗಿದ್ದು, ಸ್ಪರ್ಧಾತ್ಮಕ ಮನೋಭಾವನೆ ಮೂಡಿಸುತ್ತದೆ. ನೀತಿ ನಿಯಮಗಳ ಸಂವಹನೆಯೊಂದಿಗೆ ಶಿಸ್ತಿನ ಅರಿವು ಉಂಟಾಗುತ್ತದೆ. ಕ್ರೀಡೆಯಲ್ಲಿ ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಹೆಚ್ಚಿಸುತ್ತದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಸಿದ್ದರಾಜುನಾಯ್ಕ ಮಾತನಾಡಿ, ಕ್ರೀಡೆಗಳಿಂದ ಮನುಷ್ಯನ ದೈಹಿಕ ಮತ್ತು ಮಾನಸಿಕವಾಗಿ ವೃದ್ಧಿಯಾಗಲಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕಿದೆ ಎಂದರು.
ಚರ್ಕವರ್ತಿ ಪದವಿ ಪೂರ್ವ ಕಾಲೇಜು ಸಂಸ್ಥೆ ಅಧ್ಯಕ್ಷ ಎಂ.ಸಿ. ಪ್ರಕಾಶ್ ಮಾತನಾಡಿ, ಗ್ರಾಮೀಣ ಭಾಗದ ಪ್ರತಿಭೆಗಳು ತಮ್ಮ ಕ್ರೀಡಾಪ್ರತಿಭೆ ಪ್ರದರ್ಶನಕ್ಕೆ ಕ್ರೀಡಾಕೂಟಗಳು ಸಹಕಾರಿ. ಆರೋಗ್ಯ ದೃಷ್ಟಿಯಿಂದಲೂ ಇಂದಿನ ದಿನಗಳಲ್ಲಿ ಕ್ರೀಡೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಿದೆ ಎಂದರು.
ತಾಲೂಕಿನ 24 ಪದವಿ ಪೂರ್ವ ಕಾಲೇಜುಗಳ ಕ್ರೀಡಾಪಟು ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಜಿಪಂ ಮಾಜಿ ಸದಸ್ಯ ಶರತ್‌ಕೃಷ್ಣಮೂರ್ತಿ, ಪುರಸಭೆ ಸದಸ್ಯ ತೋಟದಮನೆ ಮೋಹನ್‌ಕುಮಾರ್, ರೋಟರಿ ಕ್ಲಬ್ ಅಧ್ಯಕ್ಷ ಕೆ.ಪಿ.ರಾಘವೇಂದ್ರ, ಪ್ರಾಚಾರ್ಯರಾದ ರುದ್ರೇಶ್, ತವರಾಜ್, ಕೆಂಪಸಿದ್ದಪ್ಪ, ಜಿ.ರೇವಣ್ಣ, ರಾಜಪ್ಪ, ಶರತ್, ಚನ್ನಬಸಪ್ಪ, ರವಿಕಾಂತ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಆನಂದಪ್ಪ, ದರ್ಶನ್, ಬಿ.ಎಂ.ಗಿರೀಶ್, ಧನಂಜಯ್ ಇದ್ದರು.