ಅಕ್ಷರಕ್ಕೆ ಜೀವ ತುಂಬಿದ ತರಾಸು; ಇಂದು ಸ್ಮರಣೆ

Tharasu
Published on

| ಆರ್​ಪಿಎಂ

ಚಿತ್ರದುರ್ಗದ ಕೋಟೆಗೆ ಪ್ರವಾಸ ಹೋದಾಗ ನಾವೆಲ್ಲರೂ ಓಬವ್ವನ ಕಿಂಡಿ ನೋಡಿದ್ದೇವಲ್ಲ? ಹೈದರಾಲಿ ಸೈನಿಕರು ಕೋಟೆಯನ್ನು ಹಠಾತ್ತಾಗಿ ಆಕ್ರಮಣ ಮಾಡಿದಾಗ, ಊಟ ಮಾಡುತ್ತಿದ್ದ ತನ್ನ ಪತಿಯನ್ನು ವಿಚಲಿತಗೊಳಿಸದೆ ಒನಕೆಯಿಂದಲೇ ಶತ್ರುಗಳನ್ನು ಮಟ್ಟ ಹಾಕಿದವಳು ಓಬವ್ವ. ಆಕೆಯ ಶೌರ್ಯವನ್ನು ಮನಮುಟ್ಟುವಂತೆ ಕನ್ನಡಿಗರಿಗೆ ಪರಿಚಯಿಸಿದವರು ತರಾಸು.

ಆನೆ ನಡೆದದ್ದೇ ದಾರಿ ಎಂಬಂತೆ, ಸತ್ಯ-ನ್ಯಾಯದ ಪರವಾಗಿ ಹೋರಾಡುವ ರಾಮಾಚಾರಿಯ ಪಾತ್ರ ‘ನಾಗರಹಾವು’ ಚಿತ್ರದಲ್ಲಿತ್ತು. ಅದರಲ್ಲಿನ ವಿಷ್ಣುವರ್ಧನ್ ನಟನೆ ಮರೆಯಲಾಗದ್ದು. ಆ ಚಿತ್ರಕ್ಕೆ ತರಾಸು ಅವರ ಕಾದಂಬರಿಯೇ ಆಧಾರ. ಅದೊಂದೇ ಅಲ್ಲ, ದುರ್ಗಾಸ್ತಮಾನ, ರಕ್ತತರ್ಪಣ, ಹಂಸಗೀತೆ ಸೇರಿದಂತೆ 61 ಕಾದಂಬರಿಗಳನ್ನು ತರಾಸು ಬರೆದಿದ್ದಾರೆ. ಆ ಪೈಕಿ 12 ಕಾದಂಬರಿಗಳು ಸಿನಿಮಾ ಆಗಿವೆ. ‘ಹಂಸಗೀತೆ’ ಕಾದಂಬರಿ ಹಿಂದಿಯಲ್ಲಿ ಬಸಂತ್ ಬಹಾರ್ ಎಂಬ ಸಿನಿಮಾ ಆಗಿದೆ. ಇಷ್ಟೆಲ್ಲ ಕನ್ನಡದ ಕೆಲಸ ಮಾಡಿದ ತರಾಸು ಅವರ ಮಾತೃಭಾಷೆ ಮಾತ್ರ ತೆಲುಗು! ಭದ್ರಾವತಿಯ ಮಲೆಬೆನ್ನೂರು ಗ್ರಾಮದಲ್ಲಿ 1920ರ ಏಪ್ರಿಲ್ 21ರಂದು ಕನ್ನಡದ ಮೊದಲ ಪ್ರಾಧ್ಯಾಪಕ ತಳುಕಿನ ವೆಂಕಣ್ಣಯ್ಯರ ತಮ್ಮ ರಾಮಸ್ವಾಮಯ್ಯ ಅವರ ಪುತ್ರರಾಗಿ ತರಾಸು ಜನಿಸಿದರು. ಆಂಧ್ರ ಮೂಲದ ಇವರ ತಾತ ಸುಬ್ಬಣ್ಣ ಬಹಳ ಹಿಂದೆಯೇ ಕರ್ನಾಟಕದಲ್ಲಿ ನೆಲೆಸಿ, ಕನ್ನಡಿಗರೇ ಆಗಿದ್ದರು. ಅಧ್ಯಾಪಕರು, ವಿದ್ವಾಂಸರೂ ಆದ ತ.ಸು. ಶಾಮರಾಯರು ಚಿಕ್ಕಪ್ಪ. ಇಂತಹ ಸಾಹಿತ್ಯಕ ಕುಟುಂಬದಲ್ಲಿ ಜನಿಸಿದ ತರಾಸು ಅವರಿಗೆ ಪುಸ್ತಕ ಓದುವ ಹವ್ಯಾಸ ಸಹಜವಾಗಿಯೇ ಬಂದಿತ್ತು. ಮನೆಯಲ್ಲಿ ದೊಡ್ಡವರು ಪುಸ್ತಕ ಓದುತ್ತಿದ್ದರೆ ಮಕ್ಕಳಿಗೂ ಆ ಅಭ್ಯಾಸ ಬೆಳೆಯುತ್ತದೆ.

