ಜಿಡಿಪಿ ಶೇ.11ಕ್ಕೆ ಜಿಗಿಯುವ ನಿರೀಕ್ಷೆ; ಸಂಸತ್ತಿನ ಬಜೆಟ್ ಅಧಿವೇಶನ ಆರಂಭ

Edit lead
Published on

ಹೊಸ ಕೃಷಿ ಕಾನೂನುಗಳಿಗೆ ಮುಂದುವರಿದ ವಿಪಕ್ಷ ಪ್ರತಿರೋಧ, ರಾಜಧಾನಿಯ ಗಡಿಯಲ್ಲಿ ರೈತ ಪ್ರತಿಭಟನೆಯ ಗದ್ದಲಗಳ ನಡುವೆ ಕುತೂಹಲ ಕೆರಳಿಸಿರುವ ಕೇಂದ್ರ ಬಜೆಟ್ ಅಧಿವೇಶನ ಶುಕ್ರವಾರ ಶುರುವಾಗಿದೆ. ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ ಮಾತನಾಡುವುದಕ್ಕೂ ಮೊದಲೇ ಈ ಹಿಂದೆಯೇ ಘೋಷಿಸಿದ ಪ್ರಕಾರ, ವಿಪ್ಷಕಗಳ ಸದಸ್ಯರು ಸಭಾತ್ಯಾಗ ಮಾಡಿದರು. ಈ ವಿದ್ಯಮಾನದ ನಡುವೆ, 2020-21ನೇ ಸಾಲಿನ ಆರ್ಥಿಕ ಸಮೀಕ್ಷೆಯ ವರದಿಯನ್ನು ಸರ್ಕಾರ ಸಂಸತ್ತಿನಲ್ಲಿ ಮಂಡಿಸಿದೆ.

ಆಕಾರದ ಚೇತರಿಕೆ

ನವದೆಹಲಿ: ಕರೊನಾ ಸಂಕಷ್ಟದ ಕಾರಣ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮೈನಸ್ ಶೇಕಡ 7.7ರ ಜಿಡಿಪಿ ದಾಖಲಾದರೂ, 2022ನೇ ಸಾಲಿನ ಆರ್ಥಿಕ ವರ್ಷ ಶೇಕಡ 11 ತಲುಪಲಿದೆ. ಆಕಾರದ ಆರ್ಥಿಕ ಚೇತರಿಕೆಯನ್ನು ದೇಶ ನಿರೀಕ್ಷಿಸುತ್ತಿದೆ ಎಂದು ಶುಕ್ರವಾರ ಪ್ರಕಟವಾಗಿರುವ ಬಜೆಟ್ ಪೂರ್ವದ ಆರ್ಥಿಕ ಸಮೀಕ್ಷಾ ವರದಿ ತಿಳಿಸಿದೆ. ಪ್ರಸಕ್ತ ಆರ್ಥಿಕ ಸಾಲಿನಂತೆಯೇ 1979-80ನೇ ಸಾಲಿನಲ್ಲಿ ಇದೇ ರೀತಿ ಶೇಕಡ 5.2ಕ್ಕೆ ಸಂಕೋಚನಗೊಂಡ ಜಿಡಿಪಿ ದಾಖಲಾಗಿತ್ತು. ಕೋವಿಡ್ 19 ಲಾಕ್​ಡೌನ್ ಬಳಿಕ ದೇಶದ ಕೃಷಿ ಕ್ಷೇತ್ರ ಒಂದೇ ಆಶಾದಾಯಕ ಕ್ಷೇತ್ರವಾಗಿ ಕಾಣಿಸತೊಡಗಿದೆ. ಭಾರತದ ನಿಜವಾದ ಜಿಡಿಪಿ 2021-22ನೇ ಸಾಲಿಗೆ ಶೇಕಡ 11 ಮತ್ತು ನಾಮಿನಲ್ ಜಿಡಿಪಿ ಶೇಕಡ 15.4 ಎಂಬ ಮುನ್ನೋಟ ನೀಡಲಾಗಿದೆ. ಈ ವರ್ಷದ ಆರ್ಥಿಕ ಸಮೀಕ್ಷೆ ಪೇಪರ್​ಲೆಸ್ ಎಂಬುದು ಗಮನಾರ್ಹ.

