

ಸೊರಬ: ಜೀವನ ಹಸನಾಗಿರಲು ಬಸವಾದಿ ಶರಣರ ವಚನ ಸಾಹಿತ್ಯ ಪ್ರೇರಣೆಯಾಗಿದೆ ಎಂದು ಜಡೆ ಸಂಸ್ಥಾನ ಮಠದ ಶ್ರೀ ಕುಮಾರ ಕೆಂಪಿನ ಸಿದ್ಧವೃಷಭೇಂದ್ರ ಸ್ವಾಮೀಜಿ ಹೇಳಿದರು.
ಪಟ್ಟಣದ ಮುರುಘಾ ಮಠದಲ್ಲಿ ಶುಕ್ರವಾರ ಹುಣ್ಣಿಮೆ ಪ್ರಯುಕ್ತ ಆಯೋಜಿಸಿದ್ದ 231ನೇ ಶಿವಾನುಭವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿತ್ಯದ ಬದುಕಿನಲ್ಲಿ ಆಧ್ಯಾತ್ಮಿಕ ಚಿಂತನೆ ಕನ್ನಡಿ ಇದ್ದಂತೆ. ದೇಹದ ಶಕ್ತಿಗೆ ಅನ್ನ ದಾಸೋಹ, ಮಿದುಳಿನ ಶಕ್ತಿಗೆ ಜ್ಞಾರ್ನಾಜನೆ ಮುಖ್ಯವಾಗಿದೆ. ಮನುಷ್ಯಜನ್ಮ ದೇವರು ನೀಡಿದ ವರ. ಶರಣರ ಬದುಕಿನಂತೆ ನಡೆದು ಶಿವಾನುಭವ ಕಾರ್ಯಕ್ರಮಗಳ ಮೂಲಕ ಮನಸ್ಸು ಹಗುರಗೊಳಿಸಿಕೊಳ್ಳುವ ಜತೆಗೆ ಆತ್ಮತೃಪ್ತಿ ಪಡೆಯಬಹುದು ಎಂದು ತಿಳಿಸಿದರು. ಅಬಲೂರು ಮಠದ ಗಂಗಾಧರ ಸ್ವಾಮೀಜಿ ಮಾತನಾಡಿ, ದೇಹ ಮತ್ತು ಮನಸ್ಸು ಅಜ್ಞಾನ, ಅಂಧಕಾರದಲ್ಲಿ ಮುಳುಗಿ ಕಲುಷಿತಗೊಂಡಿದೆ. ಭಗವಂತನಿಂದ ದೊರೆತ ಶರೀರ ಎಂಬ ಮಾಯಾ ಪ್ರಪಂಚದಲ್ಲಿ ಬದುಕುವ ನಾವು ಶಿವನ ಸ್ಮರಣೆಯಿಂದ ಜೀವನ ಪಾವನ ಮಾಡಿಕೊಳ್ಳಬೇಕು ಎಂದರು.
ದೇಶದ ಅನೇಕ ಕೊಡುಗೆಗಳಲ್ಲಿ ಋಷಿಮುನಿಗಳ ಪರಂಪರೆ ಅಡಕವಾಗಿದೆ. ಭಗವಂತನ ಇಚ್ಛೆಯಂತೆ ಬದುಕಲು ಮನದ ಮೈಲಿಗೆ ಶುದ್ಧೀಕರಿಸಿಕೊಂಡು ಜೀವನ ನಡೆಸಬೇಕು. ನಮ್ಮಲ್ಲಿರುವ ಅರಿಷಡ್ವರ್ಗಗಳ ಮೇಲೆ ನಿಯಂತ್ರಣ ಇರಿಸಿಕೊಂಡಾಗ ಪರಶಿವನನ್ನು ಕಾಣಲು ಸಾಧ್ಯ ಎಂದು ತಿಳಿಸಿದರು.
ಅಕ್ಕನ ಬಳಗದ ಅಧ್ಯಕ್ಷೆ ರೇಖಾ ಜಗದೀಶ್, ರೇಣುಕಮ್ಮ, ಮಠದ ಕಾರ್ಯದರ್ಶಿ ಡಿ.ಶಿವಯೋಗಿ, ಪುಷ್ಪಾ, ಮಾನಸಾ, ಗಾಯತ್ರಿ ಪೂರ್ಣಿಮಾ ಶಿವಯೋಗಿ ಇತರರಿದ್ದರು.