ಬೋಗಸ್ ಬಿಲ್ ದೋಖಾ: ಬಗೆದಷ್ಟು ಆಳ, ಶಂಕೆ ಬಹಳ; 2013ರಿಂದ 2020 ಅವಧಿಯಲ್ಲಿ ಕೋಟಿ ಕೋಟಿ ಲೂಟಿ

vidhana soudha 1
Published on

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

ರಾಜ್ಯದಲ್ಲಿ ಟೆಂಡರ್ ಕಮಿಷನ್ ಗಲಾಟೆ ನಡುವೆಯೇ ಬೋಗಸ್ ಬಿಲ್ ಸೃಷ್ಟಿಸಿ ಸರ್ಕಾರದ ಹಣ ಲೂಟಿ ಹೊಡೆದಿರುವ ಪ್ರಕರಣ ಭಾರಿ ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೇ ಜಲಸಂಪನ್ಮೂಲ ಇಲಾಖೆಯ ವಿಚಕ್ಷಣಾ ದಳ ದಾಖಲೆಗಳ ಹುಡುಕಾಟ ತೀವ್ರಗೊಳಿಸಿದೆ. ಪ್ರಕರಣದ ಗಂಭೀರತೆ ಅರಿತು ಮಧ್ಯ ಪ್ರವೇಶಿಸಿರುವ ಸರ್ಕಾರ, ಕೇಂದ್ರೀಕೃತ ಪಾವತಿ ವ್ಯವಸ್ಥೆ ಜಾರಿಗೆ ಮುಂದಾಗಿದೆ.

ಕರ್ನಾಟಕ ನೀರಾವರಿ ನಿಗಮ ಸೇರಿ ವಿವಿಧ ನಿಗಮಗಳ ಅಧಿಕಾರಿ, ಸಿಬ್ಬಂದಿ ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಕಾಮಗಾರಿಯ ಟೆಂಡರ್ ಕರೆಯದೆ ನಕಲಿ ಬಿಲ್ ಸೃಷ್ಟಿಸಿ ಕೋಟ್ಯಂತರ ರೂಪಾಯಿ ನುಂಗಿರುವ ಕುರಿತು ಸರ್ಕಾರದ ಮಟ್ಟದಲ್ಲಿ ಗುಸುಗುಸು ಚರ್ಚೆ ನಡೆದಿತ್ತು. ಈ ವೇಳೆಯೇ ಕರ್ನಾಟಕ ನೀರಾವರಿ ನಿಗಮ ವ್ಯಾಪ್ತಿಯ ಹಿಪ್ಪರಗಿ ಬ್ಯಾರೇಜ್ ಯೋಜನಾ ವಿಭಾಗ ಅಥಣಿ (ಬೆಳಗಾವಿ ವಲಯ), ನೀರಾವರಿ ಯೋಜನಾ ವಿಭಾಗ, ಕಲಬುರಗಿ (ಕಲಬುರಗಿ ವಲಯ), ತುಂಗಭದ್ರಾ ಎಡದಂಡೆ ಕಾಲುವೆ ವಿಭಾಗ, ಸಿರವಾರ (ಮುನಿರಾಬಾದ್) ವಲಯದ ಕಚೇರಿಗಳಲ್ಲಿ ನಕಲಿ ದಾಖಲೆ ಸೃಷ್ಟಿಸಿ ಕೋಟಿ ಕೋಟಿ ಲೂಟಿ ಮಾಡಿರುವುದು ಸರ್ಕಾರದ ಗಮನಕ್ಕೆ ಬಂದಿದೆ.