ಆರ್ಥಿಕ ಸಮೀಕ್ಷೆ ಮುಖ್ಯಾಂಶಗಳು

  • ಪ್ರಸಕ್ತ ವರ್ಷದ ಆರ್ಥಿಕತೆ ಮೈನಸ್ ಶೇಕಡ 7.7
  • ಕೃಷಿ ಕ್ಷೇತ್ರ ಆಶಾದಾಯಕ ಬೆಳವಣಿಗೆ ದಾಖಲಿಸಿದ್ದು, 2022ರಲ್ಲಿ 11% ಜಿಡಿಪಿ
  • ಕೋವಿಡ್ ಲಸಿಕೆ ಅಭಿಯಾನ ಬೆಂಬಲಿತ ್ಖ ಆಕಾರದ ಆರ್ಥಿಕ ಚೇತರಿಕೆಯ ನಿರೀಕ್ಷೆ
  • ಆರ್ಥಿಕ ಬೆಳವಣಿಗೆಗೆ ಸರ್ಕಾರಿ ಬಳಕೆ ಮತ್ತು ನಿವ್ವಳ ರಫ್ತು ಪ್ರಮಾಣದ ಉತ್ತೇಜನ
  • 2021ರ ದ್ವಿತೀಯಾರ್ಧದಲ್ಲಿ ರಫ್ತು ಶೇಕಡ 5.8 ಇಳಿಕೆ, ಆಮದು ಶೇಕಡ 11.3 ಇಳಿಕೆ
  • ಚಾಲ್ತಿ ಖಾತೆ ಸರ್​ಪ್ಲಸ್ ಪ್ರಮಾಣ ಜಿಡಿಪಿಯ ಶೇಕಡ 2ರಷ್ಟು ದಾಖಲು, 17 ವರ್ಷಗಳಲ್ಲೇ ಗರಿಷ್ಠ
  • ಭಾರತದ ಸಾವರಿನ್ ಕ್ರೆಡಿಟ್ ರೇಟಿಂಗ್ ಮೇಲೆ ಯಾವುದೇ ಪರಿಣಾಮವಿಲ್ಲ.

ಆರೋಗ್ಯ ಕ್ಷೇತ್ರ

  • ಭಾರತದ ಲಾಕ್​ಡೌನ್ ತಂತ್ರಗಾರಿಕೆ ಪರಿಣಾಮ 1 ಲಕ್ಷ ಸಾವು, 37 ಲಕ್ಷ ಕೋವಿಡ್ ಕೇಸ್​ಗೆ ತಡೆ
  • ಜಿಡಿಪಿಯ ಶೇಕಡ 1ರಿಂದ ಶೇಕಡ 2.5-3ರ ತನಕ ಸಾರ್ವಜನಿಕ ಆರೋಗ್ಯ ಸೇವಾ ವೆಚ್ಚ ಹೆಚ್ಚಳಕ್ಕೆ ಶಿಫಾರಸು
  • ಸೋಂಕುಗಳ ಸವಾಲು ಎದುರಿಸಲು ಭಾರತದ ಆರೋಗ್ಯ ಮೂಲಸೌಕರ್ಯ ಬಲವರ್ಧನೆ ಅವಶ್ಯ- ಆರೋಗ್ಯ ಸೇವಾ ನೀತಿಯಲ್ಲಿ ಸುಧಾರಣೆಯಾಗಬೇಕು.
  • ಇಂಟರ್​ನೆಟ್ ಸಂಪರ್ಕ, ಆರೋಗ್ಯ ಮೂಲಸೌಕರ್ಯದ ಮೇಲೆ ಹೂಡಿಕೆ ಮಾಡುವ ಮೂಲಕ ಟೆಲಿಮೆಡಿಸಿನ್ ಸೇವೆಯನ್ನು ಬಲಪಡಿಸಬೇಕು.

ಕಲಾಪ ಬಹಿಷ್ಕರಿಸಿದ ವಿಪಕ್ಷ: ರಾಷ್ಟ್ರಪತಿ ಭಾಷಣ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಜೈ ಜವಾನ್ ಜೈ ಕಿಸಾನ್ ಘೋಷಣೆ ಕೂಗಿ ಕೃಷಿ ಕಾನೂನು ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಸೆಂಟ್ರಲ್ ಹಾಲ್ ಗ್ಯಾಲರಿಯಲ್ಲಿದ್ದ ಇನ್ನೂ ಕೆಲವು ಸದಸ್ಯರು ಘೋಷಣೆ ಕೂಗಿ ಸಭಾ ತ್ಯಾಗ ಮಾಡಿದರು. ವಿಪಕ್ಷ ಸದಸ್ಯರೆಲ್ಲರೂ ಕಲಾಪ ಬಹಿಷ್ಕರಿಸಿ ಹೊರನಡೆದರು. ಬಜೆಟ್ ಬಗ್ಗೆ ಪ್ರಧಾನಿ ಸುಳಿವು: ಕರೊನಾ ಸಂಕಷ್ಟದಿಂದ ಉಂಟಾದ ಹಿನ್ನಡೆಗೆ ಉತ್ತೇಜನ ನೀಡಲು ಕಳೆದ ವರ್ಷ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನಾಲ್ಕು-ಐದು ಮಿನಿ ಬಜೆಟ್ ರೂಪದಲ್ಲಿ ಪ್ಯಾಕೇಜ್​ಗಳನ್ನು ಘೋಷಿಸಿದ್ದರು. ಅದರ ಮುಂದುವರಿದ ಭಾಗ ಈ ಸಲದ ಮುಂಗಡಪತ್ರ ಎಂದು ಪ್ರಧಾನಿ ಮೋದಿ ಬಜೆಟ್ ಹೇಗಿರಲಿದೆ ಎಂಬುದರ ಸುಳಿವು ನೀಡಿದ್ದಾರೆ.

