ಆಧ್ಯಾತ್ಮಿಕ ಚಿಂತನೆ ಸರಿದಾರಿಯಲ್ಲಿ ಕೊಂಡೊಯ್ಯಲಿದೆ

09.pyp.003
Published on

ಪಿರಿಯಾಪಟ್ಟಣ: ಆಧ್ಯಾತ್ಮಿಕ ಚಿಂತನೆ ಮಾನವನನ್ನು ಸರಿದಾರಿಯಲ್ಲಿ ಕೊಂಡೊಯ್ಯಲಿದೆ ಎಂದು ವಿರಾಜಪೇಟೆ ತಾಲೂಕಿನ ಅರಮೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಮುತ್ತೂರು ಗ್ರಾಮದ ಈಶ್ವರ ಬಸವೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲೂ ದೇವಸ್ಥಾನಗಳ ಅಭಿವೃದ್ಧಿಯತ್ತ ಆಸಕ್ತಿ ಮೂಡುತ್ತಿರುವುದು ಸ್ವಾಗತಾರ್ಹ ವಿಷಯವಾಗಿದ್ದು, ಜನರು ಸ್ವಯಂ ಪ್ರೇರಿತರಾಗಿ ದೇವಾಲಯಗಳ ಅಭಿವೃದ್ಧಿಗೆ ಸಹಕಾರ ನೀಡುತ್ತಿರುವುದು ಸಂತಸದ ವಿಷಯವಾಗಿದೆ ಎಂದರು.

ಧರ್ಮದ ಪ್ರತೀಕವಾದ ದೇವಾಲಯಗಳು ಜನರ ಮನಸ್ಸನ್ನು ಬೆಸೆಯುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ ಎಂದು ತಿಳಿಸಿದರು. ರಾವಂದೂರಿನ ಮುರುಘಾ ಮಠದ ಶ್ರೀಮೋಕ್ಷಪತಿ ಸ್ವಾಮೀಜಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪಾಲಕರ ಮೇಲಿನ ನಿರ್ಲಕ್ಷ್ಯತನದಿಂದಾಗಿ ವೃದ್ಧಾಶ್ರಮಗಳು ಹೆಚ್ಚುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಯುವಜನತೆ ತಂದೆ-ತಾಯಿಯರನ್ನು ಗೌರವದಿಂದ ಕಾಣುವ ಮನೋಭಾವನೆ ಬೆಳೆಸಿಕೊಳ್ಳುವುದರ ಜತೆಗೆ ಮಕ್ಕಳಲ್ಲಿ ಭಕ್ತಿ ಪ್ರವೃತ್ತಿಯನ್ನು ಬೆಳೆಸುವ ಕೆಲಸ ಮಾಡಬೇಕಿದೆ ಎಂದರು.

ಅರಕಲಗೂಡು ತಾಲೂಕಿನ ಅರೇಮಾದನಹಳ್ಳಿ ಮಠದ ಶ್ರೀಸುಜ್ಞಾನಮೂರ್ತಿ ಸ್ವಾಮೀಜಿ, ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಬೆಟ್ಟದಪುರ ಸಲೀಲಾಖ್ಯ ಮಠದ ಶ್ರೀಚನ್ನಬಸವ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿದರು. ದೇವಾಲಯದ ಜೀರ್ಣೋದ್ಧಾರಕ್ಕೆ ಆರ್ಥಿಕ ನೆರವು ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು.

ತಾಪಂ ಅಧ್ಯಕ್ಷೆ ಕೆ.ಆರ್.ನಿರೂಪ, ಮಾಜಿ ಸಂಸದ ಸಿ.ಎಚ್.ವಿಜಯಶಂಕರ್, ಚಿಟ್ಟೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಎಸ್.ರಾಮಚಂದ್ರ, ಗ್ರಾಮದ ಮುಖಂಡರಾದ ಎಂ.ಜೆ.ಮಹಾದೇವ, ಪರಮೇಶ್, ನಂದೀಶ್, ರಾಜೇಗೌಡ, ಎಂ.ಕೆ.ಮೂರ್ತಿ, ಸತೀಶ್, ಲಿಂಗರಾಜು, ಎಂ.ಜೆ.ರವಿ, ಎಂ.ಎಲ್.ಶಿವಾಜಿ ಮತ್ತಿತರರಿದ್ದರು.

ದೇವಾಲಯದ ವಿಗ್ರಹಗಳ ಮರುಪ್ರತಿಷ್ಠಾಪನೆ ನಿಮಿತ್ತ ಭಾನುವಾರ ಮಧ್ಯಾಹ್ನ ಗಂಗಾಪೂಜೆ, ಗಣಪತಿ ಪೂಜೆ, ಧ್ವಜಾರೋಹಣ, ಅಂಕುರಾರ್ಪಣೆ, ಅಷ್ಟದಿಕ್ಪಾಲಕರ ಪೂಜೆ, ನವಗ್ರಹ ಪೂಜೆ, ನವದುರ್ಗೆಯರ ಪೂಜೆ, ಉಮಾಮಹೇಶ್ವರ, ವಿಷ್ಣು ಲಕ್ಷ್ಮೀಯರು, ರುದ್ರ ಕಳಶ ಸ್ಥಾಪನೆ, ನವಗ್ರಹ ಹೋಮ, ವಾಸ್ತು ಹೋಮ, ಗ್ರಾಮ ಹೋಮ ನೆರವೇರಿಸಲಾಯಿತು.

ಸೋಮವಾರ ಗ್ರಾಮದ ಮುಖ್ಯಬೀದಿಗಳಲ್ಲಿ ಮಂಗಳವಾದ್ಯದೊಂದಿಗೆ 108 ಪೂರ್ಣ ಕುಂಭ ಸ್ಥಿರ ಕಳಸದ ವಿಜೃಂಭಣೆಯ ಮೆರವಣಿಗೆ ನಡೆಸಿ ದೇವಾಲಯದ ಅಷ್ಟ ದಿಗ್ಬಲಿ ಪ್ರವೇಶ, ಪೂರ್ಣಾಹುತಿ ಅಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ ನೈವೇದ್ಯ ಸಮರ್ಪಣೆ ನಡೆಸಲಾಯಿತು. ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಕೆಲಕಾಲ ಬಿಗುವಿನ ವಾತಾವರಣ: ದೇವಾಲಯದ ಪೂಜಾ ಕಾರ್ಯಕ್ರಮಗಳಲ್ಲಿ ದಲಿತರಿಗೆ ಅವಕಾಶ ನೀಡುತ್ತಿಲ್ಲ ಹಾಗೂ ಪ್ರವೇಶ ನಿರಾಕರಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಕೆಲಕಾಲ ದೇವಾಲಯದ ಬಳಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ದಲಿತರು ಸಾಮೂಹಿಕವಾಗಿ ಆಗಮಿಸಿ ದೇವಸ್ಥಾನ ಪ್ರವೇಶಿಸಿ ಪೂಜೆಯಲ್ಲಿ ಪಾಲ್ಗೊಂಡು ತೆರಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net