

ಸಾಗರ: ಯುವಜನರು ಮಾನಸಿಕ ಒತ್ತಡ ನಿರ್ವಹಣೆ ಮತ್ತು ಸದೃಢ ದೇಹಕ್ಕಾಗಿ ಕ್ರೀಡೆಯಲ್ಲಿ ತೊಡಗಿಕೊಳ್ಳಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಾಗರದ ಶಾಂತವೇರಿ ಗೋಪಾಲ ಗೌಡ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಈಡಿಗ ಟ್ರೋಫಿ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಾತನಾಡಿದ ಅವರು, ಯುವಜನರು ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ದುಶ್ಚಟಗಳಿಂದ ದೂರವಿರಲು ಸಾಧ್ಯ. ಬಾಲ್ಯದಿಂದಲೇ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಪ್ರತಿವರ್ಷ ಈಡಿಗ ಸಮಾಜದ ಯುವಕರು ಕ್ರಿಕೆಟ್ ಪಂದ್ಯಾವಳಿ ಆಯೋಜಿಸುವ ಮೂಲಕ ಸಂಘಟನೆ ಗಟ್ಟಿಗೊಳಿಸುವ ಹಾಗೂ ಯುವಶಕ್ತಿಯನ್ನು ಜಾಗೃತಿಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಇಂತಹ ಕ್ರೀಡಾಕೂಟಗಳಿಗೆ ಎಲ್ಲ ರೀತಿಯ ಸಹಕಾರವನ್ನು ನೀಡಲಾಗುತ್ತಿದೆ. ಈ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಯುವಜನರು ಆರೋಗ್ಯವನ್ನು ಸುಸ್ಥಿರವಾಗಿ ಇಟ್ಟುಕೊಳ್ಳಲು ನಿರಂತರವಾಗಿ ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕು ಎಂದರು. ನಗರಸಭೆ ಸದಸ್ಯ ಗಣಪತಿ, ಪ್ರಮುಖರಾದ ತಾರಾಮೂರ್ತಿ, ಲೋಹಿತ್, ನಾರಾಯಣಪ್ಪ, ಧರ್ಮೇಂದ್ರ ಶಿರವಾಳ, ಆನಂಧ್, ಗಿರೀಶ್ ಕೋವಿ, ಕಲಸೆ ಚಂದ್ರಪ್ಪ ಇತರರು ಹಾಜರಿದ್ದರು.