

ಶಿವಮೊಗ್ಗ: ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ತ್ವರಿತವಾಗಿ ಪೂರ್ಣಗೊಳ್ಳುವ ನಿಟ್ಟಿನಲ್ಲಿ ಭೂಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಸೂಚನೆ ನೀಡಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಜಿಲ್ಲೆಗೆ ರಾಷ್ಟ್ರೀಯ ಹೆದ್ದಾರಿಗಳಿಗೆ ಸಂಬಂಧಿಸಿದ ಒಟ್ಟು 13 ಕಾಮಗಾರಿಗಳು ಮಂಜೂರಾಗಿವೆ. ಕೆಲವೆಡೆ ಅರಣ್ಯ ಇಲಾಖೆಯಿಂದಲೂ ಸಮಸ್ಯೆಯಾಗುತ್ತಿದೆ ಎಂದರು.
ಅರಣ್ಯ ಇಲಾಖೆಯಿಂದ ಏಳು ದಿನಗಳೊಳಗೆ ನಿರಾಕ್ಷೇಪಣಾ ಪತ್ರ ಒದಗಿಸುವುದಾಗಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಭರವಸೆ ನೀಡಿದರು. ಹೈಟೆನ್ಷನ್ ಟವರ್ ಮತ್ತು ವಿದ್ಯುತ್ ಕಂಬಗಳ ಸ್ಥಳಾಂತರವನ್ನು 15 ದಿನದೊಳಗೆ ಪೂರ್ಣಗೊಳಿಸುವಂತೆ ಕೆಪಿಟಿಸಿಎಲ್ ಅಧಿಕಾರಿಗಳಿಗೆ ತಿಳಿಸಿದರು.
ಶಿವಮೊಗ್ಗ ಬೈಪಾಸ್ ರಸ್ತೆಯಲ್ಲಿ ಕೈಬಿಡಲಾಗಿದ್ದ 5.38 ಕಿ.ಮೀ. ರಸ್ತೆ ನಿರ್ಮಾಣಕ್ಕೆ ಅಗತ್ಯವಿರುವ ಸೂಕ್ತ ಪಥ ನಕ್ಷೆಯನ್ನು 15 ದಿನದೊಳಗೆ ತಯಾರಿಸಿ ಮಂಜೂರಾತಿ ಪಡೆದು ಕಾಮಗಾರಿ ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಶಾಸಕ ಆರಗ ಜ್ಞಾನೇಂದ್ರ, ಎಸ್ಪಿ ಮಿಥುನ್‌ಕುಮಾರ್, ಡಿಸಿಎಫ್ ಶಿವಶಂಕರ್, ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಸನ್ನಕೃಷ್ಣ ಪಟಗಾರ್ ಮುಂತಾದವರಿದ್ದರು.
ಒತ್ತುವರಿ ತೆರವು ಬೇಡ:ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿರುವವರು, ಶರಾವತಿ ಸಂತ್ರಸ್ತರನ್ನು ಯಾವ ಕಾರಣಕ್ಕೂ ಒಕ್ಕಲೆಬ್ಬಿಸಬಾರದು. ಅವರಿಗೆ ನೋಟಿಸ್ ಜಾರಿ ಮಾಡಬಾರದು ಎಂದು ಬಿ.ವೈ.ರಾಘವೇಂದ್ರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳು ವಿಲೇವಾರಿ ಆಗುವವರೆಗೂ ಜಮೀನು ಅಥವಾ ಮನೆಗಳನ್ನು ತೆರವು ಮಾಡಬಾರದು. ರಾಜ್ಯ ಸರ್ಕಾರ 2015ರ ನಂತರದ ಒತ್ತುವರಿಯನ್ನು ತೆರವು ಮಾಡಲು ಸೂಚಿಸಿದೆ. ಆದರೆ ಇಲ್ಲಿಯೂ ಮಾನವೀಯ ನೆಲೆಯಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.