ಇಂದಿನಿಂದ 5 ದಿನಗಳ ವಿಶೇಷ ಅಧಿವೇಶನ; ನೂತನ ಭವನಕ್ಕೆ ಸ್ಥಳಾಂತರ ನಿರೀಕ್ಷೆ

new parliament
Published on

ನವದೆಹಲಿ: ಐದು ದಿನಗಳ ಸಂಸತ್ತಿನ ವಿಶೇಷ ಅಧಿವೇಶನ ಸೋಮವಾರ ಆರಂಭವಾಗಲಿದೆ. ಸಂಸತ್ತಿನ 75 ವರ್ಷಗಳ ಪಯಣ ಕುರಿತ ಚರ್ಚೆ, ನಾಲ್ಕು ಮಸೂದೆಗಳ ಮಂಡನೆ ಜತೆಗೆ ಅಚ್ಚರಿಯ ವಿಷಯಗಳು ಈ ವಿಶೇಷ ಅಧಿವೇಶನದಲ್ಲಿ ಪ್ರಸ್ತಾಪಗೊಳ್ಳುತ್ತವೆಯೇ ಎಂಬ ಕುತೂಹಲ ಗರಿಗೆದರಿದೆ.

ಸಂವಿಧಾನ ಸಭೆಯಿಂದ ಪ್ರಾರಂಭವಾಗುವ ಸಂಸತ್ತಿನ 75 ವರ್ಷಗಳ ಪಯಣದ ವಿಶೇಷ ಚರ್ಚೆಯು ಪಟ್ಟಿ ಮಾಡಲಾದ ಕಾರ್ಯಸೂಚಿಯಲ್ಲಿನ ಪ್ರಮುಖ ವೈಶಿಷ್ಟ್ಯವಾಗಿದ್ದರೂ, ಈ ಸಮಯದಲ್ಲಿ ವಿಶೇಷ ಅಧಿವೇಶನ ಕರೆದಿರುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ. ಪಟ್ಟಿ ಮಾಡಲಾದ ಕಾರ್ಯಸೂಚಿಯ ಭಾಗವಾಗಿರದ ಕೆಲವು ಹೊಸ ಶಾಸನಗಳು ಅಥವಾ ಇತರ ವಿಷಯಗಳನ್ನು ಸಂಸತ್ತಿನಲ್ಲಿ ಮಂಡಿಸುವ ವಿಶೇಷ ಅಧಿಕಾರವನ್ನು ಸರ್ಕಾರ ಹೊಂದಿದೆ.

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆಯು ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಂಡನೆಯಾಗುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಪ್ರಕಟಿಸಲಾಗಿರುವ ಅಧಿಕೃತ ಕಾರ್ಯಸೂಚಿಯಲ್ಲಿ ಈ ವಿಷಯ ಇಲ್ಲವಾದರೂ ಪ್ರಮುಖವಾಗಿ ಈ ಸಂಗತಿಯನ್ನೇ ಗುರಿಯಾಗಿಟ್ಟುಕೊಂಡು ಅಧಿವೇಶನ ನಡೆಸಲು ಸರ್ಕಾರ ಉದ್ದೇಶಿಸಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

2008ರಲ್ಲಿ ಅಂದಿನ ಡಾ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ರಾಜ್ಯಸಭೆಯಲ್ಲಿ ಮಹಿಳಾ ಮೀಸಲು ಮಸೂದೆ ಮಂಡಿಸಿತ್ತು. 2010ರ ಮಾ.9ರಂದು ರಾಜ್ಯಸಭೆ ಮಸೂದೆಯನ್ನು ಅನುಮೋದಿಸಿತ್ತು. ಆದರೆ, ಮಸೂದೆಯನ್ನು ಲೋಕಸಭೆಯಲ್ಲಿ ಪರಿಗಣನೆಗೆ ತೆಗೆದá-ಕೊಳ್ಳಲಾಗಿರಲಿಲ್ಲ. 2014 ಮತ್ತು 2019ರ ಲೋಕಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಬಿಜೆಪಿ ಮಹಿಳಾ ಮೀಸಲಾತಿ ಕುರಿತು ಭರವಸೆ ನೀಡಿದ್ದು, ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನ ಈ ಭರವಸೆ ಈಡೇರಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ. ವಿಶೇಷ ಅಧಿವೇಶನ ಕಾರ್ಯಸೂಚಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ನೇಮಕದ ಮಸೂದೆಯನ್ನು ಸರ್ಕಾರ ಪಟ್ಟಿ ಮಾಡಿದೆ. ಕಳೆದ ಮುಂಗಾರು ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ಈ ಮಸೂದೆ ಮಂಡಿಸಲಾಗಿದೆ. ಈ ಮಸೂದೆಗೆ ಈಗಾಗಲೇ ಪ್ರತಿಪಕ್ಷ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ.