ದೊಡ್ಡಪ್ಪನ ಸವಾಲು: ಸಾಕಷ್ಟು ಓದುತ್ತಿದ್ದರೂ ಅದೇಕೋ ಬರಹದತ್ತ ತರಾಸುಗೆ ಒಲವೇ ಇರಲಿಲ್ಲ. ಬರೀ ಮಾತು.. ಮಾತು! ಸ್ವಭಾವತಃ ವಾಚಾಳಿ. 17 ವರ್ಷದವರಿದ್ದ ತರಾಸುವನ್ನು ಒಮ್ಮೆ ಕರೆದ ದೊಡ್ಡಪ್ಪ ವೆಂಕಣ್ಣಯ್ಯ, ‘‘ಇಷ್ಟೆಲ್ಲ ಮಾತಾಡ್ತೀಯಲ್ಲ? ಅದನ್ನು ಬರೆಯುವ ಸಾಮರ್ಥ್ಯ ನಿನಗಿದೆಯಾ? ಒಂದು ಕಥೆ ಬರೆದು ತೋರಿಸು ನೋಡೋಣ’’ ಎಂದು ಸವಾಲು ಹಾಕಿದರು. ತರಾಸುಗೆ ಅದೆಲ್ಲಿತ್ತೋ ಆವೇಶ, ಒಂದು ಕಡೆ ಕುಳಿತು ಸಂಜೆಯೊಳಗೆ ಒಂದು ಕಥೆ ಬರೆದು ಕೊಟ್ಟರಂತೆ! ಅದರ ಹೆಸರು ‘ಪುಟ್ಟನ ಚೆಂಡು’. ನಂತರ ತರಾಸು ಕೈಗಳು ನಿಲ್ಲಲೇ ಇಲ್ಲ. ಬದುಕಿನುದ್ದಕ್ಕೂ ಬರೆದರು. ಬರವಣಿಗೆಯನ್ನೇ ಬದುಕಾಗಿಸಿಕೊಂಡರು.

ಚಿತ್ರಪಯಣ: ಗ್ರಾಮೀಣ ಜನಜೀವನವನ್ನು ಅತ್ಯುತ್ತಮವಾಗಿ ಚಿತ್ರಿಸಿದ ‘ಚಂದವಳ್ಳಿಯ ತೋಟ’ 1964ರಲ್ಲಿ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ ಪಡೆಯಿತು. ನಾಗರಹಾವು, ಹಂಸಗೀತೆ, ಬೆಂಕಿಯ ಬಲೆ, ಗಾಳಿ ಮಾತು, ಬಿಡುಗಡೆಯ ಬೇಡಿ, ಮಸಣದ ಹೂ ಕಾದಂಬರಿಗಳೂ ಚಲನಚಿತ್ರಗಳಾಗಿ ತೆರೆ ಕಂಡವು.

