

ವಾಷಿಂಗ್ಟನ್: ಶನಿವಾರ ನಭೋಮಂಡಲಕ್ಕೆ ಜಿಗಿದಿರುವ ಉದ್ಯಮಿ ಎಲನ್ ಮಸ್ಕ್ ಮಾಲೀಕತ್ವದ ಸ್ಪೇಸ್ಎಕ್ಸ್ನ ಬಾಹ್ಯಾಕಾಶ ನೌಕೆ ‘ಸ್ಪೇಸ್ಎಕ್ಸ್ ಫಾಲ್ಕನ್ 9’ ಭಾನುವಾರ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು (ಐಎಸ್ಎಸ್) ಸೇರಿಕೊಂಡ ಕ್ಷಣವನ್ನು ಲೈವ್ಸ್ಟ್ರೀಮ್ಲ್ಲಿ ತೋರಿಸಲಾಗಿದೆ. ಐಎಸ್ಎಸ್ನಲ್ಲಿ ಆಶ್ರಯ ಪಡೆದಿರುವ ಗಗನಯಾನಿ ಸುನಿತಾ ವಿಲಿಯಮ್್ಸ ಮತ್ತು ಬುಚ್ ವಿಲ್ಮೋರ್ರನ್ನು ಈ ನೌಕೆ ಫೆಬ್ರವರಿಯಲ್ಲಿ ವಾಪಸ್ ಭೂಮಿಗೆ ಕರೆ ತರಲಿದೆ.
ಫ್ಲಾರಿಡಾದ ಕೇಪ್ ಕೆನವರಾಲ್ನಿಂದ ಶನಿವಾರ ಮಧ್ಯಾಹ್ನ 1.17ಕ್ಕೆ ಹೊರಟ ನೌಕೆ ಭಾನುವಾರ ಸಂಜೆ 5.30ಕ್ಕೆ ಐಎಸ್ಎಸ್ ತಲುಪಿತು. ಐಎಸ್ಎಸ್ಎಸ್ನೊಂದಿಗೆ ಜೋಡಣೆಯಾದ ಮೇಲೆ, ಭೂಮಿಯಿಂದ ತೆರಳಿದ ನೌಕೆಯಲ್ಲಿದ್ದ ನಾಸಾ ಗಗನಯಾನಿ ನಿಕ್ ಹೇಗ್ ಮತ್ತು ರಷ್ಯಾ ಗಗನಯಾತ್ರಿ ಅಲೆಕ್ಸಾಂಡರ್ ಗೊರ್ಬುನೊವ್ ಸಂಜೆ 7 ಗಂಟೆ ನಂತರ ನಿಲ್ದಾಣದಲ್ಲಿ ಇಳಿದು ಅಲ್ಲಿನ ಸಹೋದ್ಯೋಗಿಗಳನ್ನು ಅಪ್ಪಿಕೊಂಡರು. ‘ಇದೊಂದು ಅದ್ಭುತವಾದ ದಿನ’ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಉಪ ಆಡಳಿತಗಾರ ಪಾಮ್ ಮೆಲರಿ ಉದ್ಗರಿಸಿದ್ದಾರೆ.
ದೀರ್ಘ ವಾಸ್ತವ್ಯ: ಜೂನ್ನಲ್ಲಿ ಬೋಯಿಂಗ್ ಸ್ಟಾರ್ಲೈನರ್ನಲ್ಲಿ 8 ದಿನ ವಾಸ್ತವ್ಯಕ್ಕಾಗಿ ಐಎಸ್ಎಸ್ಗೆ ತೆರಳಿದ್ದ ಸುನಿತಾ ಮತ್ತು ವಿಲ್ಮೋರ್, ಸ್ಟಾರ್ಲೈನರ್ನಲ್ಲಿನ ತಾಂತ್ರಿಕ ದೋಷದಿಂದಾಗಿ ಭೂಮಿಗೆ ಮರಳಲಾಗದೆ ಅಲ್ಲೇ ಉಳಿದುಕೊಂಡಿದ್ದಾರೆ. ಇದೀಗ ಸ್ಪೇಸ್ಎಕ್ಸ್ ವಾಹನದಲ್ಲಿ ತೆರಳಿರುವ ಹೇಗ್ ಮತ್ತು ಗೊರ್ಬುನೊವ್ ಮುಂದಿನ ವರ್ಷ ಫೆಬ್ರವರಿಯಲ್ಲಿ ಭೂಮಿಗೆ ಮರಳುವ ಯೋಜನೆಯಿದ್ದು ಅವರೊಂದಿಗೆ ಸುನಿತಾ ಹಾಗೂ ವಿಲ್ಮೋರ್ ಕೂಡ ಬರಲಿದ್ದಾರೆ.