

ಬೆಂಗಳೂರು: ಭಯೋತ್ಪಾದನೆ ಈಗ ಕೃಷಿ ವಲಯಕ್ಕೂ ಕಾಲಿಟ್ಟಿದೆಯೇ? ಅನಾಮಧೇಯ ವ್ಯಕ್ತಿಗಳು ರೈತರ ಮನೆ ಬಾಗಿಲಿಗೆ ಬಿತ್ತನೆ ಬೀಜದ ಪೊಟ್ಟಣಗಳನ್ನು ಕಳಿಸುತ್ತಿರುವುದು ಈ ಆತಂಕಕ್ಕೆ ಕಾರಣವಾಗಿದೆ. ಈ ಬೀಜಗಳನ್ನು ಬಿತ್ತನೆ ಮಾಡಿದರೆ ಕೃಷಿ ಸಂಪೂರ್ಣ ನಾಶವಾಗುವ ಸಾಧ್ಯತೆ ಇದೆ ಎಂದೂ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೆ ಸೂಚಿಸಿದೆ.
ವಿವಿಧ ತಳಿಗಳ ಬಿತ್ತನೆ ಬೀಜದ ಈ ಪೊಟ್ಟಣಗಳನ್ನು ಯಾರು ಕಳುಹಿಸುತ್ತಾರೆ, ಇವು ಎಲ್ಲಿಂದ ಬರುತ್ತವೆ ಎಂಬ ವಿವರಗಳೇ ಇರುವುದಿಲ್ಲ. ಅದು ತೀವ್ರ ಅಚ್ಚರಿಗೂ ಕಾರಣವಾಗಿದೆ. ಅಮೆರಿಕ, ಕೆನಡ, ಬ್ರಿಟನ್, ನ್ಯೂಜಿಲೆಂಡ್, ಜಪಾನ್, ಯೂರೋಪ್ ದೇಶಗಳ ಸಾವಿರಾರು ರೈತರಿಗೆ ಇಂಥ ಪೊಟ್ಟಣಗಳು ತಲುಪಿವೆ. ಅದರ ಪರಿಣಾಮಗಳು ಆ ದೇಶಗಳಲ್ಲಿ ಈಗ ಕಂಡುಬರುತ್ತಿವೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬೀಜಗಳ ಬಳಕೆಯಿಂದ ಕೃಷಿ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿ, ಕ್ರಮೇಣ ಭೂಮಿಯೇ ಬಂಜರಾಗುವ ಸಾಧ್ಯತೆ ಇದೆ. ಇದನ್ನು ಸೀಡ್ ಟೆರರಿಸಂ (ಬೀಜ ಭಯೋತ್ಪಾದನೆ), ಕೃಷಿ ಉತ್ಪನ್ನಗಳ ಕಳ್ಳಸಾಗಣೆ, ಬ್ರಷಿಂಗ್ ಸ್ಕಾ್ಯಮ್ ಎಂಬ ಹೆಸರುಗಳಿಂದ ಕರೆಯಲಾಗುತ್ತದೆ.
ಚೀನಾ ಮೇಲೆ ಅನುಮಾನ: ಬಿತ್ತನೆ ಬೀಜದ ಪೊಟ್ಟಣಗಳು ಬರುತ್ತಿರುವ ಹಿಂದೆ ಚೀನಾ ಕೈವಾಡವಿರುವ ಬಗ್ಗೆ ಅಮೆರಿಕ ಹಾಗೂ ಕೆನಡ ಅನುಮಾನ ವ್ಯಕ್ತಪಡಿಸಿವೆ. ಆದರೆ ಚೀನಾ ವಿರುದ್ಧ ಯಾವುದೇ ದಾಖಲೆ ಇಲ್ಲ ಎಂದು ತಜ್ಞರು ಹೇಳುತ್ತಾರೆ.