ಸ್ವಾತಂತ್ರ್ಯ ಹೋರಾಟ ಅನೇಕ ಸಾಮಾಜಿಕ, ಐತಿಹಾಸಿಕ, ಪೌರಾಣಿಕ ಕಾದಂಬರಿ ರಚಿಸುವುದರ ಜತೆಗೆ ಸ್ವಾತಂತ್ರ್ಯ ಹೋರಾಟದಲ್ಲೂ ಭಾಗವಹಿಸಿದರು. ಹಳ್ಳಿಗಳಲ್ಲಿ ಸಂಚರಿಸಿ ಸ್ವಾತಂತ್ರ್ಯಗೀತೆ ಹಾಡಿ ಜನರನ್ನು ಪ್ರೇರೇಪಿಸಿದರು. ಬಾಗೂರು ಎಂಬಲ್ಲಿ ಭಾಷಣ ಮಾಡುತ್ತಿದ್ದಾಗ ಬ್ರಿಟಿಷರಿಂದ ಬಂಧನಕ್ಕೆ ಒಳಗಾಗಿದ್ದರು. ಸದಾ ತಿರುಗಾಟದಲ್ಲೇ ಇದ್ದ ತರಾಸು 1984ರ ಏ.10ರಂದು ಚಿರನಿದ್ರೆಗೆ ಜಾರಿದರು. ಅಲ್ಲಿಗೆ ಕನ್ನಡ ಸಾಹಿತ್ಯಲೋಕದಲ್ಲಿ ತರಾಸು ಎಂಬ ಯುಗದ ಅಸ್ತಮಾನವಾಯಿತು.

ದುರ್ಗಾಸ್ತಮಾನ ಓದಿ

ತರಾಸು ಅವರ ‘ದುರ್ಗಾಸ್ತ ಮಾನ’ದಲ್ಲಿನ ಕೆಲವು ಸಾಲುಗಳು ಹೀಗಿವೆ ಓದಿ. ಮದಕರಿ ನಾಯಕ ವೀರೋಚಿತವಾಗಿ ಹೋರಾಡಿ ಪ್ರಾಣಬಿಟ್ಟಿದ್ದರ ವಿವರ ಅದರಲ್ಲಿದೆ. ‘‘ಮುನ್ನುಗ್ಗುತ್ತಲೇ ಇದ್ದ ಮದಕರಿ ನಾಯಕ; ಆತನ ಎಡತೋಳು ಕತ್ತರಿಸಿ ರಕ್ತಕಾರುತ್ತಾ ನೆಲಕ್ಕುರುಳಿತು. ಕತ್ತಿಯ ಹೊಡೆತಗಳಿಂದ ಮೈ ಕ್ಷತವಿಕ್ಷತವಾಯಿತು. ಗಾಯಗೊಂಡ ಕಾಲುಗಳು ಕುಸಿಯುತ್ತಿದ್ದವು. ಆದರೆ ಪರಿಘಾಯುಧ ಬೀಸುವ ಆತನ ಕೈ ಸೋಲಲಿಲ್ಲ; ಸುಂಟರಗಾಳಿಗೆ ಸಿಕ್ಕಿದಂತೆ ಸುತ್ತುತ್ತಲೇ ಇತ್ತು. ಸುತ್ತ ಸಾವು ಸಾವಿರ ಕತ್ತಿಬಾಯಿ ಬಿರಿದು ಹಲ್ಮೊರೆಯುತ್ತಿರಲು, ಮದಕರಿನಾಯಕನಿಗೆ ಕಾಣುತ್ತಿದ್ದುದೊಂದೇ ಸಿದ್ದಯ್ಯನ ಬಾಗಿಲ ಮೇಲೆ ಹಾರುತ್ತಿದ್ದ ಹೈದರಾಲಿಯ ಧ್ವಜ’’. ಹೀಗೆ ಮದಕರಿನಾಯಕನ ಅಂತಿಮ ಕ್ಷಣಗಳನ್ನು ತರಾಸು ವಿವರಿಸುವಾಗ ಓದುವವರ ಕಣ್ಣು ತುಂಬಿ ಬರುತ್ತವೆ. ಹೆಮ್ಮೆಯಿಂದ, ದೇಶಭಕ್ತಿಯ ಭಾವನೆಯಿಂದ ಹೃದಯ ತುಂಬಿಬರುತ್ತದೆ. ಈ ಕಾದಂಬರಿಗೆ 1985 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net