ಅಧಿವೇಶನದ ಮೊದಲ ದಿನದಂದು, ಸಂಸತ್ತಿನ 75 ವರ್ಷಗಳ ಪಯಣದ ಕುರಿತು ವಿಶೇಷ ಚರ್ಚೆಯನ್ನು ಸರ್ಕಾರ ಪಟ್ಟಿ ಮಾಡಿದೆ. ಸಂವಿಧಾನ ಸಭೆಯಿಂದ ಪ್ರಾರಂಭವಾಗುವ 75 ವರ್ಷಗಳ ಪಾರ್ಲಿಮೆಂಟರಿ ಜರ್ನಿ - ಸಾಧನೆಗಳು, ಅನುಭವಗಳು, ನೆನಪುಗಳು ಮತ್ತು ಕಲಿಕೆಗಳು ಎಂಬ ಚರ್ಚೆಯ ಜತೆಗೆ, ಪಟ್ಟಿ ಮಾಡಲಾದ ಇತರ ವಿಷಯಗಳಲ್ಲಿ ’ವಕೀಲರ (ತಿದ್ದುಪಡಿ) ಮಸೂದೆ, 2023’ಇದೆ. ಇದಲ್ಲದೆ, ’ದಿ ಪ್ರೆಸ್ ಮತ್ತು ರಿಜಿಸ್ಟ್ರೇಶನ್ ಆಫ್ ಪಿರಿಯಾಡಿಕಲ್ಸ್ ಮಸೂದೆ, 2023’ ಹಾಗೂ ’ಪೋಸ್ಟ್ ಆಫೀಸ್ ಮಸೂದೆ, 2023’ ಕೂಡ ಕಲಾಪದ ಪಟ್ಟಿಯಲ್ಲಿವೆ. ಆಗಸ್ಟ್ 31ರಂದು ಈ ಅಧಿವೇಶನವನ್ನು ಘೊಷಿಸುವಾಗ ಸಂಸದೀಯ ವ್ಯವಹಾರಗಳ ಸಚಿವ

ಪ್ರಲ್ಹಾದ ಜೋಶಿ ಅವರು ಇದನ್ನು ವಿಶೇಷ ಅಧಿವೇಶನ ಎಂದು ಬಣ್ಣಿಸಿದ್ದರು. ಆದರೆ, ತದನಂತರ ಸರ್ಕಾರವು ‘ಇದು ಸಾಮಾನ್ಯ ಅಧಿವೇಶನ, ಪ್ರಸ್ತುತ ಲೋಕಸಭೆಯ 13 ನೇ ಅಧಿವೇಶನ ಮತ್ತು ರಾಜ್ಯಸಭೆಯ 261 ನೇ ಅಧಿವೇಶನ’ ಎಂದು ಸ್ಪಷ್ಟನೆ ನೀಡಿತ್ತು.

ಸಾಮಾನ್ಯವಾಗಿ ಪ್ರತಿ ವರ್ಷ ಸಂಸತ್ತಿನ ಬಜೆಟ್, ಮುಂಗಾರು, ಚಳಿಗಾಲದ ಅಧಿವೇಶನಗಳು ನಡೆಯುತ್ತವೆ. ಮುಂಗಾರು ಅಧಿವೇಶನ ಜುಲೈ-ಆಗಸ್ಟ್​ನಲ್ಲಿ ನಡೆದರೆ, ಚಳಿಗಾಲದ ಅಧಿವೇಶನ ನವೆಂಬರ್-ಡಿಸೆಂಬರ್​ನಲ್ಲಿ ನಡೆಯುತ್ತದೆ. ಬಜೆಟ್ ಅಧಿವೇಶನವು ಪ್ರತಿ ವರ್ಷ ಜನವರಿ ಅಂತ್ಯದಲ್ಲಿ ಪ್ರಾರಂಭವಾಗುತ್ತದೆ. ಅಲ್ಲದೆ, ಎರಡು ಅಧಿವೇಶನಗಳ ನಡುವಿನ ಅವಧಿಯ ಅಂತರವು ಆರು ತಿಂಗಳಿಗಿಂತ ಹೆಚ್ಚಿರಬಾರದು ಎಂಬ ನಿಯಮವಿದೆ.

