ಬೀರೂರು-ತಾಳಗುಪ್ಪ ಮಾರ್ಗ ಪರಿಶೀಲಿಸಿದ ನೈಋತ್ಯ ರೈಲ್ವೆ ಜಿಎಂ ಮುಕುಲ್

South Western Railway GM inspection
Published on

ಶಿವಮೊಗ್ಗ: ನೈಋತ್ಯ ರೈಲ್ವೆಯ ಮಹಾಪ್ರಬಂಧಕ ಮುಕುಲ್ ಸರಣ್ ಮಾಥುರ್ ಅವರು ಶುಕ್ರವಾರ ಬೀರೂರು ಮತ್ತು ತಾಳಗುಪ್ಪ ನಡುವಿನ ಮಾರ್ಗದಲ್ಲಿ ವಿಂಡೋ ಟ್ರೇಲಿಂಗ್ ತಪಾಸಣೆ ನಡೆಸಿ ಮುಖ್ಯ ಸುರಕ್ಷತೆ ಹಾಗೂ ಕಾರ್ಯಾಚರಣೆ, ನಿಲ್ದಾಣಗಳ ಪುನರಾಭಿವೃದ್ಧಿ, ಮೂಲಸೌಕರ್ಯ ಮತ್ತು ಪ್ರಯಾಣಿಕರ ಸೌಲಭ್ಯಗಳನ್ನು ಪರಿಶೀಲಿಸಿದರು.

ಶಿವಮೊಗ್ಗ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ ಅವರು, ಅಮೃತ ಭಾರತ ನಿಲ್ದಾಣ ಯೋಜನೆ (ಎಬಿಎಸ್‌ಎಸ್) ಅಡಿ ನಡೆಯುತ್ತಿರುವ ನಿಲ್ದಾಣದ ಪುನರಾಭಿವೃದ್ಧಿ, ನಿಲ್ದಾಣದ ಸೌಂದರ್ಯ ಮತ್ತು ಪ್ರಯಾಣಿಕರ ಸೌಲಭ್ಯಗಳಲ್ಲಿ ಆಗುತ್ತಿರುವ ಸುಧಾರಣೆ ಪರಿಶೀಲಿಸಿದರು. ಇದೇ ವೇಳೆ ನಿಲ್ದಾಣದಲ್ಲಿ ಹಳಿ ನಿರ್ವಹಣಾಕಾರರೊಂದಿಗೆ ಸಂವಹನ ನಡೆಸಿ ದಿನನಿತ್ಯದ ಕೆಲಸಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು.

ಬಳಿಕ ಕೋಟೆಗಂಗೂರು ಕೋಚಿಂಗ್ ಡಿಪೋಗೆ ತೆರಳಿ ವಿಸ್ತರಿಸಲಾಗುತ್ತಿರುವ ಕೋಚಿಂಗ್ ಮೂಲಸೌಕರ್ಯದ ಪ್ರಗತಿ, ನಂತರ ಅರಸಾಳು ನಿಲ್ದಾಣ ಪರಿಶೀಲಿಸಿ ಅಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯ ವೀಕ್ಷಿಸಿದರು. ಅರಸಾಳು ನಿಲ್ದಾಣದಲ್ಲಿರುವ ಮಾಲ್ಗುಡಿ ಡೇಸ್ ಮ್ಯೂಸಿಯಂಗೆ ಭೇಟಿ ನೀಡಿ ಆರ್.ಕೆ.ನಾರಾಯಣ್ ಅವರ ಕಾದಂಬರಿ ಆಧರಿಸಿ ಶಂಕರ್‌ನಾಗ್ ನಿರ್ದೇಶಿಸಿದ್ದ ಐಕ್ಯಪಾಠದ ಧಾರಾವಾಹಿಗೆ ನಮನ ಸಲ್ಲಿಸುತ್ತಲೇ ಈ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುತ್ತಿರುವ ಪ್ರಯತ್ನ ಶ್ಲಾಘಿಸಿದರು.

ಅಲ್ಲಿಂದ ತಾಳಗುಪ್ಪ ನಿಲ್ದಾಣದಲ್ಲಿ ಎಬಿಎಸ್‌ಎಸ್‌ಅಡಿಯಲ್ಲಿ ನಡೆಯುತ್ತಿರುವ ಪುನರಾಭಿವೃದ್ಧಿ ಕಾರ್ಯಗಳ ಗುಣಮಟ್ಟ ಮತ್ತು ವೇಗ ಪರಿಶೀಲಿಸಿದರು. ಅಲ್ಲಿನ ಪಾಯಿಂಟ್‌ಮೆನ್‌ಗಳೊಂದಿಗೆ ಸಂವಾದ ನಡೆಸಿ, ಅವರ ಅಹವಾಲು ಸ್ವೀಕರಿಸಿದರು. ಶೀಘ್ರವೇ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಭರವಸೆ ನೀಡಿದರು.

ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್, ಮುಖ್ಯ ಇಂಜಿನಿಯರ್ (ನಿರ್ಮಾಣ) ಪ್ರದೀಪ್ ಪುರಿ ಮತ್ತು ಮೈಸೂರು ವಿಭಾಗದ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net