ಪ್ರಕ್ರಿಯೆ ಸುಧಾರಣೆ

  • ಅರ್ಥ ವ್ಯವಸ್ಥೆ ಮೇಲೆ ಭಾರತದ ನಿಯಂತ್ರಣ ಅತಿಯಾಗಿರುವ ಪರಿಣಾಮ ಉತ್ತಮ ಪ್ರಕ್ರಿಯೆಯ ನಿಬಂಧನೆಗಳಿದ್ದರೂ ಅವು ಪ್ರಯೋಜನಕಾರಿಯಾಗುವುದಿಲ್ಲ. ಇದಕ್ಕೆ ಪರಿಹಾರವಾಗಿ, ನಿರ್ಬಂಧಗಳನ್ನು ಇನ್ನಷ್ಟು ಸರಳಗೊಳಿಸಬೇಕು ಮತ್ತು ವಿವೇಚನೆಯೊಂದಿಗೆ ಕೂಡಿದ ಹೆಚ್ಚಿನ ನಿಗಾವನ್ನು ಇರಿಸಬೇಕು.
  • ಭಾರತದ ವ್ಯಾಪಾರೋದ್ಯಮ ವಲಯವು ಆರ್​ಆಂಡ್​ಡಿಯ ಮೇಲಿನ ಹೂಡಿಕೆಯನ್ನು ಗಣನೀಯವಾಗಿ ಹೆಚ್ಚಿಸಬೇಕಾದ ಅವಶ್ಯಕತೆ ಇದೆ.
  • ಆರ್ಥಿಕ ಉತ್ತೇಜನ ಕ್ರಮಗಳನ್ನು ಹಿಂಪಡೆದ ಅಥವಾ ಮುಕ್ತಾಯಗೊಳಿಸಿದ ಕೂಡಲೇ ಉತ್ತಮ ಗುಣಮಟ್ಟದ ಪರಾಮರ್ಶೆ ನಡೆಸಬೇಕು.
  • ಆರ್ಥಿಕ ಪ್ಯಾಕೇಜುಗಳು ತುರ್ತು ಔಷಧಗಳಿದ್ದಂತೆ. ಅರ್ಥ ವ್ಯವಸ್ಥೆ ಚೇತರಿಸಿಕೊಳ್ಳುವ ಗುಣಲಕ್ಷಣಗಳನ್ನು ತೋರಿಸಿದಾಗ ಹಿಂಪಡೆಯಬೇಕು. ವರ್ಷ ಗಟ್ಟಲೆ ಅದನ್ನು ಮುಂದುವರಿಸಬಾರದು.
  • ಸಹಜವಾಗಿಯೇ ಸಾಲ ವಸೂಲಾತಿಯ ವ್ಯವಸ್ಥೆಯನ್ನು ಬಲಪಡಿಸಲು ಕಾನೂನು ಮೂಲಸೌಕರ್ಯವನ್ನು ಇನ್ನಷ್ಟು ದೃಢಗೊಳಿಸಬೇಕು.

ಆರ್ಥಿಕ ಬೆಳವಣಿಗೆಗಳು

  • ಕೋವಿಡ್ ಸಂಕಷ್ಟದ ಸಮಯದಲ್ಲಿ ಅರ್ಥ ವ್ಯವಸ್ಥೆಯ ಚೇತರಿಕೆಗೆ ಹಲವು ದೇಶಗಳು ಬೃಹತ್ ನೇರ ಆರ್ಥಿಕ ಪ್ಯಾಕೇಜ್​ಗಳನ್ನು ಘೋಷಿಸಿದ್ದವು. ಭಾರತವು ಅದಕ್ಕೆ ಭಿನ್ನವಾಗಿ ತನ್ನ ಅರ್ಥವ್ಯವಸ್ಥೆಯ ಚೇತರಿಕೆ ಬೇಕಾದ ರೀತಿಯ ಪ್ಯಾಕೇಜ್​ಗಳನ್ನು ಸಿದ್ಧಪಡಿಸಿ ಪ್ಯಾಕೇಜ್​ಗಳನ್ನು ಘೋಷಿಸಿ ಅನುಷ್ಠಾನಗೊಳಿಸುತ್ತ ಬಂದಿದೆ.
  • ಜಾಗತಿಕ ಅರ್ಥ ವ್ಯವಸ್ಥೆ ತಲ್ಲಣಗೊಂಡಿರುವ ಸನ್ನಿವೇಶದಲ್ಲೂ ಭಾರತ ವಿದೇಶಿ ನೇರ ಹೂಡಿಕೆಗೆ ಆದ್ಯತೆಯ ದೇಶವಾಗಿ ಉಳಿದಿದೆ ಮತ್ತು ಉದಯೋನ್ಮುಖ ಆರ್ಥಿಕತೆಗಳ ಪೈಕಿ ತ್ವರಿತವಾಗಿ ಪುನಶ್ಚೇತನ ಪಡೆಯುವ ದೃಷ್ಟಿಯಿಂದಲೂ ಮುಂಚೂಣಿಯಲ್ಲಿದೆ.
  • ನಿವ್ವಳ ವಿದೇಶಿ ಪೋರ್ಟ್​ಫೋಲಿಯೋ ಹೂಡಿಕೆಯು 2020ರ ನವೆಂಬರ್​ನಲ್ಲಿ ಸಾರ್ವಕಾಲಿಕ ಗರಿಷ್ಠ 9.8 ಶತಕೋಟಿ ಡಾಲರ್ ತಲುಪಿತ್ತು. 2020ರಲ್ಲಿ ಉದಯೋನ್ಮುಖ ಮಾರುಕಟ್ಟೆಗಳ ಪೈಕಿ ವಿದೇಶಿ ಸಾಂಸ್ಥಿಕ ಹೂಡಿಕೆಯನ್ನು ಪಡೆದ ಏಕೈಕ ರಾಷ್ಟ್ರ ಭಾರತವಾಗಿತ್ತು.
  • ಕೇವಲ 6 ದಿನಗಳಲ್ಲಿ 10 ಲಕ್ಷ ಲಸಿಕೆಗಳನ್ನು ತ್ವರಿತವಾಗಿ ಪೂರೈಸಿದ ದೇಶ ಭಾರತವಾಗಿದ್ದು, ಜಾಗತಿಕವಾಗಿ ಬ್ರೆಜಿಲ್ ಮತ್ತು ಇತರೆ ನೆರೆಹೊರೆಯ ರಾಷ್ಟ್ರಗಳಿಗೆ ಲಸಿಕೆ ಪೂರೈಸುವ ಮುಂಚೂಣಿ ರಾಷ್ಟ್ರವಾಗಿ ಕಂಡುಬಂದಿದೆ.
  • ಭಾರತದ ಪ್ರಬುದ್ಧ ನೀತಿ ರಚನೆಯು ಇತರೆ ದೇಶಗಳಿಗೆ ಸಮೀಪ ದೃಷ್ಟಿಯ ನೀತಿ ರಚನೆ ಮಾಡದಂತೆ ಮಹತ್ವದ ಪಾಠಗಳನ್ನು ಒದಗಿಸುತ್ತಿದೆ.

