ಸರ್ಕಾರಿ ಶಾಲೆ ಮಕ್ಕಳಿಗೆ ಸ್ಪೋಕನ್ ಇಂಗ್ಲಿಷ್!

schol
Published on

| ಎನ್.ಎಲ್.ಶಿವಮಾದು ಬೆಂಗಳೂರು

ಸರ್ಕಾರಿ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಾಗಿರುವ ಇಂಗ್ಲಿಷ್ ಭಾಷೆಯನ್ನು ಬೆಣ್ಣೆಯಂತೆ ನುಣುಪಾಗಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಅರ್ಥಾತ್ ಇಂಗ್ಲಿಷ್ ಭಾಷೆಯಲ್ಲಿ ಪರಿಣತರನ್ನಾಗಿಸುವ ನಿಟ್ಟಿನಲ್ಲಿ ‘ಸ್ಪೋಕನ್ ಇಂಗ್ಲಿಷ್’ ತರಗತಿ ಪರಿಚಯಿಸಲು ಹೊರಟಿದೆ.

ಇಂಗ್ಲಿಷ್​ನಲ್ಲಿ ಮಾತನಾಡುವುದು, ಸಂಭಾಷಣೆ ನಡೆಸುವುದು, ಕತೆ ಹೇಳುವುದು, ಪರಿಸ್ಥಿತಿಯನ್ನು ಇಂಗ್ಲಿಷ್​ನಲ್ಲಿ ಸಹಪಾಠಿಗಳಿಗೆ ವಿವರಿಸುವುದೂ ಸೇರಿ ದಿನನಿತ್ಯ ಇಂಗ್ಲಿಷ್ ಮಾತನಾಡುತ್ತಲೇ ಆ ಭಾಷೆಯನ್ನು ಸುಲಭವಾಗಿ ಮನದಟ್ಟು ಮಾಡಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ರಾಜ್ಯದ ಪ್ರಾಥಮಿಕ, ಪ್ರೌಢಶಾಲಾ ಮಕ್ಕಳಿಗೆ ಗುಣಾತ್ಮಕ ಮತ್ತು ಸೃಜನಾತ್ಮಕ ಶಿಕ್ಷಣ ನೀಡಲು ಶಾಲಾ ಶಿಕ್ಷಣ ಇಲಾಖೆ ಶೈಕ್ಷಣಿಕ ಮಾರ್ಗಸೂಚಿ 2024-25ಪ್ರಕಟಿಸಿದೆ. ಗುಣಾತ್ಮಕ ಶಿಕ್ಷಣಕ್ಕಾಗಿ ಶಾಲೆಗಳಲ್ಲಿ ವಿಶೇಷ ಕಾರ್ಯಕ್ರಮ ರೂಪಿಸಿದೆ. ‘ಸ್ಪೋಕನ್ ಇಂಗ್ಲಿಷ್’ ಕೂಡ ಇದರ ಪ್ರಮುಖ ಯೋಜನೆಯಾಗಿದೆ. ‘ಹೌ ಟು ಮೇಕ್ ಇಂಗ್ಲಿಷ್ ಈಸಿ’ ಎಂಬ ಪರಿಕಲ್ಪನೆಯಲ್ಲಿ ಯೋಜನೆ ರೂಪಿಸಲು ಶಾಲಾ ಶಿಕ್ಷಕರಿಗೆ ನಿರ್ದೇಶನ ನೀಡಿದೆ.

