

ಎನ್.ಎಲ್. ಶಿವಮಾದು
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಸರ್ಕಾರಿ ಶಾಲೆ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಸವಾಲಾಗಿರುವ ಇಂಗ್ಲಿಷ್ ಭಾಷೆಯನ್ನು ಕರಗತಗೊಳಿಸಲು ಶಿಕ್ಷಣ ಇಲಾಖೆಯು ‘ಸ್ಪೋಕನ್ ಇಂಗ್ಲಿಷ್’ ತರಗತಿಗಳನ್ನು ಪರಿಚಯಿಸುತ್ತಿದೆ.
ಸರ್ಕಾರಿ ಶಾಲೆ ಮಕ್ಕಳು ಇಂಗ್ಲಿಷ್‌ನಲ್ಲಿ ಮಾತನಾಡುವುದು, ಸಂಭಾಷಣೆಗಳನ್ನು ನಡೆಸುವುದು, ಕತೆಗಳನ್ನು ಹೇಳುವುದು, ಪರಿಷ್ಥಿತಿಯನ್ನು ಇಂಗ್ಲಿಷ್‌ನಲ್ಲಿ ಸಹಪಾಠಿಗಳಿಗೆ ವಿವರಿಸುವುದು ಹೀಗೆ ದಿನನಿತ್ಯದಲ್ಲಿ ಇಂಗ್ಲಿಷ್ ಅನ್ನು ಮಾತನಾಡುವ ಮೂಲಕ ಇಂಗ್ಲಿಷ್ ಅನ್ನು ಸುಲಭಗೊಳಿಸಲು ಹಾಗೂ ಮನದಟ್ಟು ಮಾಡಿಕೊಡಲು ಮುಂದಾಗಿದೆ.
ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಗುಣಾತ್ಮಕ ಮತ್ತು ಸೃಜನಾತ್ಮಕ ಶಿಕ್ಷಣ ನೀಡುವ ಉದ್ದೇಶದಿಂದ ಶಾಲಾ ಶಿಕ್ಷಣ ಇಲಾಖೆಯು ಶೈಕ್ಷಣಿಕ ಮಾರ್ಗಸೂಚಿ 2024-25 ಅನ್ನು ಪ್ರಕಟಿಸಿದೆ. ಗುಣಾತ್ಮಕ ಶಿಕ್ಷಣಕ್ಕಾಗಿ ಶಾಲೆಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿದ್ದು, ‘ಸ್ಪೋಕನ್ ಇಂಗ್ಲಿಷ್’ ಕೂಡ ಪ್ರಮುಖ ಯೋಜನೆಯಾಗಿದೆ. ‘ಹೌ ಟು ಮೇಕ್ ಇಂಗ್ಲಿಷ್ ಈಸಿ’ ಎಂಬ ಪರಿಕ್ಪನೆಯಲ್ಲಿ ಯೋಜನೆಯನ್ನು ರೂಪಿಸುವಂತೆ ಶಾಲಾ ಶಿಕ್ಷಕರಿಗೆ ನಿರ್ದೇಶನ ನೀಡಿದೆ.
ಸಿಇಟಿ. ನೀಟ್ ಗುರಿ:
ಸರ್ಕಾರಿ ಶಾಲೆ ಮಕ್ಕಳು ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದರೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಿಂದುಳಿಯುತ್ತಾರೆ. ಇದಕ್ಕೆ ಇಂಗ್ಲಿಷ್‌ನಲ್ಲಿ ಹೆಚ್ಚಿನ ಜ್ಞಾನ ಇಲ್ಲದಿರುವುದು ಕೂಡ ಒಂದು ಕಾರಣವಾಗಿದೆ. ವಿಜ್ಞಾನ ವ್ಯಾಸಂಗ ಮಾಡುವ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಪಿಯುಸಿ ನಂತರ ಜೆಇಇ, ನೀಟ್ ಮತ್ತು ಸಿಇಟಿ ಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ರ‌್ಯಾಂಕ್ ಗಳಿಸಲು ಕಷ್ಟಪಡುತ್ತಿದ್ದಾರೆ.
ಇಂಗ್ಲಿಷ್‌ನಲ್ಲಿರುವ ಆಕರ ಗ್ರಂಥಗಳು, ಹೆಚ್ಚಿನ ಸಂಪನ್ಮೂಲ ಸಂಗ್ರಹ, ವಿಜ್ಞಾನವನ್ನು ಆಳವಾಗಿ ಆಧ್ಯಯನ ನಡೆಸಲು ಕನ್ನಡಕ್ಕಿಂತ ಇಂಗ್ಲಿಷ್‌ನಲ್ಲಿಯೇ ವಿಸ್ತಾರವಾಗಿ ಮಾಹಿತಿ ದೊರೆಯಲಿದೆ, ಕನ್ನಡದಲ್ಲಿ ಅಷ್ಟಕಷ್ಟೇ ಎನ್ನುವಂತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಪ್ರಶ್ನೆಗಳು ಇಂಗ್ಲಿಷ್‌ನಿಂದ ಕನ್ನಡಕ್ಕೆ ಭಾಷಾಂತರಗೊಂಡಿರುತ್ತವೆ. ಕನ್ನಡದಲ್ಲಿ ಗೊಂದಲವಾದಲ್ಲಿ ಅಂತಿಮವಾಗಿ ಇಂಗ್ಲಿಷ್‌ನಲ್ಲಿರುವ ಪ್ರಶ್ನೆಯನ್ನು ಓದಿಕೊಳ್ಳುವಂತೆಯೂ ಸಲಹೆ ನೀಡಲಾಗಿರುತ್ತದೆ. ಈ ಎಲ್ಲ ಕಾರಣಗಳಿಂದ ಸರ್ಕಾರಿ ಶಾಲೆ ಮಕ್ಕಳು ಇಂಗ್ಲಿಷ್‌ನಲ್ಲಿ ನಿರರ್ಗಳವಾಗಿ ಮಾತನಾಡಬೇಕು ಎಂಬ ಉದ್ದೇಶ ಹೊಂದಲಾಗಿದೆ.