ಚೀನಾಕ್ಕೆ ವಾರ್ನಿಂಗ್: ಭೌಗೋಳಿಕ ಸಾರ್ವಭೌಮತೆ ಕಾಪಾಡುವ ವಿಷಯದಲ್ಲಿ ಭಾರತ ರಾಜಿಮಾಡಿ ಕೊಳ್ಳುವುದಿಲ್ಲ. ಸರ್ಕಾರ ಈ ವಿಚಾರವಾಗಿ ಜಾಗೃತವಾಗಿದ್ದು ದೇಶದ ಹಿತಾಸಕ್ತಿ ಕಾಪಾಡಲು ಕೇಂದ್ರ ಪೂರ್ಣ ಪ್ರಮಾಣದಲ್ಲಿ ಬದ್ಧವಾಗಿದೆ ಎಂದು ಚೀನಾಕ್ಕೆ ಪರೋಕ್ಷ ರಾಷ್ಟ್ರಪತಿ ಎಚ್ಚರಿಕೆ ನೀಡಿದರು.

ಕೃಷಿ ಕಾನೂನು ಪ್ರಯೋಜನಕಾರಿ

ಸಂಸತ್ತಿನಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ | ಸಂಸತ್​ನಲ್ಲಿ ಚರ್ಚೆ, ಭಿನ್ನ ಅಭಿಪ್ರಾಯ ಇರಬೇಕು

ಸಂಸತ್ತಿನ ಬಜೆಟ್ ಅಧಿವೇಶನದ ಮೊದಲ ದಿನ ರಾಷ್ಟ್ರಪತಿ ಭಾಷಣದ ವೇಳೆ ಕಲಾಪ ಬಹಿಷ್ಕರಿಸಿದ ವಿಪಕ್ಷ ಸದಸ್ಯರ ಕ್ರಮ ಚರ್ಚೆಗೀಡಾಗಿದೆ. ಸಂಸತ್ತಿನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಸಂಸತ್ತಿನೊಳಗೆ ದೇಶದ ಮತ್ತು ದೇಶವಾಸಿಗಳಿಗೆ ಒಳಿತಾಗುವ ವಿಚಾರಗಳ, ವಿಷಯಗಳ ಚರ್ಚೆ, ವಿಭಿನ್ನ ದೃಷ್ಟಿಕೋನಗಳ ಮಂಡನೆ ನಡೆಯಬೇಕು. ಎಲ್ಲ ಸಂಸತ್ ಸದಸ್ಯರೂ ಇದರಲ್ಲಿ ಭಾಗಿಯಾಗಬೇಕು. ಈ ವಿಚಾರದಲ್ಲಿ ನಾಚಿಕೆ, ಸಂಕೋಚ ಬೇಕಾಗಿಲ್ಲ ಎಂದರು.

