

Sofiya Qureshi : ಕರ್ನಲ್ ಸೋಫಿಯಾ ಖುರೇಷಿ... ಆಪರೇಷನ್ ಸಿಂಧೂರ ಕಾರ್ಯಾಚರಣೆ ಸಮಯದಲ್ಲಿ ದೇಶಾದ್ಯಂತ ಪ್ರಸಿದ್ಧವಾದ ಹೆಸರಿದು. ಸೋಫಿಯಾ ಅವರು ಕಾಲಕಾಲಕ್ಕೆ ಆಪರೇಷನ್ ಸಿಂಧೂರ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡುತ್ತಿದ್ದರು. ಇದರಿಂದಾಗಿ, ಅವರ ಹೆಸರು ಜನಪ್ರಿಯವಾಯಿತು. ಮಿಲಿಟರಿ ವ್ಯಾಯಾಮದಲ್ಲಿ ಭಾರತೀಯ ಸೇನಾ ತಂಡವನ್ನು ಮುನ್ನಡೆಸಿದ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಸೋಫಿಯಾ ಪಾತ್ರರಾಗಿದ್ದಾರೆ. 2016ರಲ್ಲಿ 'ಎಕ್ಸರ್ಸೈಸ್ ಫೋರ್ಸ್ 18' ನಲ್ಲಿ ಭಾರತೀಯ ತಂಡವನ್ನು ಮುನ್ನಡೆಸಿದರು. ಇದು ಭಾರತ ಕೈಗೊಂಡ ಅತಿದೊಡ್ಡ ವಿದೇಶಿ ಮಿಲಿಟರಿ ಕವಾಯತು.
ಅಂದಹಾಗೆ, ಸೋಫಿಯಾ ವಿಷಯವನ್ನು ನಾವೀಗ ಏಕೆ ಪ್ರಸ್ತಾಪಿಸುತ್ತಿದ್ದೇವೆ ಅಂದರೆ, ಮಧ್ಯಪ್ರದೇಶದ ಬುಡಕಟ್ಟು ಕಲ್ಯಾಣ ಸಚಿವ ಕುನ್ವರ್ ವಿಜಯ್ ಷಾ, ಸೋಫಿಯಾ ಅವರ ವಿರುದ್ಧ ಕೋಮುವಾದಿ ಹೇಳಿಕೆ ನೀಡುವ ಮೂಲಕ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಪ್ರಮುಖ ಸೇನಾ ಪ್ರದೇಶವಾದ ಮೋವ್ ಬಳಿಯ ಮನ್ಪುರ್ ಪಟ್ಟಣದಲ್ಲಿ ನಡೆದ ಸರ್ಕಾರಿ ಸಮಾರಂಭದಲ್ಲಿ ಮಾತನಾಡಿದ ವಿಜಯ್ ಷಾ, ಆಪರೇಷನ್ ಸಿಂಧೂರ ಬಗ್ಗೆ ಪ್ರಸ್ತಾಪಿಸಿ, ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಪ್ರಧಾನಿ ಮೋದಿ, ಅದೇ ಸಮುದಾಯದ ಸಹೋದರಿಯನ್ನು ಕಳುಹಿಸಿದ್ದಾರೆ ಎಂದು ಹೇಳಿದರು.
ಮೋದಿ ಜಿ ಸಮಾಜಕ್ಕಾಗಿ ಶ್ರಮಿಸುತ್ತಿದ್ದಾರೆ. ಪಹಲ್ಗಾಮ್‌ನಲ್ಲಿ ನಮ್ಮ ಹೆಣ್ಣುಮಕ್ಕಳನ್ನು ವಿಧವೆಯರನ್ನಾಗಿ ಮಾಡಿದವರಿಗೆ, ಪಾಠ ಕಲಿಸಲು ನಾವು ಅವರ ಸ್ವಂತ ಸಹೋದರಿಯನ್ನೇ ಕಳುಹಿಸಿದ್ದೇವೆ ಎಂದು ಷಾ ಹೇಳಿದರು. ಈ ವೇಳೆ ಅಲ್ಲಿದ್ದ ಪ್ರೇಕ್ಷಕರು ಚಪ್ಪಾಳೆಯ ಸುರಿಮಳೆಗೈದರು.
ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಪ್ರವಾಸಿಗರ ಧರ್ಮವನ್ನು ಗುರುತಿಸಿ, ಗುಂಡು ಹಾರಿಸಲು ದೈಹಿಕ ತಪಾಸಣೆ ನಡೆಸಿದ್ದನ್ನು ಪ್ರಸ್ತಾಪಿಸಿದ ಷಾ, ಈಗ, ಮೋದಿಜಿ ಕೂಡ ಹಾಗೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಅವರು ತಮ್ಮ ಸಮಾಜದ ಒಬ್ಬ ಸಹೋದರಿಯನ್ನು ಕಳುಹಿಸಿದರು. ನೀವು ನಮ್ಮ ಸಹೋದರಿಯರನ್ನು ವಿಧವೆಯರನ್ನಾಗಿ ಮಾಡಿದರೆ, ನಿಮ್ಮ ಸಹೋದರಿ ಬಂದು ನಿಮ್ಮ ಬಟ್ಟೆ ಬಿಚ್ಚುತ್ತಾರೆ. ಮತ್ತು ಮೋದಿ ಭಾರತವು ಅವರ ಸ್ವಂತ ಮನೆಯಲ್ಲೇ ಅವರನ್ನು ಹೊಡೆದು ಹಾಕುತ್ತದೆ ಎಂದು ಷಾ ಹೇಳಿದ್ದರು.
ಅಂದಹಾಗೆ, ಭಾರತೀಯ ಸೇನೆಯಲ್ಲಿ ವಿಶಿಷ್ಟ ದಾಖಲೆಯನ್ನು ಹೊಂದಿರುವ ಮತ್ತು ಮಿಲಿಟರಿ ಹಿನ್ನೆಲೆಯ ಕುಟುಂಬಕ್ಕೆ ಸೇರಿದ ಕರ್ನಲ್ ಸೋಫಿಯಾ ಖುರೇಷಿ, ಆಪರೇಷನ್ ಸಿಂಧೂರ ಅಡಿಯಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳ ವಿರುದ್ಧ ಭಾರತ ನಡೆಸಿದ ಮಿಲಿಟರಿ ದಾಳಿಯಲ್ಲಿ ಭಾಗವಹಿಸಿರಲಿಲ್ಲ. ಆದರೆ, ವಿಂಗ್ ಕಮಾಂಡರ್ ವ್ಯೂಮಿಕಾ ಸಿಂಗ್ ಮತ್ತು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರೊಂದಿಗೆ ಸೋಫಿಯಾ ಅವರು ನವದೆಹಲಿಯಲ್ಲಿ ಮಾಧ್ಯಮಗೋಷ್ಠಿಗಳನ್ನು ಉದ್ದೇಶಿಸಿ ಮಾತನಾಡಿದರು.
ಇದೀಗ ಷಾ ಹೇಳಿಕೆಗಳು ವಿವಾದದ ಸ್ವರೂಪ ಪಡೆದುಕೊಂಡಿದ್ದು, ಕಾಂಗ್ರೆಸ್ ಕಿಡಿಕಾರಿದೆ. ಸೋಫಿಯಾ ಖುರೇಷಿಯನ್ನು ಭಯೋತ್ಪಾದಕರ ಸಹೋದರಿ ಎಂದು ಸಂಬೋಧಿಸುವುದರ ಅರ್ಥವೇನು? ಎಂದು ಕಾಂಗ್ರೆಸ್ ನಾಯಕರು ಕೋಪ ವ್ಯಕ್ತಪಡಿಸಿದ್ದಾರೆ. ಭಾರತೀಯರು ಸೋಫಿಯಾ ಖುರೇಷಿಯ ಬಗ್ಗೆ ಹೆಮ್ಮೆಪಡುತ್ತಿದ್ದರೆ, ಇಂತಹ ಸಮಯದಲ್ಲಿ ಅವರ ಬಗ್ಗೆ ಇಂತಹ ಹೇಳಿಕೆಗಳನ್ನು ನೀಡುವುದು ನಾಚಿಕೆಗೇಡಿನ ಸಂಗತಿ ಎಂದು ಕಾಂಗ್ರೆಸ್ ಕಿಡಿಕಾರಿದೆ. ಪ್ರಧಾನಿ ಮೋದಿಗೆ ಆಪ್ತರು ಎಂದು ಹೇಳಿಕೊಳ್ಳುವ ವಿಜಯ್ ಷಾ ತಕ್ಷಣ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ.
