VIDEO| ರೀಲ್ಸ್​ ಮಾಡುವ ವೇಳೆ ಬೈಕ್​ಗೆ ಗುದ್ದಿದ ಕಾರು; ಇಬ್ಬರ ಸ್ಥಿತಿ ಚಿಂತಾಜನಕ

Reels Accident
Published on

ಲಖನೌ: ಸ್ಮಾರ್ಟ್​ಫೋನ್​ ಯುಗದಲ್ಲಿ ಯುವ ಜನತೆ ಅಲ್ಪಕಾಲದಲ್ಲೇ ಹೆಚ್ಚು ಖ್ಯಾತಿ ಪಡೆಯಬೇಕೆಂಬ ಹಂಬಲದೊಂದಿಗೆ ಇನ್ನಿಲ್ಲದ ಕೆಲಸಕ್ಕೆ ಕೈ ಹಾಕಿ ತಮ್ಮ ಜೀವಕ್ಕೆ ಕುತ್ತು ತಂಡುಕೊಳ್ಳುತ್ತಾರೆ. ಇದೀಗ ಅದೇ ರೀತಿಯ ಘಟನೆಯೊಂದು ಉತ್ತರಪ್ರದೇಶದ ಬಿಜ್ನೋರ್​ನಲ್ಲಿ ನಡೆದಿದ್ದು, ಇಬ್ಬರು ಯುವಕರ ಸ್ಥಿತಿ ಚಿಂತಾಜನಕವಾಗಿದೆ.

ಬಿಜ್ನೋರ್​ನ ರಾಷ್ಟ್ರೀಯ ಹೆದ್ದಾರಿ 34ರಲ್ಲಿ ಈ ಘಟನೆ ನಡೆದಿದ್ದು, ಅಪಘಾತರ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ಬುಲೆಟ್​ ಬೈಕ್​ನಲ್ಲಿ ಕುಳಿತುಕೊಂಡು ಇಬ್ಬರು ಯುವಕರು ರಾಷ್ಟ್ರೀಯ ಹೆದ್ದಾರಿಯಲ್ಲಿ ರೀಲ್ಸ್​ ಮಾಡುತ್ತಿದ್ದಾರೆ. ಈ ವೇಳೆ ಬೈಕ್​ ಚಲಾಯಿಸುತ್ತಿರುವ ಯುವಕ ಏಕಾಏಕಿ ಗಾಡಿಯನ್ನು ಬಲಕ್ಕೆ ಎಳೆದಿದ್ದು, ವೇಗವಾಗಿ ಬಂದ ಕಾರು ಬೈಕ್​ಗೆ ಡಿಕ್ಕಿ ಹೊಡೆದು ಮುಂದಕ್ಕೆ ಸಾಗಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಯುವಕರಿಬ್ಬರು ರಸ್ತೆಯ ಮತ್ತೊಂದು ಬದಿಗೆ ಹಾರಿ ಬಿದ್ದಿದ್ದು, ಇವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

ಈ ಕುರಿತು ಮಾತನಾಡಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಗಾಯಾಳುಗಳಿಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ವೈದ್ಯರು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಕೊಡುತ್ತಿದ್ದಾರೆ. ರೀಲ್ಸ್​ ಮಾಡುವ ವೇಳೆ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಕಾರನ್ನು ಹುಡುಕಲಾಗುತ್ತಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net