ಕೇಂದ್ರ ಸರ್ಕಾರ ಏಳು ತಿಂಗಳ ಹಿಂದೆ ಜಾರಿಗೊಳಿಸಿರುವ ಮೂರು ಮಹತ್ವದ ಕೃಷಿ ಕಾನೂನುಗಳ ಪ್ರಯೋಜನ ಈಗಾಗಲೇ 10 ಕೋಟಿಗೂ ಅಧಿಕ ಸಣ್ಣ ರೈತರಿಗೆ ಆಗಿದೆ. ಅನೇಕ ರಾಜಕೀಯ ಪಕ್ಷಗಳು ಈ ಸುಧಾರಣೆಯನ್ನು ಬೆಂಬಲಿಸಿವೆ. ಆದಾಗ್ಯೂ, ಮಹತ್ವದ ಮೂರು ಕೃಷಿ ಕಾನೂನುಗಳನ್ನು ತಡೆ ಹಿಡಿಯುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಕೋರ್ಟ್ ಏನೇ ಆದೇಶ ನೀಡಿದರೂ ಸರ್ಕಾರ ಅದನ್ನು ಗೌರವಿಸುತ್ತದೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ ಶುಕ್ರವಾರ ಸಂಸತ್ತಿನಲ್ಲಿ ಜಂಟಿ ಅಧಿವೇಶನ ಉದ್ದೇಶಿಸಿ ಹೇಳಿದರು. ರಕ್ಷಣಾ ಕ್ಷೇತ್ರವೂ ಸೇರಿ ನಾನಾ ವಿಚಾರಗಳನ್ನು ಉಲ್ಲೇಖಿಸಿದ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಒಂದು ಗಂಟೆ ಮಾತನಾಡಿದರು.

ಖಂಡನೀಯ ನಡೆ: ಕೃಷಿ ಕಾನೂನು ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದ ರೈತರ ಪೈಕಿ ಒಂದು ಬಣ ಗಣರಾಜ್ಯೋತ್ಸವದ ದಿನ ತಿರಂಗಾಕ್ಕೆ ಅವಮಾನ ಮಾಡಿದ್ದು ಅಕ್ಷಮ್ಯ. ಹಿಂಸಾಚಾರಕ್ಕೆ ನಡೆಸಿದ್ದು ಖಂಡನೀಯ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ ಕೃತ್ಯವನ್ನು ಖಂಡಿಸಿದರು.

ಪ್ರಮುಖಾಂಶಗಳು

  • ಸಣ್ಣ ರೈತರನ್ನು ಕೇಂದ್ರೀಕೃತವಾಗಿರುವ ಕೃಷಿ ನೀತಿಯ ಅವಶ್ಯಕತೆ ಇದೆ. ದೇಶದ ಕೃಷಿ ಕ್ಷೇತ್ರದಲ್ಲಿನ ರೈತರ ಪೈಕಿ ಇವರ ಸಂಖ್ಯೆ ಶೇಕಡ 80 ಇದೆ. ಈ ರೈತರ ಏಳಿಗೆಗೆ ಹೆಚ್ಚಿನ ಬೆಂಬಲ ನೀಡುವ ವಿಚಾರವನ್ನು ಸರ್ಕಾರ ಆದ್ಯತೆಯ ಮೇರೆಗೆ ಪರಿಗಣಿಸಿದೆ. ಕಳೆದ ಆರು ವರ್ಷಗಳ ಅವಧಿಯಲ್ಲಿ ಕೃಷಿ ಕ್ಷೇತ್ರದಲ್ಲಿ ಬಿತ್ತನೆಯಿಂದ ಹಿಡಿದು ಉತ್ಪನ್ನ ಮಾರುಕಟ್ಟೆ ತನಕ ಸಾಕಷ್ಟು ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಿದೆ. ಸ್ವಾವಲಂಬಿ ಭಾರತವನ್ನು ಸ್ವಾವಲಂಬಿ ಕೃಷಿ ಕ್ಷೇತ್ರದ ಮೂಲಕ ಇನ್ನಷ್ಟು ಬಲಪಡಿಸಲಾಗುತ್ತದೆ.
  • ಸಣ್ಣ ರೈತರ ವೆಚ್ಚಕ್ಕೆ ಬೆಂಬಲ ನೀಡುವುದಕ್ಕಾಗಿ ಸರ್ಕಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಮೂಲಕ -ಠಿ;1,13,000 ಕೋಟಿ ಯನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾಯಿಸಿದೆ.
  • ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆ ಮೂಲಕ ಕಳೆದ ಐದು ವರ್ಷಗಳಲ್ಲಿ 17,000 ಕೋಟಿ ರೂಪಾಯಿ ಪ್ರೀಮಿಯಂ ಪಡೆದು, 90,000 ಕೋಟಿ ರೂಪಾಯಿ ಪರಿಹಾರ ಒದಗಿಸಲಾಗಿದೆ. ದೇಶಾದ್ಯಂತ 10,000 ರೈತ ಉತ್ಪಾದಕ ಸಂಘಟನೆ(ಎಫ್​ಪಿಒ) ಸ್ಥಾಪಿಸುವ ಪ್ರಯತ್ನ ಜಾರಿಯಲ್ಲಿದೆ. ಇದು ಅತ್ಯಂತ ಪರಿಣಾಮಕಾರಿ ಹೆಜ್ಜೆಯಾಗಿದೆ.
  • ಕೃಷಿ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ 1 ಲಕ್ಷ ಕೋಟಿ ರೂಪಾಯಿಯ ಅನುದಾನವನ್ನು ಒದಗಿಸಿದೆ. ಭಾರತೀಯ ರೈತರಿಗೆ ಮಾರುಕಟ್ಟೆ ಕಂಡುಕೊಳ್ಳಲು ಅನುಕೂಲವಾಗುವಂತೆ 100ಕ್ಕೂ ಹೆಚ್ಚು ಕಿಸಾನ್ ರೈಲು ಸಂಚಾರವನ್ನು ಆರಂಭಿಸಲಾಗಿದೆ. ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಸೇರಿ ಇನ್ನೂ ಅನೇಕ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ.

