

ಸೊರಬ: ತಾಲೂಕಿನಲ್ಲಿ ಮಳೆ ಬಿಟ್ಟು ಬಿಟ್ಟು ಜೋರಾಗಿ ಬರುತ್ತಿದ್ದು ಆಗಾಗ ಬಿಸಿಲು ಕಾಣಿಸಿಕೊಳ್ಳುತ್ತಿದೆ. ಆದರೆ ಮನೆಗಳ ಗೋಡೆ ಕುಸಿತ ಮತ್ತು ಮರಗಳು ಧರೆಗೆ ಉರುಳುವುದು ಮುಂದುವರಿದಿದೆ.
ಜಡೆ ಹೋಬಳಿಯಲ್ಲಿ ವರದಾ ನದಿ ಪಾತ್ರದ ಜಮೀನುಗಳು ಮುಳುಗಡೆಯಾಗಿದ್ದು ಅಡಕೆ, ಬಾಳೆ ತೋಟಗಳು ಜಲಾವೃತವಾಗಿವೆ. ಬಂಕಸಾಣದ ಬಳಿ ವರದಾ ಮತ್ತು ದಂಡಾವತಿ ಸಂಗಮ ಸ್ಥಳದಲ್ಲಿ ನೀರಿನ ಪ್ರವಾಹ ಹೆಚ್ಚಾಗಿ ನದಿಯಲ್ಲಿರುವ ಹೊಳೆಲಿಂಗೇಶ್ವರ ಮಂಟಪ ಮುಳುಗಿದೆ. ತುಂಬ್ರಿಕೊಪ್ಪ ಹಾಗೂ ಹೊಸಕೊಪ್ಪ ಗ್ರಾಮದ ಮಧ್ಯ ಭಾಗದಲ್ಲಿ ಜಮೀನುಗಳು ಜಲಾವೃತವಾಗಿವೆ. ಹೊಸಕೊಪ್ಪ ಗ್ರಾಮದ ಕೆಲ ಮನೆಗಳಿಗೆ ನೀರು ನುಗ್ಗಿದೆ. ಬಂಕಸಾಣ ಬಳಿ ವರದಾನದಿ ಪ್ರವಾಹಕ್ಕೆೆ ಸಮಾಧಾನ ಮಠ ಹಾಗೂ ಲಕ್ಕವಳ್ಳಿ ಜೈನ ಮಠ ಜಲಾವೃತ ವಾಗಿದೆ. ತಹಸೀಲ್ದಾರ್ ಮಂಜುಳಾ ಹೆಗಡಾಳ್ ಜಡೆ ಹೋಬಳಿಯ ನೆರೆ ಪೀಡಿತ ಪ್ರದೇಶಗಳಿಗೆ ಭೆೇಟಿ ನೀಡಿ ಪರಿಶೀಲಿಸಿದರು.
ಬಂಕಸಾಣ ಗಾಮದ ಗೌರಮ್ಮ ಅವರ ವಾಸದ ಮನೆ, ಕುಪ್ಪಗಡೆ ಗ್ರಾಮದ ದ್ಯಾವಮ್ಮ ಅವರ ಮನೆಗೋಡೆ ಹಾಗೂ ಶ್ರೀನಿವಾಸ ಹೆಬ್ಬಾರ್ ಅವರ ಮನೆಗೋಡೆ ಬಿದ್ದಿದೆ. ತವನಂದಿ ಗ್ರಾಮದ ಭಾಗೀರಥಿ, ಉದ್ರಿ ಗ್ರಾಮದ ಮಂಜುನಾಥ ಹಾಗೂ ಗುಡುಗಿನಕೊಪ್ಪ ಗ್ರಾಮದ ಲಕ್ಷ್ಮೀ ಅವರ ಮನೆ ಬಿದ್ದಿದೆ. ನಗವಾಡಿ ಗ್ರಾಮದ ಸುಮೆರಾಬಿ ಅವರ ವಾಸದ ಮನೆಗೋಡೆ, ಮಾವಲಿ ಗ್ರಾಮದ ರುದ್ರಪ್ಪ ಗೌಡ ಅವರ ಮನೆಯ ಗೋಡೆ, ಕವಡಿ ಗ್ರಾಮದ ಪರುಶುರಾಮ ಮನೆ ಭಾಗಶಃ ಹಾನಿಯಾಗಿದೆ. ಈ ಕುಟುಂಬದ ಮೂವರನ್ನು ಬೇರೊಂದು ಮನೆಗೆ ತೆರಳಲು ತಿಳಿಸಲಾಗಿದೆ.