ಮಾಸ್ಕ್​ ಧರಿಸುವುದು ಹೇಗೆ ಎಂದು ತೋರಿಸಲು ಹೋಗಿ ಮುಜುಗರಕ್ಕೆ ಒಳಗಾದ ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್​ ರಾಮಫೋಸಾ

cyril ramaphosa
Published on

ಕೇಪ್​ಟೌನ್​: ಕೋವಿಡ್​ 19 ಸೋಂಕಿನ ಹಿನ್ನೆಲೆಯಲ್ಲಿ ಮಾಸ್ಕ್​ ಧರಿಸುವುದನ್ನು ಎಲ್ಲ ರಾಷ್ಟ್ರಗಳಲ್ಲೂ ಕಡ್ಡಾಯ ಮಾಡಲಾಗುತ್ತಿದೆ. ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡುವಾಗಲೆಲ್ಲ ಮಾಸ್ಕ್​ ಧರಿಸಿಕೊಂಡು ಟಿವಿ ಪರದೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಇವರಂತೆ ತಮ್ಮ ರಾಷ್ಟ್ರದಲ್ಲಿ ಮಾಸ್ಕ್​ ಧರಿಸುವುದನ್ನು ಕಡ್ಡಾಯಗೊಳಿಸಿರುವ ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್​ ರಾಮಫೋಸಾ ಮಾಸ್ಕ್​ ಧರಿಸುವ ಬಗೆ ತಿಳಿಸಲು ಹೋಗಿ ಭಾರಿ ಫಜೀತಿಗೆ ಒಳಗಾದರು.

ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋ ತುಣುಕಿನಲ್ಲಿ ಸಿರಿಲ್​ ರಾಮಫೋಸಾ ಅವರು ಮಾಸ್ಕ್​ ಅನ್ನು ಬಲಗಿವಿಗೆ ಸಿಕ್ಕಿಸಿಕೊಳ್ಳಲು ಪರದಾಡುತ್ತಾ, ತಮ್ಮ ಕಣ್ಣನ್ನೇ ಮುಚ್ಚಿಕೊಂಡು ಭಾರಿ ಮುಜುಗರಕ್ಕೆ ಒಳಗಾಗಿದ್ದಾರೆ.

ಈ ವಿಡಿಯೋ ತುಣುಕಿನೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಮೀಮ್​ಗಳನ್ನು ಹಾಕಿರುವ ಕೆಲವರು, ಇದುವರೆಗೂ ನಾವು ತಪ್ಪುತಪ್ಪಾಗಿ ಮಾಸ್ಕ್​ ಧರಿಸುತ್ತಿದ್ದೆವು ಎಂಬುದು ಈಗ ಸ್ಪಷ್ಟವಾಯಿತು. ಇದನ್ನು ತಿಳಿಸಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು ಅಧ್ಯಕ್ಷರೇ ಎಂಬ ಸಂದೇಶಗಳನ್ನು ಹಾಕಲಾರಂಭಿಸಿದ್ದಾರೆ.

ಇಂಥ ಟೀಕೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿರುವ ಸಿರಿಲ್​ ರಾಮಫೋಸಾ, ನನ್ನ ಪರದಾಟವನ್ನು ನೋಡಿ ಅಪಹಾಸ್ಯ ಮಾಡಿ ನಕ್ಕ ಎಲ್ಲರಿಗೂ ಒಂದು ವಿಷಯ ತಿಳಿಸಲು ಬಯಸುತ್ತೇನೆ. ಮಾಸ್ಕ್​ ಧರಿಸುವ ಬಗೆಯನ್ನು ತಿಳಿಸಿಕೊಡಲು ನಾನು ಪ್ರತ್ಯೇಕ ಟಿವಿ ಚಾನಲ್​ ಆರಂಭಿಸುತ್ತಿದ್ದೇನೆ. ನೀವೆಲ್ಲರೂ ಅದರ ಸದಸ್ಯತ್ವ ಪಡೆದುಕೊಳ್ಳಿ ಎಂದು ತಮಾಷೆ ಮಾಡಿದ್ದಾರೆ.

ಮುಂದಿನ ತಿಂಗಳಿಂದ ಸಡಿಲ: ಮಾ.26ರಿಂದ ದಕ್ಷಿಣ ಆಫ್ರಿಕಾದಲ್ಲಿ ಜಾರಿಯಲ್ಲಿರುವ ಲಾಕ್​ಡೌನ್​ ಅನ್ನು ಮೇ ತಿಂಗಳಿನಿಂದ ಸಡಿಲಗೊಳಿಸುವುದಾಗಿ ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್​ ರಾಮಫೋಸಾ ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಇದುವರೆಗೂ 4,200 ಜನರಿಗೆ ಮಾತ್ರವೇ ಕರೊನಾ ಸೋಂಕು ತಗುಲಿದ್ದು, ಅವರೆಲ್ಲರೂ ಚೇತರಿಕೆಯ ಹಾದಿಯಲ್ಲಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net