

ರಾಣೆಬೆನ್ನೂರ: ಹುಟ್ಟು ಸಾವು ನಮ್ಮ ಕೈಯಲ್ಲಿ ಇಲ್ಲ. ಆದರೆ ಬದುಕು ನಮ್ಮ ಕೈಯಲ್ಲಿದೆ. ಮಾತು ಒಂದುಗೂಡಿಸಬೇಕೆ ಹೊರತು ಒಡೆಯಬಾರದು. ಒಡೆದು ಹೋದ ಮನಸ್ಸುಗಳನ್ನು ಬೆಸೆಯುವುದೇ ನಿಜವಾದ ಧರ್ಮವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಹೇಳಿದರು.
ತಾಲೂಕಿನ ಬೇಲೂರು ಗ್ರಾಮದಲ್ಲಿ ಬುಧವಾರ ಶ್ರೀ ಬಸವೇಶ್ವರ ದೇವಸ್ಥಾನದ ಮಂಗಲ ಮೂತಿರ್ ಪ್ರತಿಷ್ಠಾಪನೆ ಅಂಗವಾಗಿ ಏರ್ಪಡಿಸಿದ್ದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಮಾನವ ಜೀವನ ಉಸಷ್ಟ ಅರಿವು ಆಚಾರಗಳಿಂದ ಸಮೃದ್ಧಗೊಳ್ಳಬೇಕು. ಧರ್ಮ ಸಂಪ್ರದಾಯ ಪರಂಪರೆಗಳಲ್ಲಿ ನಮ್ಮ ನಂಬಿಗೆ ವಿಶ್ವಾಸಗಳನ್ನು ಕಳೆದುಕೊಳ್ಳಬಾರದು. ಜೀವನಾಧಾರಕ್ಕೆ ನೀರು ಅನ್ನ ಗಾಳಿ ಮತ್ತು ಒಳ್ಳೆಯ ಮಾತು ಮುಖ್ಯ. ಹಾಗೆಯೇ ಜೀವನದ ಉಜ್ವಲ ಭವಿಷ್ಯಕ್ಕೆ ಧಮಾರ್ಚರಣೆ ಅಗತ್ಯವಾಗಿದೆ. ಜ್ಞಾನ ಕ್ರಿಯೆಗಳ ಸಂಗಮದ ಬದುಕು ಉತ್ಕರ್ಷ ಬದುಕಿಗೆ ಅಡಿಪಾಯವಾಗುತ್ತದೆ.
ಉತ್ತಮ ಚಿಂತನೆಗಳು ನಮ್ಮ ಬದುಕಿಗೆ ಬೆಳಕು ತೋರುವುದು ಅಷ್ಟೇ ಅಲ್ಲ. ಪರರ ಬದುಕಿಗೂ ಬೆಳಕಾಗಿ ಕಾಣುತ್ತದೆ. ಮನುಷ್ಯನಿಗೆ ವ್ಯಕ್ತಿತ್ವ ಮುಖ್ಯ ಹೊರತು ಆಸ್ತಿ ಅಂತಸ್ತಲ್ಲ. ಆದರ್ಶ ಆಲೋಚನೆ ಮತ್ತು ಆಚರಣೆಗಳಲ್ಲಿ ಘನವಾದ ವ್ಯಕ್ತಿತ್ವ ಇದೆಯೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಗ್ರಂಥದಲ್ಲಿ ಬೋಧಿಸಿದ್ದಾರೆ. ಬೇಲೂರು ಗ್ರಾಮಸ್ಥರು ದಿಂಡದಹಳ್ಳಿ ಲಿಂ.ಶ್ರೀ ಶಿವಾನಂದ ಶಿವಾಚಾರ್ಯರ ಮಾರ್ಗದರ್ಶನದಲ್ಲಿ ಬೆಳೆದ ಜನರು ಸಂಸ್ಕಾರವಂತರಾಗಿದ್ದಾರೆ. ಗುರುಪೀಠಗಳಲ್ಲಿ ಅಪಾರ ಶ್ರದ್ಧೆಯುಳ್ಳ ಗ್ರಾಮಸ್ಥರು ಇಂದು ಶ್ರೀ ಬಸವೇಶ್ವರ ಮಂಗಲ ಶಿಲಾಮೂತಿರ್ ಪ್ರತಿಷ್ಠಾಪಿಸಿರುವ ಕಾರ್ಯ ತಮಗೆ ಅತ್ಯಂತ ಸಂತೋಷ ತಂದಿದೆ ಎಂದರು.
ಸಮಾರಂಭ ಉದ್ಘಾಟಿಸಿದ ದಿಂಡದಹಳ್ಳಿ ಪಶುಪತಿ ಶಿವಾಚಾರ್ಯರು ಮಾತನಾಡಿ, ಎಲ್ಲವೂ ಇದ್ದು ಶಕ್ತಿಶಾಲಿಗಳು ಎನಿಸುವುದು ದೊಡ್ಡದಲ್ಲ. ಎಲ್ಲವೂ ಕಳೆದುಕೊಂಡರೂ ತೋರುವ ಧೈರ್ಯವೇ ನಿಜವಾದ ಶಕ್ತಿ. ಅಡವಿಗಳಲ್ಲಿ ರಾಮ ಅಲೆದರೂ ಕೆಡಲಿಲ್ಲ. ಅಂತ:ಪುರದಲ್ಲಿ ರಾವಣ ಬೆಳೆದರೂ ಒಳ್ಳೆಯವನಾಗಲಿಲ್ಲ. ಲಿಂ.ಶಿವಾನಂದ ಶ್ರೀಗಳ ಮಾರ್ಗದರ್ಶನ ಬೇಲೂರು ಗ್ರಾಮಸ್ಥರಿಗೆ ದೊರೆತಿರುವುದರಿಂದ ಇಂಥ ಒಳ್ಳೆಯ ಕಾರ್ಯ ಮಾಡಲು ಸಾಧ್ಯವಾಗಿದೆ ಎಂದರು.
ಮಳಲಿ ಸಂಸ್ಥಾನ ಮಠದ ಡಾ. ನಾಗಭೂಷಣ ಶಿವಾಚಾರ್ಯರು, ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯರು, ಕುರವತ್ತಿ ಹಿರೇಮಠದ ನಂದೀಶ್ವರ ಶಿವಾಚಾರ್ಯರು, ಹಿರೇಹಡಗಲಿ ಬೇಲೂರು ಶಾಖಾ ಮಠದ ಹಾಲಸ್ವಾಮೀಜಿ ನೇತೃತ್ವ ವಹಿಸಿದ್ದರು.
ಸಮಾರಂಭಕ್ಕೂ ಮುನ್ನ ಗ್ರಾಮದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ಸಕಲ ವಾದ್ಯ ವೈಭವಗಳೊಂದಿಗೆ ಜರುಗಿತು. ಸಹಸ್ರಾರು ಭಕ್ತರು ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಪಡೆದರು.
ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ, ವಿಠಲಾಪುರ ಹಿರೇಮಠದ ಗಂಗಾಧರಸ್ವಾಮಿ ಇವರಿಂದ ಭಕ್ತಿ ಗೀತೆ ಜರುಗಿತು. ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು.