ಮಾತು ಮಾತು ಮಥಿಸಿದ ನವನೀತ

ವಿಜಯವಾಣಿ (1)
Published on

ಮಾತು ಮಾತು ಮಥಿಸಿ ನಾದದ ನವನೀತ ಎಂದಿದ್ದಾರೆ ವರಕವಿ ದ.ರಾ. ಬೇಂದ್ರೆ. ಈ ನುಡಿಗೆ ಸಂವಾದಿಯಾಗಿ ಉಪನಿಷತ್ಕಾಲದ ಋಷಿಗಳ ಸಂವಾದವು ಪ್ರಶ್ನೋತ್ತರ ರೂಪದಲ್ಲಿ ಹರಿದು ಬಂದಿದ್ದರಿಂದ ಅನುಭಾವದ ನವನೀತವನ್ನು ನಾವು ಕಾಣುತ್ತೇವೆ.

ಉದಾ

ವರುಣ ಋಷಿ-ಭೃಗುಋಷಿಗಳ ಸಂವಾದವೇ ತೈತ್ತರೀಯೋ ಪನಿಷತ್ತಾಗಿ ಹೊರಹೊಮ್ಮಿತು. ಯಮದೇವ- ನಚಿಕೇತರ ಸಂವಾದವೇ ಕಠೋಪನಿಷತ್ತಾಯಿತು. ಯಜ್ಞವಲ್ಕ್ಯಋಷಿ - ಮೈತ್ರೇಯಿಯರ ಪ್ರಶ್ನೋತ್ತರಗಳೇ ಬೃಹದಾರಣ್ಯಕ ಉಪನಿಷತ್ತಾಯಿತು. ನಾರದಋಷಿ -ಸನತ್ಕುಮಾರರ ಸಂವಾದವೇ ಛಾಂದೋಗ್ಯ ಉಪನಿಷತ್ತಾಗಿ ಸೃಷಿಯಾಯಿತು. ಅಂಗಿರಾ ಋಷಿ- ಶೌನಕ ಋಷಿಗಳ ಸಂವಾದ ಮುಂಡಕೋಪನಿಷತ್ತಾಗಿ ಹೊರಹೊಮ್ಮಿತು. ಪಿಪ್ಪಲಾದ ಋಷಿಗಳು - ಸುಕೇಶಾದಿ ಆರು ಶಿಷ್ಯರಿಗೆ ಉಪದೇಶ ಮಾಡಿದ್ದು ಪ್ರಶ್ನೋಪನಿಷತ್ ಆಯಿತು.

ಅದರಂತೆ ಪ್ರಜಾಪತಿಯು ದೇವತೆಗಳಿಗೆ ಉಪದೇಶ ಮಾಡಿದ್ದು ಕೇನೋಪನಿಷತ್ತಾಗಿ ಹೊರಹೊಮ್ಮಿತು. ಕೃಷ್ಣಾರ್ಜುನರ ಸಂವಾದವೇ ಶ್ರೀಮಧ್ಭಗವದ್ಗೀತೆಯಾಗಿ ಲೋಕ ಮಾನ್ಯವಾಯಿತು. ಅಂತೂ- ಋಷಿಗಳ ಪ್ರಶ್ನೋತ್ತರ ರೂಪವಾದ ಸಂವಾದದ ಮಥನವು, ಅನುಭಾವದ ಶಿಖರಕ್ಕೆ ಮೆಟ್ಟಿಲುಗಳಾಗಿ ಪರಿಣಮಿಸಿದ್ದು ಅರ್ಥಪೂರ್ಣ. ಮಾತು-ಮಾತುಗಳ ಮಥನದಿಂದ ಅನುಭಾವದ ನವನೀತ ಜನಿಸಬೇಕು. ಅಕ್ಕಮಹಾದೇವಿ, ‘ಮರ ಮರ ಮಥನಿಸಿ ಕಿಚ್ಚುಹುಟ್ಟಿ ಸುತ್ತಣ ತರುಮರಾದಿಗಳ ಸುಡಲಾಯಿತು...’ ಎಂಬ ವಚನದಲ್ಲಿ, ಹೇಗೆ ಮರ-ಮರಗಳ ಘರ್ಷಣೆಯಿಂದ ಕಿಚ್ಚು ಹುಟ್ಟಿ, ಸುತ್ತಣ ತರುಮರಾದಿ ಗಳು ಕಾಡ್ಗಿಚ್ಚಿನಲ್ಲಿ ಸುಟ್ಟು ಹೋಗುತ್ತವೋ ಹಾಗೇ ಆತ್ಮ ಆತ್ಮ ಮಥನಿಸಿ ಅನುಭಾವದ ನವನೀತ (ಬೆಣ್ಣೆ) ಹುಟ್ಟುತ್ತದೆ.

ಆ ಅನುಭಾವವು ತನುವಿನಲ್ಲಿರುವ ಕಾಮ- ಕ್ರೋಧ ಮೊದಲಾದ ಗುಣಾದಿಗಳನ್ನು ಸುಡುತ್ತದೆ. ಅಂಗಗುಣಗಳನ್ನು ಸುಟ್ಟುಕೊಂಡ ಅನುಭಾವಿಗಳು, ಆತ್ಮ ವಿಷಯವನ್ನು ಅನುಭವಿಸಿ ಹೇಳಬಲ್ಲವರು ವಿರಳ. ಹಲವು ಶಾಸ್ತ್ರಗಳಿಂದ ವಿಷಯ ಸಂಗ್ರಹಿಸಿ ಮಾತನಾಡುವವರಿದ್ದಾರೆ. ಆದರೆ ಅವರದೆಲ್ಲಾ ಶಬ್ದಾರಣ್ಯ. ಅದರ ಹಿಂದೆ ಸಾಕ್ಷಾತ್ಕಾರವಿಲ್ಲ, ಅನುಭಾವಿಗಳ ಅನುಭಾವ ತೋರಿ ನನ್ನ ಒಡಲನ್ನು ರಕ್ಷಿಸು ಎಂದು ಅಕ್ಕ ದೇವನಲ್ಲಿ ಕೇಳಿಕೊಂಡಿದ್ದಾಳೆ. ಅನುಭವವಿಲ್ಲದವನ ಮಾತುಗಳು ಬಿದಿರುಬುಟ್ಟಿಯಲ್ಲಿ ನೀರು ತುಂಬಿ ಮೇಲೆತ್ತಿದಂತೆ. ಆತ್ಮತತ್ವ ತಿಳಿದವರು ಕೊಟ್ಟ ಅನುಭಾವದ ನವನೀತ ಜಗತ್ತಿಗೆ ಮಹಾನ್ ಕೊಡುಗೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net