ಕೈಪಿಡಿ ಸಿದ್ಧಪಡಿಸುವಂತೆ ಶಿಕ್ಷಕರಿಗೆ ಸೂಚನೆ:
ಪ್ರಾಥಮಿಕ ಶಾಲೆಗಳಲ್ಲಿ 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ ಪದವೀಧರ ಇಂಗ್ಲಿಷ್ ಭಾಷಾ ಶಿಕ್ಷಕರ (ಜಿಪಿಟಿ) ತಂಡವು ಇಂಗ್ಲಿಷ್ ಮಾತನಾಡುವ ವಿಚಾರವಾಗಿ ಕೈಪಿಡಿ ಸಿದ್ಧಪಡಿಸುವಂತೆ ತಿಳಿಸಲಾಗಿದೆ.
ಸಾಮಾನ್ಯ ಸಂಭಾಷಣೆ, ಪರಿಸ್ಥಿತಿಯನ್ನು ವಿವರಿಸುವುದು, ತಮ್ಮ ಅನುಭವಗಳನ್ನು ಹಂಚಿಕೊಳ್ಳುವಂತಹ ಚಟುವಟಿಕೆಗಳನ್ನು ಕೈಪಿಡಿಯಲ್ಲಿ ಅಳವಡಿಸಬೇಕು. ಪ್ರತಿ ಶನಿವಾರ 3ನೇ ತರಗತಿಯನ್ನು ‘ಸ್ಪೋಕನ್ ಇಂಗ್ಲಿಷ್’ಗೆ ಮೀಸಲಿಟ್ಟು 40 ನಿಮಿಷದ ಬೋಧನಾ ಅವಧಿಯಲ್ಲಿ ಇಂಗ್ಲಿಷ್‌ನಲ್ಲಿ ಮಾತ್ರ ಮಾತನಾಡಬೇಕು. ಬೇರೆ ಭಾಷೆಯಲ್ಲಿ ಮಾತನಾಡಬಾರದು. ಈ ಮೂಲಕ ವಿದ್ಯಾರ್ಥಿಗಳು, ಸಹಜವಾಗಿ ಇಂಗ್ಲಿಷ್ ಕಲಿಯಲು ಪೂರಕ ವಾತಾವರಣವನ್ನು ಸೃಷ್ಟಿಸಬೇಕೆಂಬ ಸೂಚನೆ ನೀಡಿದೆ. ಅವಕಾಶ ಮತ್ತು ಅಗತ್ಯವಿದ್ದಲ್ಲಿ ಬಾಹ್ಯವಾಗಿಯೂ ನುರಿತ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಳ್ಳಬಹುದು ಎಂಬ ಸಲಹೆ ನೀಡಿದೆ.
- ವಿದ್ಯಾರ್ಥಿಗಳ ತಂಡ ರಚಿಸಿ ಶಾಲೆಯ ಸಂದರ್ಶನಾರ್ಥಿಗಳಿಗೆ ಶಾಲೆಯ ಕುರಿತು ಸಮಗ್ರವಾಗಿ ಆಂಗ್ಲ ಭಾಷೆಯಲ್ಲಿ ಪರಿಚಯಿಸುವುದು
- ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳಿಂದಲೇ ಇಂಗ್ಲಿಷ್‌ನಲ್ಲಿ ನಿರೂಪಣೆ ಮಾಡಿಸುವುದು. ಇಂಗ್ಲಿಷ್‌ನಲ್ಲಿ ನಿರ್ವಹಣೆ ಮಾಡುವುದು ಹೇಗೆ ಎಂದು ತಿಳಿಸಿಕೊಡುವುದು.
- ಎಲ್‌ಕೆಜಿಯಿಂದ ನಲಿ-ಕಲಿ ತರಗತಿಗಳಿಗೆ ವಿವಿಧ ರೀತಿಯ ಚಾರ್ಟ್/್ಲೆಕ್ಸ್‌ಗಳನ್ನು ರಚಿಸುವುದು. ಮಾನವನ ಶರೀರದ ಭಾಗಗಳು, ಹಣ್ಣು- ತರಕಾರಿಗಳು, ಬಣ್ಣಗಳು, ವಾಹನಗಳು ಸೇರಿ ಇತರೆ ಚಿತ್ರ/ಭಾಗಗಳನ್ನು ಗುರುತಿಸಿ ದಾಖಲಿಸುವುದು.