ಕೇಂದ್ರದಿಂದ ಎಚ್ಚರಿಕೆ: ಕೇಂದ್ರ ಕೃಷಿ ಸಚಿವಾಲಯ ಎಲ್ಲ ರಾಜ್ಯಗಳಿಗೆ ಪತ್ರ ಬರೆದು ಎಚ್ಚರಿಕೆ ನೀಡಿದೆ. ಇಂತಹ ಬಿತ್ತನೆ ಬೀಜದ ಪೊಟ್ಟಣಗಳನ್ನು ಸ್ವೀಕರಿಸದಂತೆ ರೈತರಲ್ಲಿ ಅರಿವು ಮೂಡಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಈ ಬೀಜಗಳು ದೇಶದ ಪರಿಸರ, ಕೃಷಿ, ಜೀವ ವೈವಿಧ್ಯ ಹಾಗೂ ರಾಷ್ಟ್ರೀಯ ಭದ್ರತೆ ಮೇಲೆ ಭೀಕರ ಪರಿಣಾಮ ಉಂಟು ಮಾಡುವ ಸಾಧ್ಯತೆಗಳಿರುತ್ತವೆ. ಎಲ್ಲ ರಾಜ್ಯಗಳ ಕೃಷಿ ಇಲಾಖೆಗಳು, ಕೃಷಿ ವಿವಿಗಳು, ಬಿತ್ತನೆ ಬೀಜ ಉತ್ಪಾದಕ ಸಂಸ್ಥೆಗಳು, ಬಿತ್ತನೆ ಬೀಜ ಪ್ರಮಾಣೀಕೃತ ಸಂಸ್ಥೆಗಳು, ಐಸಿಎಆರ್ ಹಾಗೂ ಬೀಜ ನಿಗಮಗಳು ರೈತರಲ್ಲಿ ಅರಿವು ಮೂಡಿಸಬೇಕೆಂದು ಕೇಂದ್ರ ಸರ್ಕಾರ ಹೇಳಿದೆ.
ಮೊದಲು ಚರ್ಚೆಯಾಗಿದ್ದು ರಾಜ್ಯದಲ್ಲಿ: ರಾಜ್ಯದ ಕೃಷಿ ಇಲಾಖೆ ಕಳೆದ ತಿಂಗಳು ವೆಬಿನಾರ್ ಮೂಲಕ ಬಿತ್ತನೆ ಬೀಜದ ಬಗ್ಗೆ ಕಾರ್ಯಾಗಾರ ನಡೆಸಿತ್ತು. ಆ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಬೀಜ ಪರೀಕ್ಷಾ ಸಂಸ್ಥೆ (ಇಸ್ತಾ)ದ ಉಪಾಧ್ಯಕ್ಷರಾಗಿರುವ ತೆಲಂಗಾಣದ ಕೇಶವಲು ಭಾಗವಹಿಸಿದ್ದರು. ರಾಜ್ಯದ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಸೀಡ್ ಟೆರರಿಸಂ ಬಗ್ಗೆ ಪ್ರಸ್ತಾಪ ಮಾಡಿ ಕೇಂದ್ರದ ಗಮನ ಸೆಳೆಯುವಂತೆ ಕೇಶವಲು ಅವರನ್ನು ಒತ್ತಾಯ ಮಾಡಿದ್ದರು.