ಮೂಲ ಸೌಕರ್ಯ: ಗ್ರಾಮೀಣ ಭಾಗದಲ್ಲಿ ಮೂಲ ಸೌಕರ್ಯವನ್ನು ಒದಗಿಸುವುದರಿಂದ ಹೆಚ್ಚಿನ ಪ್ರಯೋಜನವಾಗುವುದು ಕೃಷಿ ಕ್ಷೇತ್ರಕ್ಕೇ. ಆದ್ದರಿಂದ ಎನ್​ಆರ್​ಇಜಿಎ ನಿಧಿಯನ್ನು ಕಳೆದ ವರ್ಷದಷ್ಟೇ ಅಥವಾ ಕನಿಷ್ಠ 1 ಲಕ್ಷ ಕೋಟಿ ರೂಪಾಯಿ ಮೀಸಲಿಡಬೇಕು. ಪ್ರತಿಭಟನಾ ಮೆರವಣಿಗೆ ಮೂಲಕವೇ ವಿಪಕ್ಷ ಸದಸ್ಯರು ಸಂಸತ್​ಗೆ ಬಂದರೆ ತಪ್ಪೇನಿಲ್ಲ. ಪ್ರತಿಭಟನೆ ನಡೆಸುವುದೂ ತಪ್ಪಲ್ಲ. ಆದರೆ, ನಂತರ ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳಬೇಕು. ಕಲಾಪದಲ್ಲಿ ಸಕ್ರಿಯವಾಗಿ ಭಾಗವಹಿಸಿ ದೇಶಕ್ಕೆ ಒಳಿತಾಗುವ ಕೆಲಸವನ್ನು ಮಾಡಬೇಕು. | ಪ್ರಲ್ಹಾದ್ ಜೋಶಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ

ರೈತ ಸ್ವಾಭಿಮಾನ ಹೆಚ್ಚಿಸೋದಕ್ಕೆ ಏನಿರಬಹುದು ಕೊಡುಗೆ?

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಮುಂಗಡಪತ್ರವನ್ನು ಮಂಡಿಸಲಿದ್ದಾರೆ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹೊಸ ಕೃಷಿ ಕಾನೂನು ವಿರೋಧಿಸಿ ಕೆಲವು ರೈತ ಸಂಘಟನೆಗಳು ಪ್ರತಿಭಟನೆ ಮುಂದುವರಿದಿದ್ದು, ಹಲವು ಸುತ್ತು ಮಾತುಕತೆಯಾದರೂ ಫಲ ಸಿಕ್ಕಿಲ್ಲ. ಈ ಬೆನ್ನಲ್ಲೇ ಈ ವರ್ಷದ ಬಜೆಟ್​ನಲ್ಲಿ ರೈತ ಸಮುದಾಯದ ಸಾಮಾನ್ಯ ನಿರೀಕ್ಷೆಗಳ ಸಂಕ್ಷಿಪ್ತ ಅವಲೋಕನ ಇಲ್ಲಿದೆ.

ದ್ವಿದಳ ಧಾನ್ಯ/ಖಾದ್ಯ ತೈಲ ಸ್ವಾವಲಂಬನೆ: ಆತ್ಮನಿರ್ಭರ ಭಾರತಕ್ಕೆ ಪೂರಕವಾಗಿ ದೇಶದಲ್ಲಿ ದ್ವಿದಳ ಧಾನ್ಯ ಸ್ವಾವಲಂಬನೆಗೆ ಉತ್ತೇಜನ ಸಿಕ್ಕಿದೆ. ಇತ್ತೀಚಿನ ವರ್ಷಗಳಲ್ಲಿ ದ್ವಿದಳ ಧಾನ್ಯ ಉತ್ಪಾದನೆ ಗಣನೀಯವಾಗಿ ಹೆಚ್ಚಳವಾಗಿದೆ. ಇನ್ನೊಂದೆಡೆ, ಖಾದ್ಯ ತೈಲ ಉತ್ಪಾದನೆ ಕಡಿಮೆಯಾದ ಕಾರಣ ಆಮದು ಪ್ರಮಾಣವೂ ಹೆಚ್ಚಳವಾಗಿದೆ. 2019ರ ಲಭ್ಯ ಡೇಟಾ ಪ್ರಕಾರ, ಖಾದ್ಯ ತೈಲ ಆಮದು ಪ್ರಮಾಣ -ಠಿ; 73,000 ಕೋಟಿ ತಲುಪಿದೆ. 1990ರ ದಶಕದಲ್ಲಿ ಭಾರತ ಖಾದ್ಯ ತೈಲದ ವಿಚಾರದಲ್ಲಿ ಸ್ವಾವಲಂಬನೆ ಸಾಧಿಸಿತ್ತು. ದ್ವಿದಳ ಧಾನ್ಯಗಳು ಮತ್ತು ಎಣ್ಣೆಬೀಜಗಳ ಕೃಷಿ ಕ್ಷೇತ್ರ ಈ ಜನವರಿಯಲ್ಲಿ ಅನುಕ್ರಮವಾಗಿ 3.3 ಲಕ್ಷ ಮತ್ತು 5.2 ಲಕ್ಷ ಹೆಕ್ಟೇರ್ ಆಗಿದೆ. ಆದ್ದರಿಂದ ಈಗ ಮತ್ತದೇ ಸ್ವಾವಲಂಬನೆ ಸಾಧಿಸುವುದಕ್ಕೆ ಸಕಾಲ.

