

ಬೆಂಗಳೂರು: ಕಾಂಗ್ರೆಸ್‌ನಲ್ಲಿ ಸಿಎಂ ಅಧಿಕಾರ ಹಂಚಿಕೆಯ ಕಾಲ ಸನ್ನಿಹಿತವಾಗುವುದರೊಳಗೆ ಪರಿಸ್ಥಿತಿ ಬಿಗಡಾಯಿಸುವ ಲಕ್ಷಣ ಗೋಚರಿಸಲಾರಂಭಿಸಿವೆ. ಕಾಂಗ್ರೆಸ್‌ನಲ್ಲಿ ವ್ಯೂಹ ರಚಿಸುವ ಬಂಡೆಯೊಂದು ಈಗಾಗಲೇ ಸದ್ದು ಮಾಡುತ್ತಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸೂಚ್ಯವಾಗಿ ಎಚ್ಚರಿಸಿದ್ದಾರೆ.
ರಾಜ್ಯ ಬಿಜೆಪಿಯ ಮುಕ್ಕಾಲು ಪಾಲು ನಾಯಕರು ಬಿಜೆಪಿಯ ಈಗಿನ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಲೆದಂಡಕ್ಕಾಗಿ ವ್ಯೆಹ ರಚನೆಯಲ್ಲಿ ತೊಡಗಿದ್ದಾರೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ವಿಜಯೇಂದ್ರ, ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಸುದೀರ್ಘ ಸಂದೇಶ ಹಂಚಿಕೊಂಡಿದ್ದಾರೆ.
ಭಾರತದ ರಾಜಕೀಯ ಭೂಪಮಟ್ಟದಲ್ಲಿ ಮಾಸಿ ಹೋಗುತ್ತಿರುವ ಕಾಂಗ್ರೆಸ್ ಪಕ್ಷ ಅಧಿಕಾರ ಕಬಳಿಸುವುದಷ್ಟೇ ಕೇಂದ್ರೀಕರಿಸಿದೆ. ಮುಖ್ಯಮಂತ್ರಿಯಾಗುವ ವೇಳೆ ಡಿ.ಕೆ.ಶಿವಕುಮಾರ್ ಅವರೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆ ಬದಿಗೊತ್ತಿ, ಹೈಕಮಾಂಡ್ ಸೂತ್ರ ಧಿಕ್ಕರಿಸುವ ನಿಮ್ಮ (ಸಿದ್ದರಾಮಯ್ಯ) ತಂತ್ರದ ಜಾಡು ಹಿಡಿದಿರುವ ನಿಮ್ಮ ವಿರೋಧಿ ಬಣ ಸುಮ್ಮನೆ ಕುಳಿತಿಲ್ಲ.
ಸುಳ್ಳು ಭರವಸೆಗಳು, ಆಮಿಷಗಳ ಬಲೆ ಹೆಣೆದು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ದಕ್ಕಿಸಿಕೊಂಡಿದೆ. ಲೋಕಸಭೆ ಚುನಾವಣೆ ನಂತರ ಈ ಟೊಳ್ಳು ಬಲೆಯನ್ನು ಜನರೇ ತುಂಡರಿಸಲಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಬಣ ರಾಜಕೀಯ ಕಿತ್ತಾಟದ ಬಣ್ಣ ಶೀಘ್ರದಲ್ಲೇ ಬಯಲಿಗೆ ಬರಲಿದೆ ಎಂದು ಬಿ.ವೈ.ವಿಜಯೇಂದ್ರ ಛೇಡಿಸಿದ್ದಾರೆ.
ಭಾರತೀಯ ಜನತಾ ಪಕ್ಷ ತತ್ವ, ಸಿದ್ಧಾಂತ ಆಧರಿಸಿದ ಶಿಸ್ತಿನ ಪಕ್ಷ. ಕಳೆಯಿಲ್ಲದೆ ಬೆಳೆದು ನಿಂತಿರುವ ಸಮೃದ್ಧ ತೋಟ. ಆದರೆ ಕಾಂಗ್ರೆಸ್‌ನಲ್ಲಿರುವ ಪಾರ್ಥೇನಿಯಂ ಗಿಡಗಳು, ಅಧಿಕಾರಕ್ಕಾಗಿ ಹಪಾಹಪಿಸುವ ಕಳ್ಳಿ ಗಿಡಗಳಾವುವೂ ಬಿಜೆಪಿಯಲ್ಲಿ ತಲೆ ಎತ್ತಲು ಸಾಧ್ಯವಿಲ್ಲ. ತಲೆ ಎತ್ತಲು ಹೋದರೆ ಅದಕ್ಕೆ ಮದ್ದು ನೀಡುವಷ್ಟು ಪಕ್ಷದ ವರಿಷ್ಠರ ಮಂಡಳಿಯು ಸಶಕ್ತವಾಗಿದೆ ಎಂದಿದ್ದಾರೆ.
ದೀಪ ಆರುವ ಮುನ್ನ ಜೋರಾಗಿ ಹೊತ್ತಿ ಉರಿಯುತ್ತದೆ, ಕಾಲವೇ ನಿಮಗೆ ಉತ್ತರಿಸಲಿದೆ. ಯಾರು ಯಾರ ವಿರುದ್ಧ ಮುಗಿಬೀಳುತ್ತಾರೆ ?. ಯಾರು ಎಲ್ಲಿರುತ್ತಾರೆ ? ಎಂಬುದನ್ನು ಕೆಲವೇ ದಿನಗಳು ಕಾದು ನೋಡಿ. ಕಾಂಗ್ರೆಸ್ ಪಡಸಾಲೆಯಲ್ಲೇ ಸಿದ್ದರಾಮಯ್ಯ ಅವರಿಗೆ ಉತ್ತರ ಸಿಗಲಿದೆ ಎಂದು ಬಿ.ವೈ.ವಿಜಯೇಂದ್ರ ಪ್ರತ್ಯುತ್ತರಿಸಿದ್ದಾರೆ.