

ರಾಣೆಬೆನ್ನೂರ: ವಿಶ್ವ ಬೆನ್ನುಹುರಿ ಅಪಘಾತ ಅಂಗವಿಕಲರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸೆ. 5ರಂದು ನಗರದಲ್ಲಿ ಜಾಗೃತಿ ಜಾಥಾ ಹಾಗೂ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಓಂ ಸಮೂಹ ಸಂಸ್ಥೆ ಅಧ್ಯಕ್ಷ ಡಾ. ಮನೋಜ ಸಾವಕಾರ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಓಂ ಆಸ್ಪತ್ರೆ, ನಿಶಾರ್ಡ್ ಸೇವಾ ಸಂಸ್ಥೆ, ಎಚ್.ಸಿ.ಎಲ್. ಫೌಂಡೇಷನ್ ಹಾಗೂ ದಿ ಅಸೋಸಿಯೇಷನ್ ಆಫ್ ವಿತ್ ಡಿಸೆಬಲಿಟಿ ಸಂಸ್ಥೆ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಗ್ಗೆ 9 ಗಂಟೆಗೆ ಓಂ ಆಸ್ಪತ್ರೆ ಆವರಣದಿಂದ ಬೆನ್ನುಹುರಿ ಅಪಘಾತಕ್ಕೆ ಒಳಗಾದ ಅಂಗವಿಕಲರು, ಅವರ ಕುಟುಂಬದವರು ಹಾಗೂ ವಿದ್ಯಾಥಿರ್ಗಳ ನೇತೃತ್ವದಲ್ಲಿ ಜಾಗೃತಿ ಜಾಥಾ ಆರಂಭಗೊಂಡು ಪೋಸ್ಟ್ ವೃತ್ತ, ಎಂ.ಜಿ. ರಸ್ತೆ, ಕುರಬಗೇರಿ ಕ್ರಾಸ್ ಸೇರಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮರಳಿ ಆಸ್ಪತ್ರೆ ಆವರಣಕ್ಕೆ ಬರಲಿದೆ. ನಂತರ ವೇದಿಕೆ ಕಾರ್ಯಕ್ರಮ ಜರುಗಲಿದೆ. ಅಂಗವಿಕಲರಿಗೆ ಉಚಿತವಾಗಿ ವ್ಹೀಲ್ಚೇರ್, ಮೆಡಿಕಲ್ ಕಿಟ್ ವಿತರಣೆ ಮಾಡಲಾಗುವುದು ಎಂದರು.
ಸಂಸ್ಥೆಯ ಪ್ರಮುಖರಾದ ಶಿವಕುಮಾರ, ನಿಂಗಪ್ಪ ದೊಡ್ಡಮನಿ ಸುದ್ದಿಗೋಷ್ಠಿಯಲ್ಲಿದ್ದರು.