ಸಾವಯವ ಮತ್ತು ಸಹಜ ಕೃಷಿ: ಕರೊನಾ ಸೋಂಕಿನ ನಂತರದ ಬೆಳವಣಿಗೆಯಲ್ಲಿ ಸುರಕ್ಷಿತ ಮತ್ತು ಪೌಷ್ಟಿಕಾಂಶಯುತ ಆಹಾರ ವಸ್ತುಗಳ ಬೇಡಿಕೆ ಹೆಚ್ಚಿದೆ. ಇಂಥ ಸನ್ನಿವೇಶದಲ್ಲಿ ಎಲ್ಲ ರಾಜ್ಯಗಳಲ್ಲೂ ಸಹಜ, ಪರಿಸರ ಕೃಷಿ ಮಾದರಿಯ ಚಟುವಟಿಕೆಗಳು ಹೆಚ್ಚಾಗಬೇಕು. ಸಹಜ, ಸಾವಯವ ಕೃಷಿಗೆ ಉತ್ತೇಜನ, ನೆರವು ದೊರೆಯಬೇಕು. ಸುಸ್ಥಿರ ಕೃಷಿ, ತೋಟಗಾರಿಕೆಗೆ ಇನ್ನಷ್ಟು ಒತ್ತು ನೀಡಬೇಕು. ಈ ವರ್ಷವೇ ವಿಶ್ವಸಂಸ್ಥೆಯ ಫುಡ್ ಸಿಸ್ಟಮ್ ಶೃಂಗ ನಡೆಯಲಿರುವ ಕಾರಣ ಭಾರತಕ್ಕೆ ತನ್ನ ನಾಯಕತ್ವವನ್ನು ಪ್ರಸ್ತುತಪಡಿಸುವುದಕ್ಕೆ ಒಂದು ವೇದಿಕೆ ಸೃಷ್ಟಿಯಾಗಲಿದೆ.

ಕೃಷಿ ಮೂಲಸೌಕರ್ಯ ನಿಧಿಯನ್ನು ಬಳಸಿಕೊಂಡು ಕೃಷಿಕರಿಗೆ, ಸಂಬಂಧಿತ ಖಾಸಗಿ ವಲಯಕ್ಕೆ ಪ್ರೋತ್ಸಾಹ ಧನ ಕೊಡಬಹುದು. ಇದನ್ನು ಬಳಸಿಕೊಂಡು ಕೃಷಿ ಉತ್ಪನ್ನ ದಾಸ್ತಾನು ಕೇಂದ್ರ, ಕೃಷಿ ಉತ್ಪನ್ನ ಸಂಸ್ಕರಣಾ ಘಟಕಗಳನ್ನು ಆರಂಭಿಸಬಹುದು. ರಫ್ತು ಮಾಡುವುದಕ್ಕೂ ಅನುಕೂಲ ಒದಗಿಸಬೇಕು. ಕೃಷಿ ಉದ್ಯಮಿಗಳಿಗೆ ತೆರಿಗೆ ವಿನಾಯಿತಿ ಘೋಷಿಸಬೇಕು. ಕೃಷಿ ಉತ್ಪನ್ನ ಸಾಗಣೆ ಮೇಲಿ ತೆರಿಗೆ ಹೊರೆ ಕಡಿಮೆಯಾಗಬೇಕು. ಅಗತ್ಯ ವಸ್ತುಗಳ ಕಾಯ್ದೆಗೆ ತಿದ್ದುಪಡಿ ತಂದು ಇದಕ್ಕೆ ವೇಗ ಕೊಟ್ಟರೆ ಕೃಷಿಕರಿಗೆ ಅನುಕೂಲವಾಗಲಿದ್ದು, ಆದಾಯವೂ ವೃದ್ಧಿಯಾಗಲಿದೆ.