ವಿವಾದದ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ವಿಜಯ್ ಷಾ, ತಮ್ಮ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಕೆಲವರು ನನ್ನ ಹೇಳಿಕೆಯನ್ನು ಬೇರೆಯದೇ ಸಂದರ್ಭದಲ್ಲಿ ತೆಗೆದುಕೊಳ್ಳುತ್ತಿದ್ದಾರೆ. ನಾನು ಅದನ್ನು ಹಾಗೆ ಅರ್ಥೈಸಲಿಲ್ಲ. ಅವರು (ಕರ್ನಲ್ ಖುರೇಷಿ) ನನ್ನ ಸಹೋದರಿ ಮತ್ತು ಅವರು ಭಯೋತ್ಪಾದಕರ ಕೃತ್ಯಗಳಿಗೆ ಪ್ರತೀಕಾರ ತೀರಿಸಿಕೊಂಡಿದ್ದಾರೆ ಎಂದು ಹೇಳಿದರು.
ಅಂದಹಾಗೆ, 1990 ರಿಂದ ಸತತ ಎಂಟು ಬಾರಿ ವಿಜಯ್ ಷಾ ಶಾಸಕರಾಗಿದ್ದಾರೆ. 2019-20ರಲ್ಲಿ ಕಾಂಗ್ರೆಸ್ ಮಧ್ಯಪ್ರದೇಶವನ್ನು ಆಳಿದ ಅವಧಿಯನ್ನು ಹೊರತುಪಡಿಸಿ, 2003 ರಿಂದ ಅವರು ರಾಜ್ಯ ಸಚಿವರಾಗಿದ್ದಾರೆ. ಷಾ ಅವರು ವಿವಾದಗಳಿಗೆ ಹೊಸಬರಲ್ಲ, ಅದರಲ್ಲೂ ವಿಶೇಷವಾಗಿ ಮಹಿಳೆಯರು ಅವರ ಟೀಕೆಗೆ ಗುರಿಯಾಗಿದ್ದಾರೆ. 2013ರಲ್ಲಿ ಆಗಿನ ಮುಖ್ಯಮಂತ್ರಿ ಮತ್ತು ಪ್ರಸ್ತುತ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರ ಪತ್ನಿ ಸಾಧನಾ ಸಿಂಗ್ ಚೌಹಾಣ್ ಬಗ್ಗೆ ಅನುಚಿತ ಹೇಳಿಕೆಗಳನ್ನು ನೀಡಿ ಸುದ್ದಿಯಾಗಿದ್ದರು. ಈ ಸಂದರ್ಭದಲ್ಲಿ ಷಾ ಅವರನ್ನು ರಾಜೀನಾಮೆ ನೀಡುವಂತೆ ಒತ್ತಾಯಿಸಲಾಗಿತ್ತು. ರಾಜೀನಾಮೆ ಸ್ವೀಕರಿಸಿದ ಬಳಿಕ ಅವರನ್ನು ಮತ್ತೆ ನೇಮಕ ಮಾಡಿಕೊಳ್ಳಲಾಯಿತು. ಅದಕ್ಕೆ ಕಾರಣ ಪಶ್ಚಿಮ ಮಧ್ಯಪ್ರದೇಶದಲ್ಲಿ ಪಕ್ಷದ ಬುಡಕಟ್ಟು ಮತಗಳ ಮೇಲೆ ಪರಿಣಾಮ ಬೀರುತ್ತದೆ ಎಂಬ ಆತಂಕ ಬಿಜೆಪಿಗಿತ್ತು. (ಏಜೆನ್ಸೀಸ್)