ls rs speakers
ನೂತನ ಸಂಸತ್ ಭವನದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಧ್ವಜಾರೋಹಣ ನೆರವೇರಿಸಿ ವಂದಿಸಿದರು. ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಉಪಸ್ಥಿತರಿದ್ದರು.

ಮಹಿಳಾ ಮೀಸಲಾತಿ ಮಸೂದೆಗೆ ಆಗ್ರಹ

ಹೈದರಾಬಾದ್: ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕರಿಸಬೇಕು ಎಂಬ ಬೇಡಿಕೆಯನ್ನು ಕಾಂಗ್ರೆಸ್ ಭಾನುವಾರ ಪುನರುಚ್ಚರಿಸಿದೆ. ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಈ ಮಸೂದೆಯನ್ನು ಅಂಗೀಕರಿಸಬೇಕು ಎಂದು ಹೈದರಾಬಾದ್​ನಲ್ಲಿ ನಡೆದಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯು ಒತ್ತಾಯಿಸಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ರಾಜೀವ್ ಗಾಂಧಿ ಅವರು ಮೇ 1989ರಲ್ಲಿ ಪಂಚಾಯಿತಿ ಮತ್ತು ನಗರಪಾಲಿಕೆಗಳಲ್ಲಿ ಮೂರನೇ ಒಂದು ಭಾಗದಷ್ಟು ಮಹಿಳಾ ಮೀಸಲಾತಿಗೆ ಸಂವಿಧಾನ ತಿದ್ದುಪಡಿ ಮಸೂದೆಗಳನ್ನು ಮಂಡಿಸಿದ್ದರು. ಇದು ಲೋಕಸಭೆಯಲ್ಲಿ ಅಂಗೀಕರಿಸಲ್ಪಟ್ಟಿತು. ಆದರೆ, ಸೆಪ್ಟೆಂಬರ್ 1989 ರಲ್ಲಿ ರಾಜ್ಯಸಭೆಯಲ್ಲಿ ಅಂಗೀಕರವಾಗಲಿಲ್ಲ. ನಂತರ ಅಂದಿನ ಪ್ರಧಾನ ಮಂತ್ರಿ ಪಿ.ವಿ.ನರಸಿಂಹರಾವ್ ಅವರು ಏಪ್ರಿಲ್ 1993ರಲ್ಲಿ ಪಂಚಾಯಿತಿ ಮತ್ತು ನಗರಪಾಲಿಕೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಮೀಸಲಾತಿಗಾಗಿ ಸಂವಿಧಾನ ತಿದ್ದುಪಡಿ ಮಸೂದೆಗಳನ್ನು ಮರು ಮಂಡಿಸಿದರು. ಆಗ ಎರಡೂ ಮಸೂದೆಗಳು ಅಂಗೀಕರಿಸಲ್ಪಟ್ಟು ಕಾನೂನುಗಳಾದವು. ಈಗ ಪಂಚಾಯಿತಿ ಮತ್ತು ನಗರಪಾಲಿಕೆಗಳಲ್ಲಿ 15 ಲಕ್ಷಕ್ಕೂ ಹೆಚ್ಚು ಚುನಾಯಿತ ಮಹಿಳಾ ಪ್ರತಿನಿಧಿಗಳಿದ್ದಾರೆ ಎಂದು ಅವರು ಹೇಳಿದ್ದಾರೆ. ಡಾ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಸಂಸತ್ತು, ರಾಜ್ಯ ಶಾಸಕಾಂಗಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಮೀಸಲಾತಿಗಾಗಿ ಸಂವಿಧಾನ ತಿದ್ದುಪಡಿ ಮಸೂದೆ ತಂದರು. ಮಸೂದೆಯನ್ನು ಮಾರ್ಚ್ 9, 2010 ರಂದು ರಾಜ್ಯಸಭೆಯಲ್ಲಿ ಅಂಗೀಕರಿಸಲಾಯಿತು. ಆದರೆ, ಲೋಕಸಭೆಯಲ್ಲಿ ಇದನ್ನು ಅಂಗೀಕರಿಸಲಾಗಲಿಲ್ಲ ಎಂದು ರಮೇಶ್ ತಿಳಿಸಿದ್ದಾರೆ.

