ಮಹಿಳೆಯ ಸೀರೆ ಎಳೆದ ಪ್ರಕರಣಕ್ಕೆ ಟ್ವಿಸ್ಟ್​: ಬಿಜೆಪಿ ಕಾರ್ಯಕರ್ತರ ವಿರುದ್ಧವೇ ದೂರು ದಾಖಲು

Sari Pull
Published on

ಲಖನೌ: ಸ್ಥಳೀಯ ಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆ ಮಹಿಳೆಯ ಸೀರೆ ಎಳೆದ ಪ್ರಕರಣವೀಗ ಎರಡು ರಾಜಕೀಯ ಪಕ್ಷಗಳ ನಡುವಿನ ಕೆಸರೆರಚಾಟಕ್ಕೆ ಕಾರಣವಾಗಿದೆ. ಮಹಿಳೆಯರ ಸೀರೆ ಎಳೆದವರು ಸಮಾಜವಾದಿ ಪಾರ್ಟಿಯ ಬೆಂಬಲಿಗರೆಂದು ಹೇಳಲಾಗಿತ್ತು. ಇದೀಗ ಅದೇ ಪಕ್ಷದ ನಾಯಕ ರಿತು ಸಿಂಗ್​ ಬಿಜೆಪಿ ವಿರುದ್ಧ ಬೊಟ್ಟು ಮಾಡಿದ್ದು, ಸೀರೆ ಎಳೆದಿದ್ದು ಬಿಜೆಪಿ ಬೆಂಬಲಿಗರು ಎಂದು ದೂರಿದ್ದಾರೆ.

ಮಹಿಳೆಯ ಸೀರೆ ಎಳೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ. ರಿತು ಸಿಂಗ್​ ಉತ್ತರ ಪ್ರದೇಶದ ಸ್ಥಳೀಯ ಚುನಾವಣೆಯ ಎಸ್​ಪಿ ಅಭ್ಯರ್ಥಿ. ಲಖಿಂಪುರ ಖೇರಿ ಜಿಲ್ಲೆಯ ಪಾಸ್‌ಗವಾನ್ ಬ್ಲಾಕ್‌ನಿಂದ ಉತ್ತರ ಪ್ರದೇಶ ಬ್ಲಾಕ್ ಪ್ರಮುಖ್ ಚುನಾವಣೆಗೆ ರಿತು ಸಿಂಗ್ ಸ್ಪರ್ಧೆ ಮಾಡಿದ್ದಾರೆ. ಪಕ್ಷದ ಕಾರ್ಯಕರ್ತರು ನಾಮಪತ್ರ ಸಲ್ಲಿಸಲು ತೆರಳುವಾಗಲೇ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ.

ಬಿಜೆಪಿ ಕಾರ್ಯಕರ್ತರು ಅಸಭ್ಯವಾಗಿ ವರ್ತಿಸಿದ್ದಾರೆಂದು ಸಿಂಗ್​ ದೂರಿದ್ದು, ಅವರೆಲ್ಲ ಮೊಹಮ್ಮದಿ ಪ್ರದೇಶದ ಬಿಜೆಪಿ ಶಾಸಕ ಲೋಕೇಂದ್ರ ಪ್ರತಾಪ್ ಸಿಂಗ್ ಬೆಂಬಲಿಗರು ಎಂದಿದ್ದಾರೆ. ನಾಮಪತ್ರ ಸಲ್ಲಿಸಲು ಕಚೇರಿಗೆ ಹೋಗುವಾಗ ಅವರೊಂದಿಗೆ ಬಂದ ಇತರ ಮಹಿಳೆಯರ ಬಟ್ಟೆಗಳನ್ನು ಬಿಜೆಪಿ ಕಾರ್ಯಕರ್ತರು ಹಲ್ಲೆ ಮಾಡಿ ಹರಿದು ಹಾಕಿದರು. ಅಲ್ಲದೆ, ನಾಮಪತ್ರಗಳನ್ನು ಕಸಿದುಕೊಂಡು ಅಲ್ಲಿಂದ ಪರಾರಿಯಾದರೆಂದು ರಿತು ಸಿಂಗ್​ ಆರೋಪಿಸಿದ್ದಾರೆ.

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ವೈರಲ್ ವಿಡಿಯೋವನ್ನು ಟ್ವೀಟ್ ಮಾಡಿದ್ದು, ಇದರಲ್ಲಿ ಇಬ್ಬರು ಪುರುಷರು ಮಹಿಳೆಯನ್ನು ತಡೆದು ಸೀರೆಯನ್ನು ಎಳೆಯುವುದನ್ನು ಕಾಣಬಹುದು. ಆರೋಪಿಗಳು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಅಧಿಕಾರಕ್ಕಾಗಿ ಹಸಿದ ಗೂಂಡಾಗಳು ಎಂದು ಅಖಿಲೇಶ್​ ಕರೆದಿದ್ದಾರೆ.

ಸಮಾಜವಾದಿ ಪಕ್ಷದ ಅಭ್ಯರ್ಥಿ ರಿತು ಸಿಂಗ್ ಅವರ ದೂರಿನ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 147, 171 ಎಫ್, 354, 392 ಮತ್ತು 427ರ ಅಡಿಯಲ್ಲಿ ಯಶ್ ವರ್ಮಾ ಮತ್ತು ಇತರ ಅಪರಿಚಿತ ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net