2015-16ರಿಂದಲೂ ಇಂತಹ ಪ್ರಕರಣಗಳು ನಡೆದಿರುವ ಬಗ್ಗೆ ಅನುಮಾನಗಳಿದ್ದು, ಇದರ ಪತ್ತೆ ಹೇಗೆಂಬುದೆ ಚಿಂತೆಯಾಗಿದೆ. ಇದೇ ಕಾರಣಕ್ಕೆ ತಕ್ಷಣದ ಡ್ಯಾಮೇಜ್ ಕಂಟ್ರೋಲ್​ಗೆ ಕೇಂದ್ರೀಕೃತ ಪಾವತಿ ವ್ಯವಸ್ಥೆ ಮತ್ತು ಗುತ್ತಿಗೆದಾರರು ಆಡಿಟಿಂಗ್ ಮತ್ತು ಅಕೌಂಟ್ಸ್ ವ್ಯವಸ್ಥೆ ಸಂಪರ್ಕಕ್ಕೆ ಬಾರದ ವ್ಯವಸ್ಥೆ ರೂಪಿಸಲೂ ಇಲಾಖೆ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ. ಇನ್ನು ಜಲಸಂಪನ್ಮೂಲ ಇಲಾಖೆ ನಿವೃತ್ತ ಇಂಜಿನಿಯೊಬ್ಬರು ಈ ನಕಲಿ ಬಿಲ್ ಪ್ರಕರಣ ವಿಚಾರವಾಗಿ ವಿಜಯವಾಣಿಗೆ ಮಾಹಿತಿ ನೀಡಿ, ಹಿಂದಿನ ಸರ್ಕಾರದಿಂದಲೂ ಬೋಗಸ್ ಬಿಲ್ ಸೃಷ್ಟಿ ಸದ್ದಿಲ್ಲದೆ ನಡೆದಿದೆ. ಎಲ್ಲರೂ ಶಾಮೀಲಾಗಿರುವ ಕಾರಣ ಬಹಿರಂಗವಾಗದಂತೆ ನೋಡಿಕೊಳ್ಳಲಾಗುತ್ತದೆ. ಅಲ್ಲಿ ಲೂಟಿ ಹೊಡೆದ ಹಣ ವಿಧಾನಸೌಧದವರೆಗೂ ಮುಟ್ಟಿರುವ ಸಾಧ್ಯತೆ ಇದೆ. ಅದರ ತನಿಖೆ ಅಷ್ಟು ಸುಲಭವಲ್ಲ ಎಂದು ವಿವರಿಸಿದ್ದಾರೆ.

ಸಾಮಾನ್ಯವಾಗಿ ಮಂಜೂರಾದ ಕಾಮಗಾರಿಗೆ ಮೊದಲು ಅಂದಾಜು ಪಟ್ಟಿ ತಯಾರಿಕೆ ಆಗುತ್ತದೆ, 100 ಕೋಟಿ ರೂ.ಗಿಂತ ಹೆಚ್ಚಿನದಾದರೆ ಸಮಗ್ರ ಯೋಜನಾ ವರದಿಯನ್ನು ಖಾಸಗಿಯವರ ನೆರವು ಪಡೆದು ಸಿದ್ಧಪಡಿಸಲಾಗುತ್ತದೆ. ಬಳಿಕ ತಾಂತ್ರಿಕ ಸಲಹಾ ಸಮಿತಿಯಿಂದ ಅನುಮೋದನೆಯಾಗುತ್ತದೆ. ಟೆಂಡರ್ ಒಪ್ಪಿಗೆಯಾದ ಮೇಲೆ ವರ್ಕ್ ಆರ್ಡರ್ ನೀಡಿ ಅಗ್ರಿಮೆಂಟ್ ಮಾಡಿಕೊಂಡು ಹಂತಹಂತವಾಗಿ ಪಾವತಿ ಮಾಡಲಾಗುತ್ತದೆ. ಕೊನೆಗೆ ಗುಣಮಟ್ಟ ಪರೀಕ್ಷೆ, ಅಂತಿಮ ಬಿಲ್ ಪಾವತಿ ಸಾಮಾನ್ಯ ಪ್ರಕ್ರಿಯೆಗಳು. ಆದರೆ ಈ ಬೋಗಸ್ ಬಿಲ್ ಪ್ರಕರಣದಲ್ಲಿ ಟೆಂಡರ್ ಕರೆಯದೆ, ಬೋರ್ಡ್ ಮೀಟಿಂಗ್​ನಲ್ಲಿ ಅನುಮೋದನೆಯೂ ಆಗದೆ ಕೋಟ್ಯಂತರ ರೂ. ಅನ್ನು ಗುತ್ತಿಗೆದಾರರಿಗೆ ಪಾವತಿ ಹಿಂದೆ ದೊಡ್ಡ ಕೈಗಳಿರುವ ಶಂಕೆ ಎದ್ದು ಕಾಣಿಸುತ್ತಿದೆ.

