

ಮನುಷ್ಯ ಹಾಗೂ ಪ್ರಾಣಿಗಳು ಬದುಕಲು ಆಮ್ಲಜನಕ ಅಂದರೆ O2 ಅತ್ಯಗತ್ಯ. ಅದೇ ರೀತಿ 03 ಕೂಡ ಅಷ್ಟೇ ಮುಖ್ಯ. ಆದರೆ, ಇವೆರಡರ ನಡುವೆ ಪ್ರಮುಖ ವ್ಯತ್ಯಾಸವಿದೆ. ಆಮ್ಲಜನಕವನ್ನು ನಾವು ಉಸಿರಾಡುತ್ತೇವೆ. ಆದರೆ, 03 ಉಸಿರಾಡಿದರೆ ನಷ್ಟ ಖಚಿತ. o3ಯ ಪದರವೊಂದು ದೂರದಲ್ಲಿದ್ದುಕೊಂಡೇ ನಮ್ಮನ್ನು ರಕ್ಷಿಸುವ ಕಾರ್ಯವನ್ನು ನಿತ್ಯವೂ ಮಾಡುತ್ತಿದೆ. ಇದೇ ಓಝೋನ್ ಪದರ.
ಸೂರ್ಯನ ಕಿರಣಗಳು ಬೆಳಕು, ಶಾಖದ ಜತೆಗೆ ವಿಕಿರಣವನ್ನೂ ಒಳಗೊಂಡಿರುತ್ತವೆ. ಅತಿನೇರಳೆ ಕಿರಣವು ಚರ್ಮದ ಕ್ಯಾನ್ಸರ್, ಕಣ್ಣಿನ ಪೊರೆಗೆ ಹಾನಿಯನ್ನುಂಟು ಮಾಡುವ ಸಾಮರ್ಥ್ಯ ಹೊಂದಿದೆ. ಮಳೆಗಾಲದಲ್ಲಿ ಕೊಡೆ ನಮ್ಮನ್ನು ಮಳೆಯಿಂದ ರಕ್ಷಿಸುವ ಹಾಗೆ, ಓಝೆೊನ್ ಪದರವು ಅಗೋಚರ ಗುರಾಣಿಯಾಗಿ ಕಾರ್ಯನಿರ್ವಹಿಸಿ, ಸೂರ್ಯನಿಂದ ಬರುವ ಅತಿನೇರಳೆ (ಅಲ್ಟ್ರಾ ವಯ್ಲೆಟ್) ಕಿರಣದಿಂದ ನಮ್ಮನ್ನು ರಕ್ಷಿಸುತ್ತದೆ. ಸೂರ್ಯನಿಂದ ಬಂದ ಶೇ. 97-98 ರಷ್ಟು ಅತಿನೇರಳೆ ಕಿರಣಗಳನ್ನು ಹೀರಿಕೊಂಡು ಬೆಳಕಿನ ಕಿರಣಗಳನ್ನು ಮಾತ್ರ ಭೂಮಿ ಮೇಲೆ ಬೀಳುವಂತೆ ಮಾಡುತ್ತದೆ. ಈ ಕಿರಣವು ಚರ್ಮವಿರುವ ಜೀವಿಗಳ ರಕ್ಷಣಾತ್ಮಕ ಪದರಗಳನ್ನು ಭೇದಿಸಬಲ್ಲದು. ಸಸ್ಯಗಳು ಮತ್ತು ಪ್ರಾಣಿಗಳಲ್ಲಿನ ಡಿಎನ್ಎ ಅಣುಗಳನ್ನು ಕೂಡ ಈ ವಿಕಿರಣವು ಹಾನಿಗೊಳಿಸುತ್ತದೆ. ಇಂತಹ ಎಲ್ಲ ನಷ್ಟದಿಂದ ನಮಗೆ ಓಝೋನ್ ಪದರ ರಕ್ಷಣೆ ನೀಡುತ್ತದೆ.
