

ಸಾಗರ: ಆರೋಗ್ಯಕರ ಬದುಕಿಗೆ ಕ್ರೀಡೆ ಬಹಳ ಮುಖ್ಯ. ಕ್ರೀಡೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರೆ ಪಾಠದಲ್ಲೂ ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಲು ಸಾಧ್ಯ ಎಂದು ಬಿಇಒ ಕಚೇರಿಯ ದೈಹಿಕ ಶಿಕ್ಷಣ ಪರಿವೀಕ್ಷಕ ಎನ್.ಕೆ.ರಮೇಶ್ ಹೇಳಿದರು.
ಸಾಗರ ಕರಾಟೆ ಸಂಸ್ಥೆಯಿಂದ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ಶಿಕ್ಷಣ ಇಲಾಖೆಯಿಂದ ಹಮ್ಮಿಕೊಂಡಿದ್ದರ ತಾಲೂಕು ಮಟ್ಟದ 17ವರ್ಷದೊಳಗಿನವರ ಕರಾಟೆ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಇಂತಹ ಕ್ರೀಡೆಗಳನ್ನು ಕಲಿಯುವ ಅಗತ್ಯವಿದೆ. ವಿದ್ಯಾರ್ಥಿ ದಿಸೆಯಲ್ಲೇ ಮಕ್ಕಳಿಗೆ ಕರಾಟೆ ಸೇರಿ ಆತ್ಮರಕ್ಷಣೆ ಮಾಡಿಕೊಳ್ಳುವ ಕಲೆಯನ್ನೂ ಕಲಿಸುವ ಅಗತ್ಯವಿದೆ. ಅದರಲ್ಲಿಯೂ ಹೆಣ್ಣುಮಕ್ಕಳು ಕಲಿಯುವ ಮೂಲಕ ಸ್ವಯಂ ರಕ್ಷಣೆಗೆ ಒತ್ತು ನೀಡಬೇಕು ಎಂದರು.
ಮೊದಲ ಬಾರಿಗೆ ತಾಲೂಕು ಮಟ್ಟದ ಕರಾಟೆ ಪಂದ್ಯಾವಳಿ ಸುಸಜ್ಜಿತ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಸಾಗರ ಕರಾಟೆ ಸಂಸ್ಥೆ ಸಾವಿರಾರು ವಿದ್ಯಾರ್ಥಿಗಳಿಗೆ ಕರಾಟೆ ಕಲಿಕೆಗೆ ಪ್ರೇರಣೆ ನೀಡಿದೆ ಎಂದು ಹೇಳಿದರು.
ಶಿವಮೊಗ್ಗ ಕರಾಟೆ ಸಂಸ್ಥೆ ಮುಖ್ಯಸ್ಥ ಶಿಯಾನ್ ವಿನೋದ್ ಮಾತನಾಡಿ, ಕರಾಟೆ ಕಲಿತ ಮಕ್ಕಳಿಗೆ ಉದ್ಯೋಗದಲ್ಲಿ ಮೀಸಲಾತಿ ಇರುತ್ತದೆ. ಇದರ ಜತೆಗೆ ಮಕ್ಕಳು ದೈನಂದಿನ ಚಟುವಟಿಕೆಯಲ್ಲಿ ಕ್ರಿಯಾಶೀಲವಾಗಿದ್ದು, ಉತ್ತಮ ಆರೋಗ್ಯ ಪಡೆದುಕೊಳ್ಳಲು ನೆರವಾಗುತ್ತದೆ ಎಂದರು.
ಶಿಯಾನ್ ಪಂಚಪ್ಪ, ಕರಾಟೆ ತರಬೇತುದಾರರಾದ ಲಕ್ಷ್ಮಣಾಚಾರ್, ಅಲೋಕ್, ದಿಗಂತ, ಆದಿತ್ಯ, ನಂದನ್, ಪ್ರತೀಕ್ಷಾ, ಬಾಂಧವ್ಯಾ ಇತರರಿದ್ದರು.