ಮತ್ತೆ 20 ನಕಲಿ ಬಿಲ್ ಪತ್ತೆ: ಕರ್ನಾಟಕ ನೀರಾವರಿ ನಿಗಮ ನೇಮಿಸಿದ ತನಿಖಾ ತಂಡವು ಹಿಪ್ಪರಗಿ ಬ್ಯಾರೇಜ್ ನಾಲಾ ವಿಭಾಗಕ್ಕೆ ಸಂಬಂಧಿಸಿದಂತೆ ಕಾಮಗಾರಿಗಳ ನಕಲಿ ಬಿಲ್ ಹಾಗೂ ದಾಖಲೆಗಳನ್ನು ಸೃಷ್ಟಿಮಾಡಿ ಸರ್ಕಾರ 16.62 ಕೋಟಿ ರೂ. ದುರುಪಯೋಗಪಡಿಸಿಕೊಂಡಿದ್ದನ್ನು ಬಯಲಿಗೆಳೆದಿತ್ತು. ಈ ಪ್ರಕರಣದಲ್ಲಿ 8 ಅಧಿಕಾರಿಗಳನ್ನು ವಾರದ ಹಿಂದಷ್ಟೇ ಅಮಾನತು ಮಾಡಲಾಗಿದೆ. ಇದೀಗ ಹಿಪ್ಪರಗಿ ಬ್ಯಾರೇಜ್ ಯೋಜನಾ ವಿಭಾಗ, ಯೋಜನಾ ವಿಭಾಗ 1, ತುಂಗಭದ್ರಾ ಎಡದಂಡೆ ಕಾಲುವೆ ವಿಭಾಗ ನಂ.4ರ ಕಚೇರಿಗಳಲ್ಲಿ ಒಟ್ಟು 20 ನಕಲಿ ಬಿಲ್​ಗಳನ್ನು ಸೃಷ್ಟಿಸಿ ಸುಮಾರು 11.72 ಕೋಟಿ ರೂ. ದುರುಪಯೋಗ ಪತ್ತೆ ಮಾಡಿದೆ. ಈ ಪ್ರಕರಣದಲ್ಲಿ 16 ಅಧಿಕಾರಿ, ನೌಕರರು, 6 ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ಒಂಬತ್ತು ಮಂದಿ ನಿವೃತ್ತರಾಗಿದ್ದು, ಒಬ್ಬರು ನಿಧನರಾಗಿದ್ದಾರೆ. ಸದ್ಯ ಸರ್ಕಾರ ಇವರ ಬ್ಯಾಂಕ್ ಖಾತೆ ರದ್ದು ಮಾಡಲು ಹೇಳಿದೆ, ಜತೆಗೆ ಆಸ್ತಿ ಪರಭಾರೆಗೂ ತಡೆ ಹಾಕಿದೆ.

