

ಶಿವಮೊಗ್ಗ: ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಬಹುದು. ಇಲ್ಲಿ ಗೆಲುವು ಮುಖ್ಯ ಎಂಬುದಕ್ಕಿಂತ ಸೋಲಿನಲ್ಲೂ ಗೆಲುವಿದೆ ಎಂಬ ಭಾವನೆ ಮುಖ್ಯ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಅಭಿಪ್ರಾಯಪಟ್ಟರು.
ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಪೌರ ಕಾರ್ಮಿಕರಿಗೆ ಏರ್ಪಡಿಸಿದ್ದ ಅಥ್ಲೆಟಿಕ್ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡಾ ಭಾವ ವೃದ್ಧಿಯಿಂದ ಸಹಕಾರ ಗುಣವೂ ಹೆಚ್ಚುತ್ತದೆ ಎಂದು ಹೇಳಿದರು.
ಪೌರ ಕಾರ್ಮಿಕರ ಅನುಕೂಲಕ್ಕಾಗಿ ಕಲ್ಯಾಣ ಭವನ ನಿರ್ಮಾಣ ಕಾರ್ಯ ದೀರ್ಘ ಕಾಲದಿಂದ ಬಾಕಿ ಉಳಿದಿದೆ. ಈ ಬಗ್ಗೆ ಬೇಸರವೂ ಇದೆ. ಪೌರ ಕಾರ್ಮಿಕರ ಗೃಹಭಾಗ್ಯ ಯೋಜನೆ ಮೂಲಕ ಮನೆಗಳ ನಿರ್ಮಾಣವಾಗುತ್ತಿದೆ. ಆದರೆ ಗುತ್ತಿಗೆದಾರರ ಸಮಸ್ಯೆಯಿದೆ. ಹೀಗಾಗಿ ಕಾಮಗಾರಿ ಸ್ಥಗಿತವಾಗಿದೆ. ಇದಕ್ಕೆ ಶೀಘ್ರವೇ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಎನ್.ಗೋವಿಂದ ಮಾತನಾಡಿ, ಪ್ರತಿ ವರ್ಷವೂ ಅತ್ಯಂತ ವಿಜೃಂಭಣೆ ಮತ್ತು ಅರ್ಥಪೂರ್ಣವಾಗಿ ಪೌರ ಕಾರ್ಮಿಕರ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷವೂ ಅದ್ದೂರಿಯಾಗಿ ಆಚರಿಸಲಾಗುವುದು. ಶಾಸಕರ ಸಹಕಾರ ನಮಗೆ ಸಿಗುತ್ತಿರುವುದು ಖುಷಿಯ ಸಂಗತಿ ಎಂದು ಹೇಳಿದರು.
ಪಾಲಿಕೆ ಉಪ ಆಯುಕ್ತ ಲಿಂಗೇಗೌಡ, ಕಂದಾಯ ಅಧಿಕಾರಿ ವಿರೂಪಾಕ್ಷಪ್ಪ ಪೂಜಾರ್, ಸಂಘದ ಪ್ರದಾನ ಕಾರ್ಯದರ್ಶಿ ಮೋಹನ್‌ಕುಮಾರ್, ಉಪಾಧ್ಯಕ್ಷ ಕುಮಾರ್, ನಿರ್ದೇಶಕರಾದ ವಸಂತಕುಮಾರ್, ನಾಗೇಶ್, ಎಸ್.ಡಿ.ಮಂಜಣ್ಣ, ಲೋಹಿತ್ ಮುಂತಾದವರು ಈ ಸಂದರ್ಭದಲ್ಲಿದ್ದರು.