

ಶಿವಮೊಗ್ಗ: ಅಧ್ಯಾತ್ಮ ಶಕ್ತಿ ಅತ್ಯಂತ ಶ್ರೇಷ್ಠವಾಗಿದೆ. ಹೀಗಾಗಿ ಪೂಜೆ, ಪುನಸ್ಕಾರಗಳು ಯಾಂತ್ರಿಕವಾಗಬಾರದು. ಮನಸ್ಸು ಎಲ್ಲೋ ಇಟ್ಟುಕೊಂಡು ಪೂಜೆ ಮಾಡಿದರೆ ಅದು ಸಿದ್ಧಿಸುವುದಿಲ್ಲ ಎಂದು ಶ್ರೀ ಕ್ಷೇತ್ರ ಹರಿಹರಪುರದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ನಗರದ ಬೊಮ್ಮನಕಟ್ಟೆಯ ಅನ್ನಪೂರ್ಣೇಶ್ವರಿ ಅಮ್ಮನವರ ದೇವಸ್ಥಾನದ 12ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಭಾನುವಾರ ದೇವಸ್ಥಾನದಲ್ಲಿ ಆಯೋಜಿಸಿದ್ದ ಧರ್ಮ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಬಡವ ಬಲ್ಲಿದ, ದೀನ ದುರ್ಬಲ, ಮೇಲು ಕೀಳು ಎಂಬ ಭೇದವಿಲ್ಲದೆ ಸಮಾನ ಗೌರವ ನೀಡಿದಾಗ ಹಾಗೂ ಮನೆಯ ಕೆಲಸವರನ್ನು ಸಮಾನವಾಗಿ ಕಂಡಾಗ ಸಮಾಜದ ಉನ್ನತಿ ಸಾಧ್ಯವಾಗಲಿದೆ ಎಂದರು.
ಅನ್ನದಿಂದಲೇ ಈ ಲೋಕದ ಉನ್ನತಿ ಸಾಧ್ಯ. ಮನುಷ್ಯ ಮಾತ್ರವಲ್ಲ, ಸಕಲ ಜೀವರಾಶಿಗಳಿಗೂ ಆಹಾರ ಬೇಕೇ ಬೇಕು. ಅಂತಹ ಆಹಾರವನ್ನು ಅನ್ನದ ಸ್ವರೂಪದಲ್ಲಿ ನೋಡಲಾಗುತ್ತದೆ. ಯಾರಿಗೆ ಅನ್ನಪೂಣೇಶ್ವರಿ ಕೃಪೆ ಇರುವುದಿಲ್ಲವೋ ಅಂತಹವರು ಈ ಲೋಕದಲ್ಲಿ ಇರಲು ಸಾಧ್ಯವಾಗುವುದಿಲ್ಲ ಎಂದರು.
ಅನ್ನವಿಲ್ಲದ ಬದುಕನ್ನು ಊಹಿಸಲು ಸಾಧ್ಯವಿಲ್ಲ. ಆಹಾರ ಶುಚಿ ಮತ್ತು ರುಚಿಯಾಗಿದ್ದರೆ ಯಾವುದೇ ಅನಾರೋಗ್ಯ ಬಾಧಿಸುವುದಿಲ್ಲ. ದೇಹಕ್ಕೆ ಬರುವ ಶೇ.90ರಷ್ಟು ಕಾಯಿಲೆಗಳು ಅಶುಚಿಯಿಂದಲೇ ಬರುತ್ತದೆ. ಅನ್ನವೇ ಔಷಧವೆಂದು ಭಾವಿಸಬೇಕಿದೆ. ಋತುಮಾನಗಳಿಗೆ ತಕ್ಕಂತೆ ಹಾಗೂ ಭೌಗೋಳಿಕ ವಾತಾವರಣಕ್ಕೆ ತಕ್ಕಂತೆ ಆಹಾರ ಸೇವನೆ ಮಾಡಿದರೆ ಕಾಯಿಲೆಗಳಿಂದ ದೂರ ಇರಬಹುದೆಂಬುದನ್ನು ಚರಕ ಸಂಹಿತೆ ಪ್ರತಿಪಾದಿಸಿದೆ ಎಂದರು.
ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಜಿ.ಕೆ.ಮಾಧವಮೂರ್ತಿ, ಕಾರ್ಯಾಧ್ಯಕ್ಷ ಮಂಜುನಾಥ್ ಸಿ. ಪಾಟೀಲ್ ಉಪಾಧ್ಯಕ್ಷ ಎನ್.ಎಚ್.ಪ್ರಭಾಕರ್, ಕಾರ್ಯದರ್ಶಿ ಎಂ.ಆರ್.ಬಸವರಾಜ್, ಧನರಾಜ್ ಮತ್ತಿತರರು ಉಪಸ್ಥಿತರಿದ್ದರು.
ಪೂರ್ಣಕುಂಭದೊಂದಿಗೆ ಶ್ರೀಗಳಿಗೆ ಸ್ವಾಗತ
ಭಾನುವಾರ ಬೆಳಗ್ಗೆ ನಗರಕ್ಕೆ ಶಿವಮೊಗ್ಗಕ್ಕೆ ಆಗಮಿಸಿದ ಶ್ರೀ ಕ್ಷೇತ್ರ ಹರಿಹರಪುರದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಯನ್ನು ಎಂ.ಆರ್.ಎಸ್.ವೃತ್ತದಲ್ಲಿ ಪೂರ್ಣಕುಂಭದೊಂದಿಗೆ ಅವರನ್ನು ಸ್ವಾಗತಿಸಿ ಬೈಕ್ ರ‌್ಯಾಲಿ ಮೂಲಕ ದೇವಸ್ಥಾನದ ಆವರಣಕ್ಕೆ ಕರೆತರಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯವರು ಹಾಗೂ ಭಕ್ತರು ಪಾಲ್ಗೊಂಡಿದ್ದರು. ದೇವಸ್ಥಾನದಲ್ಲಿ ಕುಂಬಾಭಿಷೇಕ, ಚಂಡಿಕಾ ಹೋಮ, ಕಲಾತತ್ವ, ಮಹಾ ಮಂಗಳಾರತಿ ನಡೆಯಿತು. ಸಂಜೆ ಶ್ರೀ ಚಕ್ರ ನವವರಣ ಪೂಜೆ, ನಂತರ ಅನುಗ್ರಹದ ಲ ಮಂತ್ರಾಕ್ಷತೆ ವಿತರಿಸಲಾಯಿತು.