ತನಿಖಾ ಸಮಿತಿ ದಾಖಲಿಸಿದ್ದೇನು?: ನಿಯಮಾನುಸಾರ ಯಾವುದೆ ಬಿಲ್​ಗಳ ಪಾವತಿಗೆ ಸಂಬಂಧಿಸಿದಂತೆ ಪಿಡಬ್ಲ್ಯುಡಿ ಎ ಕೋಡ್, ರಿ ವ್ಯಾಲಿ ಅಕೌಂಟಿಂಗ್ ಕೋಡ್, ಕಂಪನೀಸ್ ಆಕ್ಟ್ 1956, ಕೆಟಿಟಿಪಿ ಆಕ್ಟ್, ಕರ್ನಾಟಕ ಫೈನಾನ್ಸಿಯಲ್ ಕೋಡ್ ಮತ್ತು ಇನ್ನಿತರ ಕಾಯ್ದೆಗಳ ಪ್ರಕಾರ ಸರ್ಕಾರ ಹೊರಡಿಸಿದ ಆದೇಶಗಳನ್ನು ಪಾಲಿಸಿಲ್ಲ. ಕರ್ತವ್ಯ ಲೋಪ, ಕಾರ್ಯವಿಧಾನದಲ್ಲಿನ ವ್ಯತ್ಯಾಸ ಆಗಿವೆ. ಅಕ್ರಮ ವಾಗಿ ಹಣ ಸೆಳೆಯುವ ಸಂದರ್ಭ ಉಂಟಾಗಿದೆ.

ಅಕ್ರಮದ ಪುರಾಣ

  • ಎಲ್ಲೆಲ್ಲಿ: ಶಿವಮೊಗ್ಗ, ರಾಮದುರ್ಗ, ನರಗುಂದ, ಕಲಬುರಗಿ, ಅಥಣಿ, ಮುನಿರಾ ಬಾದ್, ಸಿರವಾರ, ಹೌರಗೇರಿ
  • ಯಾವಾಗ: 2013ರಿಂದ 2020ರ ಅವಧಿ.
  • ಸದ್ಯಕ್ಕೆ ಸಿಕ್ಕ ಲೆಕ್ಕ: 28.35 ಕೋಟಿ ರೂಪಾಯಿ

ಏಳುವ ಪ್ರಶ್ನೆಗಳು?

  • ಟೆಂಡರ್ ಕರೆಯದಿದ್ದರೂ ಕೋಟಿ ಕೋಟಿ ರೂಪಾಯಿ ವರ್ಗಾವಣೆ ಆಗಿದ್ದು ಹೇಗೆ? ಬೇರೆ ಶೀರ್ಷಿಕೆ ಹಣವನ್ನು ಬಳಸಿಕೊಳ್ಳಲು ಸಾಧ್ಯವಾಗಿದ್ದು ಹೇಗೆ?
  • ಲಕ್ಷ ರೂ.ಗಳಲ್ಲಾದರೆ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿರದಿರಬಹುದು, 15-20 ಕೋಟಿ ರೂ. ವರ್ಗಾವಣೆಯಾದರೂ ಗಮನಕ್ಕೆ ಬಂದಿಲ್ಲ ಎಂದರೆ ನಂಬುವುದು ಹೇಗೆ?
  • ವಾರ್ಷಿಕ ಆಡಿಟ್ ನಡೆಯುತ್ತದೆ, ಅಂದರೆ ಆಡಿಟ್ ನಡೆಸುವವರೂ ಪರೋಕ್ಷವಾಗಿ ಶಾಮೀಲಾಗಿದ್ದಾರೆಯೇ?
  • ಒಂದೇ ಬಾರಿಗೆ 10-12 ಕೋಟಿ ರೂ. ವರ್ಗವಾದರೆ ಹೇಗೋ ಕಣ್ತಪ್ಪಿದೆ ಎನ್ನಬಹುದು, ಪ್ರತಿ ವರ್ಷ 1-2 ಕೋಟಿ ರೂ. ವರ್ಗವಾದರೂ ಅರಿವಿಗೆ ಬಾರದ್ದು ಸೋಜಿಗ.
  • ನಿಗಮದ ಮುಖ್ಯಸ್ಥರು ಸಚಿವರೇ ಆಗಿರುತ್ತಾರೆ. ಇಷ್ಟೆಲ್ಲ ನಡೆದರೂ ಅವರ ಗಮನಕ್ಕೆ ಬಾರದೆ ಹೋಯಿತೇ?
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net