ದೇಶದ ಹಲವೆಡೆ ಈಗಾಗಲೇ ಕೃಷಿ-ತಂತ್ರಜ್ಞಾನ ನವೋದ್ಯಮಗಳು ಹುಟ್ಟಿಕೊಂಡಿವೆ. ನವೋದ್ಯಮ ಹಬ್​ಗಳೂ ಸೃಷ್ಟಿಯಾಗಿವೆ. ಆದರೆ, ಇವುಗಳ ಸಂಖ್ಯೆ ಕಡಿಮೆ. ಇಂತಹ ಇನ್ನಷ್ಟು ಕೇಂದ್ರ, ಘಟಕಗಳ ಸ್ಥಾಪನೆಯಾಗಬೇಕು. ಇದಕ್ಕೆಂದೇ ಉತ್ತೇಜನ ನೀಡಲು ಸರ್ಕಾರ ಪ್ರತ್ಯೇಕ ನಿಧಿ ಸ್ಥಾಪಿಸಬಹುದು. ರಸಗೊಬ್ಬರ- ಕೃಷಿ ಕ್ಷೇತ್ರದಲ್ಲಿ ರಸಗೊಬ್ಬರ ಬಳಕೆಯಲ್ಲಿ ಸುಧಾರಣೆಯಾಗಬೇಕು. ಸಂತುಲಿತ ಪೌಷ್ಟಿಕಾಂಶದ ಬಳಕೆ ಖಾತರಿಗೊಳಿಸಬೇಕು. ಕಡಿಮೆ ಬೆಲೆಗೆ ಸಿಗುತ್ತದೆ ಎಂಬ ಕಾರಣಕ್ಕೆ ಅತಿಯಾದ ಯೂರಿಯಾ ಬಳಸುವುದನ್ನು ಕಡಿಮೆ ಮಾಡಬೇಕು. ಬೇವುಲೇಪಿತ ಯೂರಿಯಾ ಬಳಸುವುದರಿಂದ ಆಗುವ ಪ್ರಯೋಜನದ ಬಗ್ಗೆ ಜಾಗೃತಿ ಮೂಡಿಸಬೇಕು. ನೇರ ಪ್ರಯೋಜನ ವರ್ಗಾವಣೆ(ಡಿಬಿಟಿ)ಯನ್ನು ಸರ್ಕಾರ ಹೆಚ್ಚಿಸಬೇಕು.

ಕೃಷಿ ಸಂಶೋಧನೆ-ನವೋನ್ವೇಷಣೆ: ಕೃಷಿ ಕ್ಷೇತ್ರದಲ್ಲಿನ ಸಂಶೋಧನೆ ಮತ್ತು ನವೋನ್ವೇಷಣೆ ಮೇಲಿನ ಹೂಡಿಕೆಯನ್ನು ಹೆಚ್ಚು ಮಾಡಬೇಕು. 2018-19ರ ಡೇಟಾ ಪ್ರಕಾರ, ಕೃಷಿ ಜಿಡಿಪಿಯ ಶೇಕಡ 0.35 ಮಾತ್ರವೇ ಕೃಷಿ ಸಂಶೋಧನೆ ಮತ್ತು ನವೋನ್ವೇಷಣೆ ಮೇಲೆ ಹೂಡಿಕೆ ಆಗಿದೆ. ಚೀನಾದಲ್ಲಿ ಈ ಪ್ರಮಾಣ ಶೇಕಡ 0.8 ಇದೆ.

ಸಂಕಷ್ಟ ನೀಗಿಸಲು ಕ್ರಮ ಅಗತ್ಯ: ಹಲವು ಸ್ತರದ ಕೃಷಿ, ಜೇನುಸಾಕಣೆ, ಸೌರಪಂಪ್, ಶೂನ್ಯ ಬಂಡವಾಳ ಕೃಷಿ ಮುಂತಾದವುಗಳಿಗೆ ಆದ್ಯತೆ ನೀಡಿ, ಉತ್ತೇಜನ ಕೊಡಬೇಕಾದ ಅವಶ್ಯಕತೆ ಇದೆ. ಇದಲ್ಲದೆ, ಕೃಷಿ ಉತ್ತೇಜನಕ್ಕೆ ಕೃಷಿಕರಿಗೆ ನೀಡುವ ಪಿಎಂ ಕಿಸಾನ್, ಪಿಎಂಫಸಲ್ ಬಿಮಾ ಯೋಜನೆ ಮುಂತಾದವುಗಳಿಗೆ ಮೀಸಲಿಡುವ ಹಣದ ಪ್ರಮಾಣ ಹೆಚ್ಚಾಗಬೇಕು.

ಮಾರುಕಟ್ಟೆ ವ್ಯವಸ್ಥೆ: ದೇಶದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಬೇಕಾಗಿದೆ. ಇತ್ತೀಚೆಗೆ ಜಾರಿಗೆ ತಂದಿರುವ ಹೊಸ ಕೃಷಿ ಕಾನೂನುಗಳು ಇದಕ್ಕೆ ಪೂರಕವಾಗಿವೆ. ಆದರೆ, ಕೆಲವು ಸಂಘಟನೆಗಳು ವಿರೋಧವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿರುವುದು ಕೊಂಚ ಹಿನ್ನಡೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net