- ಶನಿವಾರದ 40 ನಿಮಿಷದ ಒಂದು ತರಗತಿಯಲ್ಲಿ ಕೇವಲ ಇಂಗ್ಲಿಷ್‌ನಲ್ಲಿ ಮಾತ್ರ ಎಲ್ಲ ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಹೇಳಿಕೊಳ್ಳುವ ಮೂಲಕ ಇಂಗ್ಲಿಷ್ ಮಾತನಾಡುವುದನ್ನು ಕಲಿಸುವುದು.
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಎಷ್ಟೇ ಗುಣಮಟ್ಟದ ಶಿಕ್ಷಣ ನೀಡಿದರೂ ಕನ್ನಡ ಮಾಧ್ಯಮದಲ್ಲಿ ಬೋಧನೆ ಮಾಡಲಾಗುತ್ತಿದೆ ಎಂಬ ಕಾರಣಕ್ಕೆ ದಾಖಲಾತಿ ಕುಸಿಯುತ್ತಿದೆ. ಮಕ್ಕಳನ್ನು ಆಕರ್ಷಿಸಲು ಉಚಿತ ಸಮವಸ, ಪಠ್ಯಪುಸ್ತಕ, ಮಧ್ಯಾಹ್ನದ ಬಿಸಿಯೂಟ, ಹಾಲು ಸೇರಿ ಹಲವು ಯೋಜನೆಗಳನ್ನು ಜಾರಿಗೊಳಿಸಿದರೂ ದಾಖಲಾತಿ ಮಾತ್ರ ಕುಸಿಯುತ್ತಲೇ ಇದೆ. ಆದರೆ. ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸುತ್ತಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ಹಾಗೂ ದ್ವಿಭಾಷಾ ಮಾಧ್ಯಮ ಶಾಲೆಗಳಲ್ಲಿ ದಾಖಲಾತಿ ಉತ್ತಮವಾಗಿಯೇ ಇದೆ. ಈ ನಿಟ್ಟಿನಲ್ಲಿ ಇಂಗ್ಲಿಷ್ ಕಲಿಕೆಯು ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳಕ್ಕೂ ಕಾರಣವಾಗಲಿದೆ.
ಪ್ರಸ್ತುತ ರಾಜ್ಯದ 2,403 ದ್ವಿಭಾಷಾ ಮಾಧ್ಯಮ ಶಾಲೆಗಳಲ್ಲಿ ಹಾಗೂ 283 ಕೆಪಿಎಸ್ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸಲಾಗುತ್ತಿದೆ. 2024-25ನೇ ಸಾಲಿನಲ್ಲಿ 2 ಸಾವಿರ ಕೆಪಿಎಸ್ ಶಾಲೆಗಳನ್ನು ಆರಂಭಿಸುವುದಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ೋಷಿಸಿದೆ. ಕೆಪಿಎಸ್ ಶಾಲೆಗಳಾಗಿ ಉನ್ನತೀಕರಿಸಲು ಅರ್ಹತೆ ಹೊಂದಿರುವ ಶಾಲೆಗಳಿಂದ ಅರ್ಜಿ ಆಹ್ವಾನಿಸಿದ್ದು, ಕನಿಷ್ಠ
500 ಶಾಲೆಗಳಲ್ಲಿ ಮೊದಲ ಹಂತದಲ್ಲಿ ಆರಂಭಿಸುವ ಮುನ್ಸೂಚನೆ ಇದೆ. ಈ ಎಲ್ಲ ಅಂಶಗಳು ಸರ್ಕಾರಿ ಶಾಲೆ ಮಕ್ಕಳಲ್ಲಿ ಇಂಗ್ಲಿಷ್ ಕಲಿಸುವ ಪ್ರಕ್ರಿಯೆಯ ಪೂರಕವಾಗಿದೆ.
ಸರ್ಕಾರಿ ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಎಷ್ಟೇ ಚುರುಕಾಗಿದ್ದರೂ ಇಂಗ್ಲಿಷ್ ಮಾತನಾಡಲು ಅಂಜಿಕೆ ಇದೆ. ವಿಜ್ಞಾನ ಸೇರಿ ಸ್ಪರ್ಧಾತ್ಮಕ ಪರೀಕ್ಷೆಗಳ ಆಳವಾದ ಅಧ್ಯಯನಕ್ಕೆ ಇಂಗ್ಲಿಷ್ ಅವಶ್ಯಕತೆ ಇರುವುದನ್ನು ಮನಗಂಡು ‘ಸ್ಪೋಕನ್ ಇಂಗ್ಲಿಷ್’ ಕಲಿಸಲು ಇಲಾಖೆಯು ಒತ್ತು ನೀಡಿದೆ. - ಎಂಎಸ್. ಪ್ರಸನ್ನಕುಮಾರ್, ಪ್ರಾಥಮಿಕ ಶಿಕ್ಷಣ ನಿರ್ದೇಶಕ