

ಬೆಂಗಳೂರು: ಸರಕು ಸಾಗಣೆ ತೆರಿಗೆ (ಜಿಎಸ್‌ಟಿ) ಸರಳೀಕರಣದ ಪ್ರಯೋಜನದ ಬಗ್ಗೆ ಗ್ರಾಹಕರಲ್ಲಿ ಜಾಗೃತಿ, ವರ್ತಕರಲ್ಲಿ ಕೇಂದ್ರ ಸರ್ಕಾರದ ಬಗ್ಗೆ ಸಕಾರಾತ್ಮಕ ಅಭಿಪ್ರಾಯ ಮೂಡಿಸಲು ಉದ್ದೇಶಿತ ಜಿಎಸ್‌ಟಿ ಹಬ್ಬವನ್ನು ತೃತೀಯ ತಂಡದ ಮುಖೇನ ಬಿಜೆಪಿ ಆಯೋಜಿಸುತ್ತಿದೆ.
ದೀಪಾವಳಿ ಹಬ್ಬದ ಬಳಿಕ ಜಿಎಸ್‌ಟಿ ಉತ್ಸವಕ್ಕೆ ವೇಗದ ಸ್ಪರ್ಶ ನೀಡಬೇಕೆಂಬ ವರಿಷ್ಠರ ಸೂಚನೆ ಪ್ರಕಾರ ವಾಣಿಜ್ಯೋದ್ಯಮ ಸಂಘ-ಸಂಸ್ಥೆಗಳಿಗೆ ಪ್ರೋತ್ಸಾಹಿಸಿ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದೆ.
ಮಹಾನಗರಗಳು ಹಾಗೂ ನಗರಗಳ ವ್ಯಾಪಾರ-ವಹಿವಾಟು ದಟ್ಟಣೆಯಿರುವ ಮಾರುಕಟ್ಟೆ, ಬೀದಿ ಹಾಗೂ ರಸ್ತೆಗಳನ್ನು ಕಾರ್ಯಕ್ರಮಕ್ಕೆ ಆಯ್ದುಕೊಂಡಿದೆ. ಸಂಸದ-ಶಾಸಕರು ಸೇರಿ ರಾಜ್ಯಮಟ್ಟದ ಎಲ್ಲ ನಾಯಕರನ್ನು ಜಿಎಸ್‌ಟಿ ಹಬ್ಬಕ್ಕೆ ಜೋಡಿಸಲಾಗಿದೆ.
ಬೆಂಗಳೂರಿನ ವ್ಯಾಪಾರ ದಟ್ಟಣೆಯ ಪ್ರದೇಶದಲ್ಲಿ ಉತ್ಸವ ನೆರವೇರಿದೆ. ಎಸ್‌ಪಿ ರೋಡ್‌ನಲ್ಲಿ ಬೆಂಗಳೂರು ಎಲೆಕ್ಟ್ರಾನಿಕ್ಸ್ ಡೀಲರ್ಸ್ ಅಸೋಸಿಯೇಷನ್ ನೇತೃತ್ವದಲ್ಲಿ ಈ ಕಾರ್ಯಕ್ರಮ ಶನಿವಾರ ನಡೆಯಿತು.
ಬೆಂಗಳೂರಿನಾಚೆಗೂ ಉತ್ಸವ ವಿಸ್ತರಣೆ ಭಾಗವಾಗಿ ಮತ್ತೊಂದು ಪ್ರಮುಖ ವಾಣಿಜ್ಯ ಕೇಂದ್ರವಾದ ಹುಬ್ಬಳ್ಳಿಯಲ್ಲಿ ತೃತೀಯ ತಂಡದ ಆಯೋಜನೆಗೆ ಪೂರ್ವ ತಯಾರಿಯಾಗಿದೆ. ಬೆಳಗಾವಿ, ಕಲಬುರಗಿ, ಮೈಸೂರು, ಮಂಗಳೂರು ಮತ್ತಿತರೆಡೆಯೂ ಜಿಎಸ್‌ಟಿ ಹಬ್ಬಗಳನ್ನು ಹಮ್ಮಿಕೊಳ್ಳಲು ಅನೇಕ ಸಂಘ-ಸಂಸ್ಥೆಗಳು ಮುಂದೆ ಬಂದಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸಂಘಟನಾತ್ಮಕವಾಗಿ ಬಲವರ್ಧನೆ ಭಾಗವಾಗಿ ಕಾರ್ಯಯೋಜನೆ ರೂಪಿಸಿ ಕಾರ್ಯಕರ್ತರಿಗೆ ಒಂದಿಲ್ಲೊಂದು ಜವಾಬ್ದಾರಿ ನೀಡಿ ನಾಯಕರು ಹುರುಪು ತುಂಬುತ್ತಿದ್ದರು. ಇದೀಗ ಕಾರ್ಯಕರ್ತರಲ್ಲಿ ವಿಶ್ವಾಸ ಹೆಚ್ಚಿಸುವಂತಹ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ಮಹಾನಗರ ಪಾಲಿಕೆಗಳ ಚುನಾವಣೆಗೆ ನಾಯಕರು ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ.
ಜಿಬಿಎ ವ್ಯಾಪ್ತಿಯ ಎಲ್ಲ ಮಂಡಲ (ವಿಧಾನಸಭಾ ಕ್ಷೇತ್ರ)ವಾರು ಪೂರ್ವಭಾವಿ ಸಭೆಗಳು ನ.3ರಿಂದ ಶುರುವಾಗಲಿದ್ದು, ಜಿಬಿಎಗೆ ವಿರೋಧಿಸಿದರೂ ಮಹಾನಗರ ಪಾಲಿಕೆಗಳ ಚುನಾವಣೆ ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಕಾರ್ಯಕರ್ತರಿಗೆ ಸಂದೇಶ, ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ನೀಡಲು ಸನ್ನದ್ಧವಾಗಲಿದೆ.
ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯ ಉಸ್ತುವಾರಿ ಡಾ.ರಾಧಮೋಹನ್ ದಾಸ್ ಅಗರ್ವಾಲ್, ವಿಧಾನಮಂಡಲ ಉಭಯ ಸದನಗಳ ಪ್ರತಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣ, ಬೆಂಗಳೂರು ವ್ಯಾಪ್ತಿ ಸಂಸದ-ಶಾಸಕರು ಸಾಥ್ ನೀಡಲಿದ್ದಾರೆ.