

ಬೆಂಗಳೂರು: ಗೃಹ/ ನಿವೇಶನ ಖರೀದಿದಾರರು ಮತ್ತು ಅಭಿವೃದ್ಧಿದಾರರು/ ಪ್ರವರ್ತಕರನ್ನು ಬೆಸೆದ ರೇರಾ ಕಾಯ್ದೆ (ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ)ಯಡಿ ಪ್ರಕರಣದಲ್ಲಿ ಕಂದಾಯ ವಸೂಲಿಗೆ ವಿಶೇಷ ಕೋಶ ತೆರೆಯಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.
ಎರಡೂ ಕಡೆಯುವರಿಗೆ ಸಂಪರ್ಕ ಕೊಂಡಿ, ಜನಸ್ನೇಹಿಯಾಗಿ ಕೆಲಸ ಮಾಡುತ್ತಿರುವ ರೇರಾ ಪ್ರಾಧಿಕಾರವು ದೂರುಗಳ ಸ್ವೀಕಾರ, ಇತ್ಯರ್ಥದ ಜವಾಬ್ದಾರಿ ಹೊಂದಿದೆ. ಪ್ರವರ್ತಕರು ವಾರ್ಷಿಕ ವರದಿ ಸಲ್ಲಿಸದ ಕಾರಣ ಪ್ರಾಧಿಕಾರವು 40 ಕೋಟಿ ರೂ. ದಂಡ ವಿಧಿಸಿದೆ.
ಇದುವರೆಗೂ 37.33 ಲಕ್ಷ ರೂ. ವಸೂಲಿ ಮಾಡಿದೆ. ಉಳಿದ ಮೊತ್ತವನ್ನು ವಸೂಲಿ ಪ್ರಕ್ರಿಯೆ ಆಯಾ ಜಿಲ್ಲಾಧಿಕಾರಿಗಳ ಹಂತದಲ್ಲಿ ಜಾರಿಯಲ್ಲಿದೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಮಾಹಿತಿ ನೀಡಿದ್ದಾರೆ.
ವಿಧಾನಸಭೆಯಲ್ಲಿ ಬಿಜೆಪಿಯ ಎಸ್.ಸುರೇಶ್ ಕುಮಾರ್ ಕೇಳಿದ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ಪ್ರಾಧಿಕಾರದ ವಿಧಿಸುವ ದಂಡ ಮೊತ್ತವನ್ನು ಅಭಿವೃದ್ಧಿದಾರರು ಪಾವತಿಸದಿದ್ದರೆ ಕಂದಾಯ ವಸೂಲಿ ಪ್ರಕರಣಗಳನ್ನು ಸಿದ್ಧಪಡಿಸಿ, ವಸೂಲಾತಿಗೆ ಕ್ರಮವಹಿಸಲಾಗುತ್ತಿದೆ ಎಂದಿದ್ದಾರೆ.
ರೇರಾ ಪ್ರಕರಣಗಳಿಗೆ ಭೂ ಕಂದಾಯ ಬಾಕಿ ವಸೂಲಿ ಚುರುಕುಗೊಳಿಸುವ ನಿಟ್ಟಿನಲ್ಲಿ ಒಂದು ವಿಶೇಷ ಕೋಶ ರಚನೆ ಪರಿಶೀಲಿಸಲಾಗುತ್ತಿದೆ ಎಂದು ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ರೇರಾ ಕಾಯ್ದೆ ಬಲಪಡಿಸಲು ಸೂಚಿಸಿದ್ದಾರೆ. ಅದರಂತೆ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಕಳೆದ ತಿಂಗಳು ಮಾಸಿಕ ಸಭೆ ನಡೆಸಿ, ಸಂಬಂಧಿಸಿದವರಿಗೆ ಅಗತ್ಯ ನಿರ್ದೇಶನಗಳನ್ನು ನೀಡಿದ್ದಾರೆ.
ರೇರಾ ಕಾಯ್ದೆಯಡಿ ಜು.31ರವರೆಗೆ ರೇರಾ ಪ್ರಾಧಿಕಾರದಲ್ಲಿ ಒಟ್ಟು 12021 ದೂರುಗಳು ದಾಖಲಾಗಿವೆ. ಈ ಪೈಕಿ 9025 ದೂರುಗಳಿಗೆ ಪರಿಹಾರ ಒದಗಿಸಲಾಗಿದೆ. ಉಳಿದ 2996 ಪ್ರಕರಣಗಳ ಪೈಕಿ 563 ವಿಚಾರಣೆ ಮುಗಿದು ಆದೇಶದ ನಿರೀಕ್ಷೆಯಲ್ಲಿವೆ. ಬಾಕಿ 2433 ದೂರುಗಳು ವಿಚಾರಣಾ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ವಿವರಿಸಿದ್ದಾರೆ.