ಕಾರ್ಯಸೂಚಿಗೆ 8 ಮಸೂದೆ ಸಂಸತ್ತಿನ ವಿಶೇಷ ಅಧಿವೇಶನದ ಕಾರ್ಯಸೂಚಿಗೆ

ಒಟ್ಟು 8 ಮಸೂದೆಗಳನ್ನು ಸೇರ್ಪಡೆ ಮಾಡಲಾಗಿದೆ. ಈ ಮೊದಲು ನಾಲ್ಕು ಮಸೂದೆಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ನೀಡಿತ್ತು. ಹಿರಿಯ ನಾಗರಿಕರ ಕಲ್ಯಾಣಕ್ಕೆ ಸಂಬಂಧಿಸಿದ ಒಂದು ಮಸೂದೆ ಮತ್ತು ಎಸ್​ಸಿ/ಎಸ್​ಟಿ ಆದೇಶ ಕುರಿತ ಮೂರು ಮಸೂದೆಗಳನ್ನು ಕಾರ್ಯಸೂಚಿಗೆ ಮತ್ತೆ ಸೇರಿಸಲಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರು ಭಾನುವಾರ ನಡೆದ ಸರ್ವಪಕ್ಷಗಳ ಸಭೆಯಲ್ಲಿ ತಿಳಿಸಿದರು.

ಹೊಸ ಸಂಸತ್ ಭವನದಲ್ಲಿ ಧ್ವಜಾರೋಹಣ

ಉಪರಾಷ್ಟ್ರಪತಿ ಮತ್ತು ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್ ಅವರು ವಿಶೇಷ ಅಧಿವೇಶನದ ಮುನ್ನಾದಿನವಾದ ಭಾನುವಾರ ಬೆಳಗ್ಗೆ ಸಂಸತ್ತಿನ ನೂತನ ಕಟ್ಟಡದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ್ದಾರೆ. ಈ ಸಮಾರಂಭದಲ್ಲಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಪಾಲ್ಗೊಂಡಿದ್ದರು. ಈ ಅಧಿವೇಶನದ ಸಮಯದಲ್ಲಿ ಸಂಸತ್ತು ತನ್ನ ಹೊಸ ಮನೆಗೆ ಸ್ಥಳಾಂತರಗೊಳ್ಳುವ ಬೆಳವಣಿಗೆ ನಡೆಯುವುದು ಬಹುತೇಕ ಖಚಿತ ಎನ್ನಲಾಗಿದೆ. ಮೇ 28 ರಂದು ಪ್ರಧಾನಿ ಮೋದಿ ಉದ್ಘಾಟಿಸಿದ ಹೊಸ ಕಟ್ಟಡಕ್ಕೆ ಸಂಸತ್ತಿನ ಸ್ಥಳಾಂತರವು ಅಧಿವೇಶನದ ಸುತ್ತಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.

ಇದೊಂದು ಐತಿಹಾಸಿಕ ಕ್ಷಣವಾಗಿದೆ, ಭಾರತವು ಯುಗಾಂತರದ ಬದಲಾವಣೆಗೆ ಸಾಕ್ಷಿಯಾಗಿದೆ. ಜಗತ್ತು ಭಾರತದ ಶಕ್ತಿ ಮತ್ತು ಕೊಡುಗೆಯನ್ನು ಸಂಪೂರ್ಣವಾಗಿ ಗುರುತಿಸುತ್ತಿದೆ.

| ಜಗದೀಪ್ ಧನಕರ್ ಉಪರಾಷ್ಟ್ರಪತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net