ವಾಯುಮಂಡಲಕ್ಕೆ ಅಪಾಯ: ಓಝೆೊನ್ ಪದರವು ಹೆಚ್ಚಿನ ಓಝೆೊನ್ ಸಾಂದ್ರತೆಯನ್ನು ಹೊಂದಿರುವ ವಾತಾವರಣದ ಒಂದು ಭಾಗವಾಗಿದೆ. ಈ ಪದರವು ಭೂಮಿಯ ಮೇಲ್ಮೈಯಿಂದ ಸುಮಾರು 9 ರಿಂದ 18 ಮೈಲಿಗಳು (15 ರಿಂದ 30 ಕಿಮೀ) ಎತ್ತರದಲ್ಲಿರುವ ವಾಯುಮಂಡಲದ ಪದರದಲ್ಲಿ ಕೇಂದ್ರೀಕೃತವಾಗಿದೆ. ಓಝೆೊನ್ ಮೂರು ಆಮ್ಲಜನಕ ಪರಮಾಣುಗಳನ್ನು ಹೊಂದಿರುವ ಅಣುವಾಗಿದೆ.
ನಾವೀಗ ಹೆಚ್ಚಿನ ಪ್ರಮಾಣದ ಕಾರ್ಬನ್ ಡೈಆಕ್ಸೈಡ್ ಅನ್ನು ವಾತಾವರಣಕ್ಕೆ ಬಿಟ್ಟು ವಾಯುಮಂಡಲವನ್ನು ಮಲಿನಗೊಳಿಸುತ್ತಿದ್ದೇವೆ. ಸಕಲ ಜೀವರಾಶಿಗಳ ರಕ್ಷಾಕವಚ ಓಝೆೊನ್ ವಲಯ ಆಗಿದ್ದು, ಅದನ್ನು ಕಾಪಾಡಿಕೊಳ್ಳುವುದು ಮನುಷ್ಯನ ಆದ್ಯ ಕರ್ತವ್ಯವಾಗಿರುತ್ತದೆ. ಅದಿಲ್ಲದಿದ್ದರೆ ಭೂಮಿಯ ಜೀವಜಂತುಗಳು ಸೂರ್ಯನ ಅತಿನೇರಳೆ ಕಿರಣಗಳ ನೇರ ಸ್ಪರ್ಶಕ್ಕೆ ಸಿಕ್ಕಿ ಕ್ಯಾನ್ಸರ್ನಂತಹ ಮಾರಕ ರೋಗಗಳಿಗೆ ಸಿಲುಕುವುದು ಖಚಿತ.
ನೆಲದಲ್ಲಿ ಮಾಲಿನ್ಯಕಾರಕ: ಭೂಮಂಡಲದಲ್ಲಿದ್ದುಕೊಂಡು ನಮ್ಮನ್ನು ಕಾಪಾಡುವ ಓಝೋನ್, ನೆಲದ ಮಟ್ಟದಲ್ಲಿ ಮಾತ್ರ ವಾಯು ಮಾಲಿನ್ಯಕಾರಕವಾಗಿದ್ದು ಅದು ಜನರು ಮತ್ತು ಸಸ್ಯಗಳಿಗೆ ಹಾನಿ ಮಾಡುತ್ತದೆ. ನೈಟ್ರೋಜನ್ ಆಕ್ಸೈಡ್ಗಳು ಮತ್ತು ಬಾಷ್ಪಶೀಲ ಸಾವಯವ ಸಂಯುಕ್ತಗಳು ಸೂರ್ಯನ ಬೆಳಕು ಮತ್ತು ಬಿಸಿ ತಾಪಮಾನದಲ್ಲಿ ಪರಸ್ಪರ ಪ್ರತಿಕ್ರಿಯಿಸಿದಾಗ ನೆಲದ ಮಟ್ಟದಲ್ಲಿ ಓಝೆೊನ್ ರೂಪುಗೊಳ್ಳುತ್ತದೆ. ಈ ಮಾಲಿನ್ಯವು ವಾಹನಗಳು, ಕೈಗಾರಿಕೆಗಳು ಮತ್ತು ಇತರ ಮೂಲಗಳಿಂದ ಉಂಟಾಗುತ್ತದೆ.
ಅಲ್ಪ ಚೇತರಿಕೆ: ಓಝೆೊನ್ ಪದರವು 2050ರ ಸುಮಾರಿಗೆ 1980ರ ಹಿಂದಿನ ಮಟ್ಟಕ್ಕೆ ಮರಳುತ್ತದೆ ಎಂದು ನಿರೀಕ್ಷಿಸಲಾಗಿದೆ. ಆದರೆ, 2075ನೇ ಇಸ್ವಿಯಲ್ಲಿಯೂ ಸಂಪೂರ್ಣವಾಗಿ ಚೇತರಿಸಿ ಕೊಳ್ಳಲು ಸಾಧ್ಯವಿಲ್ಲ ಎಂದು ಅಂದಾಜಿಸಲಾಗಿದೆ.