ಸಿಇಟಿ, ನೀಟ್ ಗುರಿ: ಸರ್ಕಾರಿ ಶಾಲೆ ಮಕ್ಕಳು ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದರೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಿಂದುಳಿಯುತ್ತಾರೆ. ಇದಕ್ಕೆ ಇಂಗ್ಲಿಷ್​ನಲ್ಲಿ ಹೆಚ್ಚಿನ ಜ್ಞಾನ ಇಲ್ಲದಿರುವುದು ಕೂಡ ಒಂದು ಕಾರಣ. ವಿಜ್ಞಾನ ವ್ಯಾಸಂಗ ಮಾಡುವ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಪಿಯುಸಿ ನಂತರ ಜೆಇಇ, ನೀಟ್ ಮತ್ತು ಸಿಇಟಿಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ರ್ಯಾಂಕ್ ಗಳಿಸಲು ಕಷ್ಟಪಡುತ್ತಿದ್ದಾರೆ. ಇಂಗ್ಲಿಷ್​ನಲ್ಲಿರುವ ಆಕರ ಗ್ರಂಥಗಳು, ಹೆಚ್ಚಿನ ಸಂಪನ್ಮೂಲ ಸಂಗ್ರಹ, ವಿಜ್ಞಾನವನ್ನು ಆಳವಾಗಿ ಆಧ್ಯಯನ ನಡೆಸಲು ಕನ್ನಡಕ್ಕಿಂತ ಇಂಗ್ಲಿಷ್​ನಲ್ಲಿಯೇ ವಿಸ್ತಾರವಾಗಿ ಮಾಹಿತಿ ದೊರೆಯಲಿದೆ, ಕನ್ನಡದಲ್ಲಿ ಅಷ್ಟಕಷ್ಟೇ ಎನ್ನುವಂತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಪ್ರಶ್ನೆಗಳು ಇಂಗ್ಲಿಷ್​ನಿಂದ ಕನ್ನಡಕ್ಕೆ ಭಾಷಾಂತರಗೊಂಡಿರುತ್ತವೆ. ಕನ್ನಡದಲ್ಲಿ ಗೊಂದಲವಾದಲ್ಲಿ ಇಂಗ್ಲಿಷ್​ನಲ್ಲಿರುವ ಪ್ರಶ್ನೆಯನ್ನು ಓದಿಕೊಳ್ಳುವಂತೆಯೂ ಸಲಹೆ ನೀಡಲಾಗಿರುತ್ತದೆ. ಈ ಎಲ್ಲ ಕಾರಣಗಳಿಂದ ಸರ್ಕಾರಿ ಶಾಲೆ ಮಕ್ಕಳು ಇಂಗ್ಲಿಷ್​ನಲ್ಲಿ ನಿರರ್ಗಳವಾಗಿ ಮಾತನಾಡಬೇಕು ಎಂಬ ಉದ್ದೇಶವನ್ನು ಶಿಕ್ಷಣ ಇಲಾಖೆ ಹೊಂದಿದೆ.

ಕೈಪಿಡಿಗೆ ಸೂಚನೆ: ಪ್ರಾಥಮಿಕ ಶಾಲೆಗಳಲ್ಲಿ 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ ಪದವೀಧರ ಇಂಗ್ಲಿಷ್ ಭಾಷಾ ಶಿಕ್ಷಕರ (ಜಿಪಿಟಿ) ತಂಡವು ಇಂಗ್ಲಿಷ್ ಮಾತನಾಡುವ ವಿಚಾರವಾಗಿ ಕೈಪಿಡಿ ಸಿದ್ಧಪಡಿಸುವಂತೆ ತಿಳಿಸಲಾಗಿದೆ. ಸಾಮಾನ್ಯ ಸಂಭಾಷಣೆ, ಪರಿಸ್ಥಿತಿ ವಿವರಿಸುವುದು, ತಮ್ಮ ಅನುಭವ ಹಂಚಿಕೊಳ್ಳುವಂತಹ ಚಟುವಟಿಕೆಗಳನ್ನು ಕೈಪಿಡಿಯಲ್ಲಿ ಅಳವಡಿಸಬೇಕು. ಪ್ರತಿ ಶನಿವಾರ 3ನೇ ತರಗತಿಯನ್ನು ‘ಸ್ಪೋಕನ್ ಇಂಗ್ಲಿಷ್’ಗೆ ಮೀಸಲಿಟ್ಟು 40 ನಿಮಿಷದ ಬೋಧನಾ ಅವಧಿಯಲ್ಲಿ ಇಂಗ್ಲಿಷ್​ನಲ್ಲಿ ಮಾತ್ರ ಮಾತನಾಡಬೇಕು. ಬೇರೆ ಭಾಷೆಯಲ್ಲಿ ಮಾತನಾಡಬಾರದು. ಈ ಮೂಲಕ ವಿದ್ಯಾರ್ಥಿಗಳು, ಸಹಜವಾಗಿ ಇಂಗ್ಲಿಷ್ ಕಲಿಯಲು ಪೂರಕ ವಾತಾವರಣವನ್ನು ಸೃಷ್ಟಿಸಬೇಕೆಂಬ ಸೂಚನೆ ನೀಡಿದೆ. ಅವಕಾಶ ಮತ್ತು ಅಗತ್ಯವಿದ್ದಲ್ಲಿ ಬಾಹ್ಯವಾಗಿಯೂ ನುರಿತ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಳ್ಳಬಹುದು ಎಂಬ ಸಲಹೆ ನೀಡಿದೆ.

ದಾಖಲಾತಿ ಹೆಚ್ಚಳಕ್ಕೂ ಸಹಕಾರಿ: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಎಷ್ಟೇ ಗುಣಮಟ್ಟದ ಶಿಕ್ಷಣ ನೀಡಿದರೂ ಕನ್ನಡ ಮಾಧ್ಯಮದಲ್ಲಿ ಬೋಧನೆ ಮಾಡಲಾಗುತ್ತಿದೆ ಎಂಬ ಕಾರಣಕ್ಕೆ ದಾಖಲಾತಿ ಕುಸಿಯುತ್ತಿದೆ. ಮಕ್ಕಳನ್ನು ಆಕರ್ಷಿಸಲು ಉಚಿತ ಸಮವಸ್ತ್ರ, ಪಠ್ಯಪುಸ್ತಕ, ಮಧ್ಯಾಹ್ನದ ಬಿಸಿಯೂಟ, ಹಾಲು ಸೇರಿ ಹಲವು ಯೋಜನೆಗಳನ್ನು ಜಾರಿಗೊಳಿಸಿದರೂ ದಾಖಲಾತಿ ಮಾತ್ರ ಕುಸಿಯುತ್ತಲೇ ಇದೆ. ಆದರೆ. ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸುತ್ತಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ಹಾಗೂ ದ್ವಿಭಾಷಾ ಮಾಧ್ಯಮ ಶಾಲೆಗಳಲ್ಲಿ ದಾಖಲಾತಿ ಉತ್ತಮವಾಗಿಯೇ ಇದೆ. ಈ ನಿಟ್ಟಿನಲ್ಲಿ ಇಂಗ್ಲಿಷ್ ಕಲಿಕೆಯು ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳಕ್ಕೂ ಕಾರಣವಾಗಲಿದೆ.

500 ಶಾಲೆಗಳಲ್ಲಿ ಶುರು: ಪ್ರಸ್ತುತ ರಾಜ್ಯದ 2,403 ದ್ವಿಭಾಷಾ ಮಾಧ್ಯಮ ಶಾಲೆಗಳಲ್ಲಿ ಹಾಗೂ 283 ಕೆಪಿಎಸ್ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸಲಾಗುತ್ತಿದೆ. 2024-25ನೇ ಸಾಲಿನಲ್ಲಿ 2 ಸಾವಿರ ಕೆಪಿಎಸ್ ಶಾಲೆಗಳನ್ನು ಆರಂಭಿಸುವುದಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಘೋಷಿಸಿದೆ. ಕೆಪಿಎಸ್ ಶಾಲೆಗಳಾಗಿ ಉನ್ನತೀಕರಿಸಲು ಅರ್ಹತೆ ಹೊಂದಿರುವ ಶಾಲೆಗಳಿಂದ ಅರ್ಜಿ ಆಹ್ವಾನಿಸಿದ್ದು, ಕನಿಷ್ಠ 500 ಶಾಲೆಗಳಲ್ಲಿ ಮೊದಲ ಹಂತದಲ್ಲಿ ಆರಂಭಿಸುವ ಮುನ್ಸೂಚನೆ ಇದೆ. ಈ ಎಲ್ಲ ಅಂಶಗಳು ಸರ್ಕಾರಿ ಶಾಲೆ ಮಕ್ಕಳಲ್ಲಿ ಇಂಗ್ಲಿಷ್ ಕಲಿಸುವ ಪ್ರಕ್ರಿಯೆಯ ಪೂರಕವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net