ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿ ಕಾಮಗಾರಿ; ತ್ವರಿತ ಅನುಷ್ಠಾನಕ್ಕೆ ಜಮೀರ್ ಅಹಮದ್ ಸೂಚನೆ

jameer 1
Published on

ಬೆಂಗಳೂರು: ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿ ಸಂಬಂಧ ರೂಪಿಸಿರುವ ಕ್ರಿಯಾ ಯೋಜನೆ ತ್ವರಿತ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲು ವಸತಿ ಸಚಿವ ಜಮೀರ್ ಅಹಮದ್ ಖಾನ್ ಸೂಚನೆ ನೀಡಿದ್ದಾರೆ.

ಕೊಳೆಗೇರಿ ಅಭಿವೃದ್ಧಿ ಮಂಡಳಿ ಸಭಾಂಗಣದಲ್ಲಿ ಗಣಿ ಪರಿಸರ ಪುನರ್ ನಿರ್ಮಾಣ ನಿಗಮದ ಅಧಿಕಾರಿಗಳ ಸಭೆ ನಡೆಸಿದರು.

ಈಗಾಗಲೇ ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ತಯಾರಿಸಿರುವ ಕ್ರಿಯಾ ಯೋಜನೆಯ ಕಾಮಗಾರಿಗಳಿಗೆ ವೇಗ ನೀಡುವಂತೆ ತಿಳಿಸಿದರು.

ವಿಜಯನಗರ, ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆ ಗಳ ಗಣಿ ಬಾಧಿತ ಪ್ರದೇಶಗಳ ಪುನರ್ ನಿರ್ಮಾಣ ಯೋಜನೆಗಳ ಅನುಷ್ಠಾನದ ನೋಡಲ್ ಏಜೆನ್ಸಿ ರಾಜೀವ್ ಗಾಂಧಿ ವಸತಿ ನಿಗಮ ಆಗಿರುವುದರಿಂದ ನಮ್ಮ ಕಡೆಯಿಂದ ಯಾವುದೇ ವಿಳಂಬ ಆಗದಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಗಣಿ ಬಾಧಿತ ಪ್ರದೇಶ ಗಳ ಅಭಿವೃದ್ಧಿಗೆ ಲಭ್ಯ ಇರುವ ನಿಧಿ, ಜಿಲ್ಲಾ ಮಟ್ಟದ ಡಿಎಂಎ್ ನಿಧಿ ಕುರಿತು ಮಾಹಿತಿ ಪಡೆದ ಸಚಿವರು, ನಾಲ್ಕು ಜಿಲ್ಲೆ ಗಳಲ್ಲಿ ಅಕ್ಟೋಬರ್ 10 ಹಾಗೂ 11, 16 ಹಾಗೂ 17 ರಂದು ಪ್ರವಾಸ ಮಾಡುವುದಾಗಿ ತಿಳಿಸಿದರು.

ವಸತಿ ಹೊರತುಪಡಿಸಿ ಮೂಲ ಸೌಕರ್ಯ ಸೇರಿದಂತೆ ಇತರೆ ಅಭಿವೃದ್ಧಿ ಕಾಮಗಾರಿಗೆ ಎಷ್ಟು ಕ್ರಿಯಾ ಯೋಜನೆ ರೂಪಿಸಲಾಗಿದೆ. ನಗರ ಮತ್ತು ಗ್ರಾಮೀಣ ಭಾಗದಲ್ಲಿ ಬೇಡಿಕೆ ಏನಿದೆ ಎಂಬುದರ ಮಾಹಿತಿ ಜಿಲ್ಲಾವಾರು ನೀಡುವಂತೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳಿಂದ ತ್ವರಿತ ವಾಗಿ ಪ್ರಸ್ತಾವನೆ ತರಿಸಿಕೊಳ್ಳಬೇಕು ಎಂದು ತಿಳಿಸಿದರು.

ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿ ನಿಧಿ 2018 ರವರೆಗೆ 23 ಸಾವಿರ ಕೋಟಿ ರೂ. ಸಂಗ್ರಹ ಆಗಿದ್ದು ಆ ನಂತರ 2023 ರವರೆಗೆ ಎಷ್ಟು ಸಂಗ್ರಹ ಆಗಿದೆ ಎಂಬುದರ ಬಗ್ಗೆಯೂ ಮಾಹಿತಿ ಪಡೆದರು.

ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕರಾದ ಸುಶೀಲಮ್ಮ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net