ಕೋಲ್ಡ್ ಸ್ಟೋರೇಜ್ ಕಾಮಗಾರಿಗೆ ವೇಗ

skp krushi
ಶಿಕಾರಿಪುರದಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಫಲಾನುಭವಿಗಳಿಗೆ ಸಂಸದ ಬಿ.ವೈ.ರಾಘವೇಂದ್ರ ಕೃಷಿ ಪರಿಕರ ವಿತರಿಸಿದರು. ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಇತರರಿದ್ದರು.
Published on

ಶಿಕಾರಿಪುರ: ಅಕಾಲಿಕ ಮಳೆಯಿಂದ ರೈತರು ಆತಂಕಗೊಂಡಿದ್ದಾರೆ. ಮಳೆ ಒಂದೆರಡು ದಿನದಿಂದ ಕಡಿಮೆಯಾಗಿದ್ದರಿಂದ ಕೃಷಿ ಚಟುವಟಿಕೆಗಳು ಗರಿಗೆದರಿವೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಶಿಕಾರಿಪುರ ತಾಲೂಕಿನಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಮೋಟಾರ್ ಪಂಪ್‌ಸೆಟ್ ಸೇರಿ ಇನ್ನಿತರ ಸಾಮಗ್ರಿ ವಿತರಿಸಿ ಮಾತನಾಡಿದ ಅವರು, ಯಡಿಯೂರಪ್ಪ ಅವರು ಅಧಿಕಾರದಲ್ಲಿ ಇದ್ದಾಗ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ರೈತರ ಬೋರ್‌ವೆಲ್ಗಳಿಗೆ ಅನುದಾನ ನೀಡಲಾಗಿತ್ತು. ಈಗಿನ ಸರ್ಕಾರವು ಶಾಸಕರ ಅನುದಾನದಿಂದ ಸವಲತ್ತು ವಿತರಿಸುತ್ತಿದೆ ಎಂದರು.

ಯೋಜನೆಯು 2022/23, 2023/24ನೇ ಸಾಲಿನ ಡಾ. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಹಾಗೂ 2019/20ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಇದಕ್ಕೆ ಅನುದಾನ ಮೀಸಲಿಡಲಾಗಿತ್ತು. ಶುಂಠಿ ಖರೀದಿ ಈಗ ಶುರುವಾಗಿದೆ. ತೋಟಗಾರಿಕಾ ಬೆಳೆಗಳ ಸಂಗ್ರಹಕ್ಕೆ ಕಾಳೇನಹಳ್ಳಿ ಹತ್ತಿರ ಕೋಲ್ಡ್ ಸ್ಟೋರೇಜ್ ಘಟಕದ ಕಾರ್ಯ ವೇಗವಾಗಿ ನಡೆಯುತ್ತಿದೆ. ಕೋಲ್ಡ್ ಸ್ಟೋರೇಜ್‌ನಿಂದ ಶುಂಠಿ ಸೇರಿ ಹಲವಾರು ತೋಟಗಾರಿಕಾ ಬೆಳೆಗಳಿಗೆ ಅನುಕೂಲವಾಗುತ್ತದೆ ಎಂದರು.

ಅಕಾಲಿಕ ಮಳೆ ಕಾರಣದಿಂದ ಮೆಕ್ಕೆಜೋಳ ಮತ್ತು ಭತ್ತ ಸಾಕಷ್ಟು ಪ್ರಮಾಣದಲ್ಲಿ ಹಾಳಾಗಿವೆ. ಮಳೆ ಕಾರಣದಿಂದ ಮೆಕ್ಕೆಜೋಳಕ್ಕೆ ಫಂಗಸ್ ಬರುತ್ತದೆ. ಭತ್ತ ಮುಗ್ಗುಲು ಹಿಡಿಯುವದರಿಂದ ಬೆಳೆಗೆ ಸೂಕ್ತ ಬೆಲೆ ಸಿಗುವದಿಲ್ಲ ಎಂದು ಹೇಳಿದರು.

ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಹಾಗೂ ಫಲಾನುಭವಿಗಳು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net