ಸೀಡ್ ಆಕ್ಟ್ನ್ನು ಇನ್ನಷ್ಟು ಬಲಪಡಿಸಬೇಕು. ಹೊರ ದೇಶದಿಂದ ಬರುವ ಯಾವುದೇ ಬೀಜವನ್ನು ಕ್ವಾರಂಟೈನ್ಗೆ ಒಳಪಡಿಸಿ ಪರೀಕ್ಷೆ ಮಾಡಬೇಕು. ಬೀಜೋಪಚಾರ ಆಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಯಾವುದೇ ಪಾರ್ಸೆಲ್ ನೇರವಾಗಿ ಬರಲು ಬಿಡಬಾರದು. -ಡಾ. ಮಹದೇವಪ್ಪ, ಕೃಷಿ ವಿಜ್ಞಾನಿ ಇದೊಂದು ಆತಂಕಕಾರಿ ಸಂಗತಿ. ಇಂತಹ ಪಾರ್ಸೆಲ್ಗಳು ಬರದಂತೆ ತಡೆಗಟ್ಟುವುದು ಕೇಂದ್ರ ಸರ್ಕಾರದ ಜವಾಬ್ದಾರಿ. ಕೇವಲ ರೈತರಿಗೆ ಎಚ್ಚರಿಕೆ ನೀಡುವುದರಿಂದ ಉಪಯೋಗವಿಲ್ಲ. ಅಗತ್ಯ ಬಿದ್ದರೆ ಕಾನೂನನ್ನು ರೂಪಿಸಲಿ. -ಮಾರುತಿ ಮಾನ್ಪಡೆ, ರೈತ ಹೋರಾಟಗಾರ ಇದು ಅಪಾಯಕಾರಿ ಸಂಗತಿ. ರೈತರು ಇಂತಹ ಪಾರ್ಸೆಲ್ಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಪ್ರಮಾಣೀಕೃತ ಸಂಸ್ಥೆಗಳು ಹಾಗೂ ನಂಬಿಕೆ ಇರುವ ಕಡೆ ಮಾತ್ರ ಬಿತ್ತನೆ ಬೀಜವನ್ನು ಖರೀದಿಸಬೇಕು. -ಕುರುಬೂರು ಶಾಂತಕುಮಾರ್, ಅಧ್ಯಕ್ಷ, ಕಬ್ಬು ಬೆಳೆಗಾರರ ಸಂಘ
ಶಿರಹಟ್ಟಿ ಮತ್ತು ಗದಗ ತಾಲೂಕಿನ ಐದಾರು ರೈತರ ಮನೆಗೆ ಬೀಜಗಳ ಪೊಟ್ಟಣ ಬಂದಿರುವುದು ಆತಂಕ ಮೂಡಿಸಿದೆ. ‘ಯಾವುದೇ ರೈತರಿಗೆ ಅನಾಮಧೇಯ ವ್ಯಕ್ತಿಗಳಿಂದ ಪಾರ್ಸಲ್ ಬಂದಿದ್ದರೆ, ಕೃಷಿ ಇಲಾಖೆ ಅಥವಾ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಮನವಿ ಮಾಡಿದ್ದಾರೆ. ವಿಜಯಪುರ, ಬಾಗಲಕೋಟೆ, ಧಾರವಾಡ, ಹಳಿಯಾಳ ಮತ್ತು ಗದಗ ಜಿಲ್ಲೆಯ ಕೆಲ ರೈತರಿಗೂ ಬೀಜಗಳ ಪಾರ್ಸಲ್ ಬಂದಿವೆ ಎಂಬ ಮಾತು ಕೇಳಿಬರುತ್ತಿದೆ.
ವಿದೇಶಗಳಿಂದ ಕಾನೂನು ರೀತಿಯಲ್ಲಿ ದೇಶದೊಳಗೆ ತರುವ ವಸ್ತುಗಳನ್ನು ಪರಿಶೀಲಿಸಲಾಗುತ್ತದೆ. ಆದರೆ ಈ ಬಿತ್ತನೆ ಬೀಜಗಳನ್ನು ಕಳ್ಳಸಾಗಾಣಿಕೆ ಮೂಲಕ ದೇಶದ ಒಳಗೆ ತರಲಾಗುತ್ತಿದೆ. ಬಳಿಕ ರೈತರ ಹೆಸರಿಗೆ ಕೊರಿಯರ್ ಮಾಡಲಾಗುತ್ತದೆ. ಇದರ ಹಿಂದೆ ದೊಡ್ಡ ಜಾಲವೇ ಕೆಲಸ ಮಾಡುತ್ತಿದೆ ಎಂದು ಹೇಳಲಾಗಿದೆ.
ಜೈವಿಕ ಬೀಜಗಳ ಪಾರ್ಸಲ್ ಬರುತ್ತಿರುವ ಬಗ್ಗೆ ಕೇಂದ್ರದಿಂದ ಪತ್ರ ಬಂದಿದೆ. ಈ ಬಗ್ಗೆ ರೈತರಲ್ಲಿ ಅರಿವು ಮೂಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ರೈತರು ಇಂತಹ ಪಾರ್ಸಲ್ಗಳನ್ನು ಪಡೆಯಬಾರದು. | ಬಿ.ಸಿ. ಪಾಟೀಲ್, ಕೃಷಿ ಸಚಿವ