ಓಝೆೊನ್ ರಂಧ್ರ: ಸುಮಾರು 20 ವರ್ಷಗಳ ಹಿಂದೆ ವಿಜ್ಞಾನಿಗಳು ಅಂಟಾರ್ಕ್ಟಿಕಾದ ಮೇಲಿನ ಓಝೆೊನ್ ಪದರವು ಚಳಿಗಾಲ ಮತ್ತು ವಸಂತಕಾಲದಲ್ಲಿ ತೆಳ್ಳಗಾಗುತ್ತದೆ ಎಂಬುದನ್ನು ಪತ್ತೆ ಮಾಡಿದ್ದಾರೆ. ಪದರವು ತೆಳುವಾಗುವುದನ್ನು ‘ಓಝೆೊನ್ ರಂಧ್ರ’ ಎಂದೇ ಗುರುತಿಸಲಾಗುತ್ತದೆ.
ಸಂಶೋಧಕರಾರು?: ಓಝೆೊನ್ ನೈಸರ್ಗಿಕವಾಗಿ ಕಂಡುಬರುವ ವಸ್ತುವಾಗಿದ್ದು, ಇದನ್ನು ಪ್ರಯೋಗಾಲಯದಲ್ಲಿ 1839ರಲ್ಲಿ ಜರ್ಮನ್ ವಿಜ್ಞಾನಿ ಕ್ರಿಶ್ಚಿಯನ್ ಫ್ರೆಡ್ರಿಕ್ ಸ್ಕೋನ್ಬಿನ್ ಮೊದಲು ತಯಾರಿಸಿದರು.
ಪದರಕ್ಕೆ ಹಾನಿ ಹೇಗೆ?: ಫ್ರಿಜ್ ಮತ್ತು ಕೋಲ್ಡ್ ಹೌಸ್ಗಳಲ್ಲಿ ಉಪಯೋಗಿಸುವ ಕ್ಲೋರೋ ಫ್ರೋರೋ ಕಾರ್ಬನ್ಗಳ (ಸಿಎಫ್ಸಿ) ಒಂದು ಅಣುವು ಓಝೆೊನ್ನ 1,00,000 ಅಣುಗಳನ್ನು ನಾಶ ಮಾಡುತ್ತದೆ. ಇದು ಸರಪಳಿ ರಾಸಾಯನಿಕ ಕ್ರಿಯೆಯಾಗಿದೆ. ಉಪಗ್ರಹಗಳ ಉಡಾವಣೆಗೆ ಹಾರಿ ಬಿಡುವ ರಾಕೆಟ್ಗಳಿಂದಲೂ ಓಝೆೊನ್ ಪದರ ಹಾನಿಗೊಳ್ಳುತ್ತದೆ.
ಸಂರಕ್ಷಣೆ ಹೇಗೆ?: ರೆಫ್ರಿಜರೇಟರ್ನಲ್ಲಿ ಹಾಗೂ ಕೋಲ್ಡ್ ಹೌಸ್ಗಳಲ್ಲಿ ಸಿಎಫ್ಸಿ ಬದಲು ಹೈಡ್ರೋ ಕ್ಲೋರೋ ಫ್ರೋರೋ ಕಾರ್ಬನ್ ರಾಸಾಯನಿಕ ಉಪಯೋಗಿಸಬೇಕು. ಕೃಷಿಯಲ್ಲಿ ಬಳಸುವ ಕೀಟನಾಶಕ ಮಿಥೈಲ್ ಬ್ರೋಮೈಡ್ಗೆ ನಿಷೇಧ ಹೇರಬೇಕು. ವಾಹನ ಬಳಕೆ ಆದಷ್ಟು ನಿಯಂತ್ರಿಸಬೇಕು. ಅರಣ್ಯನಾಶ ತಡೆಗಟ್ಟಿ ಹಸಿರನ್ನು ಬೆಳೆಸಬೇಕು. ರಾಸಾಯನಿಕ ಬಳಕೆ, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು.